ಹುಣಸೂರು: ಲಿಬಿನ್ ಸಂಸ್ಥೆ ವತಿಯಿಂದ ತಾಲೂಕಿನ ಮಹಿಳೆಯರಿಗೆ ಮರಗೆಲಸ(ಕಾರ್ಪೆಂಟರಿಂಗ್) ತರಬೇತಿ ಆರಂಭಿಸಲಾಗುವುದೆಂದು ಸಂಸ್ಥೆಯ ಸಂಸ್ಥಾಪಕ ರಾಜ್‌ಕುಮಾರ್ ತಿಳಿಸಿದರು.
ನಗರದ ಪೋಸ್ಟ್ ಆಫೀಸ್ ರಸ್ತೆಯ ಸಂತಕ್ಸೇವಿಯರ್ ಚರ್ಚ್ ಆವರಣದಲ್ಲಿರುವ ಲೇಬನ್ ಟೈಲರಿಂಗ್ ತರಬೇತಿ ಸಂಸ್ಥೆಯಲ್ಲಿ ಬುಧವಾರ ತರಬೇತಿ ಪಡೆದ ಮಹಿಳೆಯರಿಗೆ ಪ್ರಮಾಣ ಪತ್ರ ವಿತರಿಸಿ ಮಾತನಾಡಿದರು.
ಪ್ರತಿಯೊಂದು ಕೆಲಸಕ್ಕೂ ಇಂದು ತರಬೇತಿ ಅದರಲ್ಲೂ ಕೌಶಲಾಧಾರಿತ ತರಬೇತಿ ಮುಖ್ಯವಾಗಿದೆ. ತಮ್ಮ ಸಂಸ್ಥೆಯು ಬೆಂಗಳೂರಿನಲ್ಲಿ ತರಬೇತಿ ಸಂಸ್ಥೆ ಆರಂಭಿಸಿ ಮಹಿಳೆಯರಿಗೆ ಟೈಲರಿಂಗ್, ಬ್ಯೂಟಿಷಿಯನ್ ಸೇರಿದಂತೆ ವಿವಿಧ ತರಬೇತಿ ನೀಡಲಾಗುತ್ತಿತ್ತು. ಕರೊನಾ ಸಂದರ್ಭದಲ್ಲಿ ಹುಣಸೂರಿನಲ್ಲಿ ಸಂಸ್ಥೆ ಆರಂಭಿಸಿ ಈವರೆಗೆ 7 ತಂಡಗಳಿಗೆ ತರಬೇತಿ ನೀಡಲಾಗಿದೆ. ಈ ಪೈಕಿ ಹಲವರಿಗೆ ಮೈಸೂರು ಸೇರಿದಂತೆ ಇತರೆಡೆ ಉದ್ಯೋಗ ಗಿಟ್ಟಿಸಿಕೊಂಡಿದ್ದಾರೆ. ಮತ್ತೆ ಕೆಲವರು ಮನೆಗಳಲ್ಲೇ ಟೈಲರಿಂಗ್ ವೃತ್ತಿ ನಡೆಸುವ ಮೂಲಕ ಆರ್ಥಿಕವಾಗಿ ಅಭಿವೃದ್ಧಿ ಹೊಂದುತ್ತಿದ್ದಾರೆ ಎಂದರು.
ಲೇಬನ್ ಸಂಸ್ಥೆಯ ಸಂಯೋಜಕಿ ಅಂಜಲಿನ್ ವೀಣಾ ಮಾತನಾಡಿ, ಪ್ರತಿ ಬ್ಯಾಚ್‌ನಲ್ಲಿ 35 ರಿಂದ 50 ಜನರಿಗೆ ತರಬೇತಿ ನೀಡಲಾಗುತ್ತಿದೆ. 1 ತಿಂಗಳಿನಿಂದ 4 ತಿಂಗಳವರೆಗೆ ತರಬೇತಿ ಪಡೆದುಕೊಂಡು ಸ್ವ ಉದ್ಯೋಗ ಅಥವಾ ಕಂಪನಿಗಳಲ್ಲಿ ಕೆಲಸ ಗಿಟ್ಟಿಸಬಹುದಾಗಿದ್ದು. ಸಂಸ್ಥೆ ವತಿಯಿಂದ ಎಲ್ಲ ಸಮುದಾಯದ ಮಹಿಳೆಯರಿಗೆ ಟೈಲರಿಂಗ್ ಮಾತ್ರವಲ್ಲದೆ ಫ್ಯಾಷನ್ ಡಿಸೈನಿಂಗ್ ತರಬೇತಿ, ಮಾರ್ಕೆಟಿಂಗ್ ಬಗ್ಗೆಯೂ ತಿಳಿಸಿಕೊಡಲಾಗುತ್ತದೆ. ಆಸಕ್ತ ಮಹಿಳೆಯರು ಇದರ ಸದ್ಬಳಕೆ ಮಾಡಿಕೊಳ್ಳುವಂತೆ ಮನವಿ ಮಾಡಿದರು.
ಟೈಲರಿಂಗ್ ಟೀಚರ್ ಗಾಯತ್ರಿ, ಸಂಸ್ಥೆಯ ನಿರ್ದೇಶಕ ಬಲವೇಂದ್ರ, ಫಾದರ್ ಜೇಮ್ಸ್ ಸೇರಿದಂತೆ ಗಣ್ಯರು ಹಾಗೂ ಮಹಿಳೆಯರು ಹಾಜರಿದ್ದರು. ಇದೇ ವೇಳೆ ಪ್ರವಾಸಕ್ಕಾಗಿ ಭಾರತಕ್ಕೆ ಆಗಮಿಸಿದ್ದ ಜರ್ಮನಿಯ 50ಕ್ಕೂ ಹೆಚ್ಚು ಜನರು ಟೈಲರಿಂಗ್ ತರಬೇತಿ ಪಡೆಯುತ್ತಿರುವ ಯುವತಿಯರೊಂದಿಗೆ ಸಂವಾದ ನಡೆಸಿದರು. ನಂತರ ಕನ್ನಡ, ಹಿಂದಿ ಹಾಡಿಗೆ ಕುಣಿದು ಸಂಭ್ರಮಿಸಿದರು.