ತುಮಕೂರು: ಕರೊನಾ ಮಹಾಮಾರಿ ವ್ಯಾಪಕವಾಗುತ್ತಿರುವ ಹಾಗೂ ರೋಗಿಗಳಿಗೆ ಗಂಭೀರವಾದ ಸಮಸ್ಯೆ ಎದುರಾಗದಂತೆ ತಾಲೂಕು ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲು ಜಿಲ್ಲಾಡಳಿತ ಮುಂದಾಗಿದೆ.
ಈಗಾಗಲೇ ಕೊರಟಗೆರೆ ತಾಲೂಕು ಆಸ್ಪತ್ರೆಯಲ್ಲಿ ರೋಗಲಕ್ಷಣಗಳಿದ್ದ 16 ಸೋಂಕಿತರಿಗೆ ಚಿಕಿತ್ಸೆ ನೀಡಲಾಗುತ್ತಿದ್ದು, ಶಿರಾ, ಮಧುಗಿರಿ, ಪಾವಗಡ, ತಿಪಟೂರು, ಚಿಕ್ಕನಾಯಕನಹಳ್ಳಿ ಆಸ್ಪತ್ರೆಗಳಲ್ಲಿಯೂ ಸಿದ್ಧತೆ ಮಾಡಿಕೊಳ್ಳಲಾಗಿದೆ.
ಜಿಲ್ಲೆಯಲ್ಲಿ ಇದುವರೆಗೂ 221 ಪ್ರಕರಣಗಳು ದೃಢಪಟ್ಟಿದ್ದು, ಇಲ್ಲಿಯವರೆಗೂ ಜಿಲ್ಲಾ ಕೋವಿಡ್ ಆಸ್ಪತ್ರೆಯಲ್ಲಿಯೇ ಚಿಕಿತ್ಸೆ ನೀಡಲಾಗುತ್ತಿದೆ, ಸೋಂಕಿತರ ಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಆಯಾ ತಾಲೂಕಿನಲ್ಲಿ ಅಗತ್ಯ ಸೇವೆ ನೀಡಲು ಜಿಲ್ಲಾಡಳಿತ ಮಾಸ್ಟರ್ ಪ್ಲ್ಯಾನ್ ಮಾಡಿದೆ.
ಜಿಲ್ಲೆಯಲ್ಲಿ ಸಕ್ರಿಯವಾಗಿರುವ 153 ಪ್ರಕರಣಗಳಲ್ಲಿ ಬಹುತೇಕರಿಗೆ ಯಾವುದೇ ರೋಗ ಲಕ್ಷಣಗಳಿಲ್ಲದೆ ಸಾಮಾನ್ಯರಂತೆಯೇ ಇದ್ದು, ಅವರೆಲ್ಲರಿಗೂ ರೋಗನಿರೋಧಕ ಶಕ್ತಿ ವೃದ್ಧಿಗಷ್ಟೇ ಮಾತ್ರೆ ನೀಡಲಾಗುತ್ತಿದೆ. ಹೆಚ್ಚಿನ ಚಿಕಿತ್ಸೆ ಅಗತ್ಯ ಕಾಣಿಸದ ಕಾರಣಕ್ಕೆ ಇಂತಹ ನಿರ್ಧಾರಕ್ಕೆ ಜಿಲ್ಲಾಡಳಿತ ಬಂದಿದೆ.
ಸವಾಲು ಸ್ವೀಕರಿಸಿದ ಆಸ್ಪತ್ರೆಗಳು: ಸೋಂಕಿತರ ಚಿಕಿತ್ಸೆಗೆ ಅಗತ್ಯವಾದ ಮೂಲಸೌಕರ್ಯಗಳನ್ನು ಜಿಲ್ಲೆಯ ಎಲ್ಲ ತಾಲೂಕು ಆಸ್ಪತ್ರೆಗಳು ಒದಗಿಸಿಕೊಂಡಿದ್ದು ಚಿಕಿತ್ಸೆ ನೀಡುವ ಸವಾಲು ಸ್ವೀಕರಿಸಿವೆ. ತಾಲೂಕು ಆಸ್ಪತ್ರೆಯಲ್ಲಿರುವ ವೈದ್ಯರು ಹಾಗೂ ಸಿಬ್ಬಂದಿಗೆ ವಿಶೇಷ ತರಬೇತಿ ನೀಡಲಾಗಿದೆ, ಅಗತ್ಯ ಔಷಧ, ಪಿಪಿಇ ಕಿಟ್, ಪೌಷ್ಟಿಕಾಂಶವಿರುವ ಆಹಾರ ಪೂರೈಸಲು ಜಿಲ್ಲಾ ಆರೋಗ್ಯ ಇಲಾಖೆ ಕ್ರಮಕೈಕೊಂಡಿದೆ.
ಐಸಿಯು ಅಗತ್ಯವಿದ್ರೆ ತುಮಕೂರಿಗೆ: ಸೋಂಕಿತರಿಗೆ ಹೆಚ್ಚಿನ ಚಿಕಿತ್ಸೆ, ವೆಂಟಿಲೇಟರ್ ಅಗತ್ಯವಿದ್ದರೆ ಮಾತ್ರ ಜಿಲ್ಲಾ ಕೋವಿಡ್ ಆಸ್ಪತ್ರೆಗೆ ಕರೆಸಿಕೊಳ್ಳಲು ನಿರ್ಧರಿಸಲಾಗಿದೆ. ಗಂಭೀರ ಸಮಸ್ಯೆಗಳಿಂದ ಬಳಲುತ್ತಿರುವವರಿಗೆ ಮಾತ್ರ ಹೆಚ್ಚಿನ ಚಿಕಿತ್ಸೆ ಅಗತ್ಯವಿದೆ.
20 ಕಡೆ ಪರೀಕ್ಷೆಗೆ ಅವಕಾಶ: ಈಗಾಗಲೇ ಜಿಲ್ಲೆಯ 20 ಕಡೆಗಳಲ್ಲಿ ಕರೊನಾ ಪರೀಕ್ಷೆ ಗಂಟಲು ದ್ರವ ಪಡೆಯಲು ಅವಕಾಶ ನೀಡಲಾಗಿದೆ, ಇದರ ಜತೆಗೆ ತುಮಕೂರು ಜಿಲ್ಲಾಸ್ಪತ್ರೆಯಲ್ಲಿಯೇ ಲ್ಯಾಬ್ ಕೂಡ ಇದ್ದು, ಶೀಘ್ರದಲ್ಲಿಯೇ ಪರೀಕ್ಷಾ ವರದಿ ಪಡೆಯಲು ಅನುಕೂಲವಾಗಲಿದೆ. ಇದರಿಂದ ಪ್ರಾಥಮಿಕ ಹಾಗೂ ದ್ವಿತೀಯ ಸಂಪರ್ಕದಲ್ಲಿರುವವರನ್ನು ಪತ್ತೆ ಮಾಡಿ ಕ್ವಾರಂಟೈನ್ ಮಾಡಲು ಸುಲಭವಾಗುವ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಅಗತ್ಯ ಕ್ರಮಕ್ಕೆ ಮುಂದಾಗಿದೆ.
ಎಲ್ಲ ತಾಲೂಕು ಆಸ್ಪತ್ರೆಯಲ್ಲಿಯೇ ಕರೊನಾ ಸೋಂಕಿತರಿಗೆ ಚಿಕಿತ್ಸೆ ನೀಡಲು ಆರಂಭಿಸಲಾಗಿದೆ. ಜಿಲ್ಲೆಯ ಶೇ.98 ಸೋಂಕಿತರಿಗೆ ರೋಗಲಕ್ಷಣಗಳೇ ಇಲ್ಲ. ಹಾಗಾಗಿ, ಅವರಿಗೆ ರೋಗ ನಿರೋಧಕ ಶಕ್ತಿ ಹೆಚ್ಚಿಸಲು ಮಾತ್ರೆಗಳು, ಪೌಷ್ಟಿಕ ಆಹಾರ ನೀಡಲಾಗುತ್ತಿದ್ದು ಅದನ್ನು ತಾಲೂಕು ಆಸ್ಪತ್ರೆಯಲ್ಲಿಯೇ ಮಾಡಲು ಸಾಧ್ಯವಿದೆ. ಡಾ.ನಾಗೇಂದ್ರಪ್ಪ ಜಿಲ್ಲಾ ಆರೋಗ್ಯಾಧಿಕಾರಿ, ತುಮಕೂರು