ಜಿಲ್ಲೆ

ಮುಂದುವರಿದ ಮಹಾ ಲಿಂಕ್

ಉಡುಪಿ/ಮಂಗಳೂರು: ಕರೊನಾ ಮತ್ತು ಮಹಾರಾಷ್ಟ್ರದ ನಂಟು ಉಡುಪಿ ಜಿಲ್ಲೆಯಲ್ಲಿ ಮಂಗಳವಾರವೂ ಮುಂದುವರಿಯಿತು. ಆದರೆ, ದ.ಕ.ಜಿಲ್ಲೆಯಲ್ಲಿ ಒಂದು ಪ್ರಕರಣವೂ ಪತ್ತೆಯಾಗದೆ, ಜನ ನಿಟ್ಟುಸಿರುಬಿಟ್ಟರು.

ಉಡುಪಿಯಲ್ಲಿ ಮೂವರಿಗೆ ಕರೊನಾ ಪಾಸಿಟಿವ್ ಪ್ರಕರಣ ಪತ್ತೆಯಾಗಿದೆ. ಮೂವರೂ ಮಹಾರಾಷ್ಟ್ರದಿಂದ ಬಂದವರು ಎಂದು ಜಿಲ್ಲಾಧಿಕಾರಿ ಜಿ.ಜಗದೀಶ್ ತಿಳಿಸಿದ್ದಾರೆ. 27 ವರ್ಷದ ಮಹಿಳೆ, 30 ವರ್ಷದ ಪುರುಷ ಹಾಗೂ 9 ವರ್ಷದ ಬಾಲಕನಿಗೆ ಕರೊನಾ ಸೋಂಕು ತಗುಲಿದೆ. ಮಹಾರಾಷ್ಟ್ರದಿಂದ ಬಂದಿದ್ದ ಇವರು, ಕ್ವಾರಂಟೈನ್‌ನಲ್ಲಿದ್ದರು. ಸದ್ಯ ಇವರ ಪ್ರಾಥಮಿಕ ಮತ್ತು ದ್ವಿತೀಯ ಹಂತದ ಸಂಪರ್ಕದಲ್ಲಿದ್ದವರನ್ನು ಪತ್ತೆ ಮಾಡಲಾಗುತ್ತಿದೆ.

ಜಿಲ್ಲೆಯಲ್ಲಿ ನಾಲ್ವರು ಪೊಲೀಸರಿಗೆ ಕರೊನಾ ಪತ್ತೆಯಾಗಿರುವ ಹಿನ್ನೆಲೆಯಲ್ಲಿ, ಪ್ರಾಥಮಿಕ ಮತ್ತು ದ್ವಿತೀಯ ಹಂತದ ಸಂಪರ್ಕ ಹೊಂದಿದ ಪೊಲೀಸರು ಮತ್ತು ಕುಟುಂಬ ಸದಸ್ಯರನ್ನು ಸರ್ಕಾರಿ ಕ್ವಾರಂಟೈನ್‌ಗೆ ಒಳಪಡಿಸಲಾಗಿದೆ. ಎಷ್ಟು ಮಂದಿ ಪೊಲೀಸರನ್ನು ಕ್ವಾರಂಟೈನ್‌ಗೆ ಒಳಪಡಿಸಲಾಗಿದೆ ಎಂಬ ಮಾಹಿತಿಯನ್ನು ಪೊಲೀಸ್ ಇಲಾಖೆ ತಿಳಿಸಿಲ್ಲ. ಜಿಲ್ಲೆಯಲ್ಲಿ ಒಟ್ಟು ಸೋಂಕಿತರ ಸಂಖ್ಯೆ 111ಕ್ಕೆ ಏರಿಕೆಯಾಗಿದ್ದು, ಮೂವರು ಗುಣಮುಖ, ಒಬ್ಬರು ಸಾವನ್ನಪ್ಪಿರುವುದು ಹೊರತುಪಡಿಸಿ 107 ಸಕ್ರಿಯ ಪ್ರಕರಣಗಳಿವೆ.

ಜಿಪಂ ಅಧಿಕಾರಿಗಳ ಸ್ವಾಬ್ ಟೆಸ್ಟ್: ಜಿಲ್ಲಾ ಪಂಚಾಯಿತಿ ಸಿಬ್ಬಂದಿಗೆ ಕರೊನಾ ಸೋಂಕು ತಗುಲಿರುವ ಹಿನ್ನೆಲೆಯಲ್ಲಿ ಮಂಗಳವಾರ 20ಕ್ಕೂ ಅಧಿಕ ಮಂದಿ ಅಧಿಕಾರಿಗಳು ಕೋವಿಡ್-19 ಪರೀಕ್ಷೆಗೆ ಒಳಪಟ್ಟರು. ಜಿಪಂ ಉಪ ಕಾರ್ಯದರ್ಶಿ, ಮುಖ್ಯ ಲೆಕ್ಕಾಧಿಕಾರಿ, ಯೋಜನಾಧಿಕಾರಿ, ಯೋಜನಾ ನಿರ್ದೇಶಕರು ಮತ್ತು ಸಿಬ್ಬಂದಿ, ವಾಹನ ಚಾಲಕರು ಗಂಟಲು ದ್ರವ ಮಾದರಿ ನೀಡಿದರು. ಜಿಪಂ ಕಚೇರಿಯನ್ನು ಮೊದಲ ಹಂತದಲ್ಲಿ ಸ್ಯಾನಿಟೈಸ್ ಮಾಡಲಾಗಿದೆ. ಇನ್ನೊಂದು ಹಂತದಲ್ಲಿ ಮತ್ತೆ ಸ್ಯಾನಿಟೈಸ್ ಮಾಡಲಾಗುವುದು. ಕಚೇರಿ ಬಂದ್ ಮಾಡುವುದಿಲ್ಲ. ಕೆಲಸ ಕಾರ್ಯ ಮುಂದುವರಿಯುತ್ತಿದೆ ಎಂದು ಉಪ ಕಾರ್ಯದರ್ಶಿ ಕೆ.ಆರ್.ಫಡ್ನೇಕರ್ ವಿಜಯವಾಣಿಗೆ ತಿಳಿಸಿದ್ದಾರೆ.

ಠಾಣೆಗಳು ಇಂದು ಪುನರಾರಂಭ ನಿರೀಕ್ಷೆ: ಸಿಬ್ಬಂದಿಯಲ್ಲಿ ಕರೊನಾ ಸೋಂಕು ಕಂಡುಬಂದ ಹಿನ್ನೆಲೆಯಲ್ಲಿ ಸೀಲ್ ಡೌನ್ ಮಾಡಲಾಗಿದ್ದ ಹೆಬ್ರಿ, ಅಜೆಕಾರು, ಕಾರ್ಕಳ ನಗರ, ಗ್ರಾಮಾಂತರ, ವೃತ್ತ ನೀರೀಕ್ಷಕರತ ಕಚೇರಿ ಮತ್ತು ಬ್ರಹ್ಮಾವರ ಪೊಲೀಸ್ ಠಾಣೆಗಳಲ್ಲಿ ಬಹುತೇಕ ಸ್ಯಾನಿಟೈಸ್ ಪ್ರಕ್ರಿಯೆ ಪೂರ್ಣಗೊಂಡಿದೆ. ಬ್ರಹ್ಮಾವರ ಪೊಲೀಸರು ಕ್ವಾರಂಟೈನ್‌ನಲ್ಲಿ ಇರುವುದರಿಂದ ಕೋಟ ಪೊಲೀಸರಿಗೆ ಬ್ರಹ್ಮಾವರ ಠಾಣೆ ಜವಾಬ್ದಾರಿ ನೀಡಲಾಗಿದೆ. ಬುಧವಾರ ಅಥವಾ ಗುರುವಾರ ಈ ಠಾಣೆಗಳು ಪುನರಾರಂಭಗೊಳ್ಳುವ ಸಾಧ್ಯತೆ ಇದೆ. ಈ ಬಗ್ಗೆ ವಿಜಯವಾಣಿಗೆ ಪ್ರತಿಕ್ರಿಯಿಸಿದ ಎಸ್‌ಪಿ ವಿಷ್ಣುವರ್ಧನ್, ಪೊಲೀಸ್ ಠಾಣೆಗಳಲ್ಲಿ ಸ್ಯಾನಿಟೈಸ್ ಪ್ರಕ್ರಿಯೆ ಇನ್ನೂ ಸಂಪೂರ್ಣವಾಗಿಲ್ಲ. ಇದರ ಕೆಲಸ ನಡೆಯುತ್ತಿದೆ ಎಂದು ತಿಳಿಸಿದ್ದಾರೆ.

ಕಾಸರಗೋಡಲ್ಲಿ ಮೂವರಿಗೆ ಸೋಂಕು: ಕಾಸರಗೋಡು: ಜಿಲ್ಲೆಯ ಮೂವರಲ್ಲಿ ಕೋವಿಡ್-19 ಸೋಂಕು ಕಾಣಿಸಿಕೊಂಡಿದೆ. ಸೋಂಕು ಖಚಿತಗೊಂಡವರಲ್ಲಿ ಮಹಾರಾಷ್ಟ್ರದಿಂದ ಆಗಮಿಸಿದ ಮಧೂರು ನಿವಾಸಿಗಳಾದ ಇಬ್ಬರು ಹಾಗೂ ಕೊಲ್ಲಿ ರಾಷ್ಟ್ರದಿಂದ ಆಗಮಿಸಿದ ಮಡಿಕೈ ನಿವಾಸಿ ಒಳಗೊಂಡಿದ್ದಾರೆ. ಇದೇ ವೇಳೆ, ಇಬ್ಬರು ಮಂಗಳವಾರ ರೋಗದಿಂದ ಗುಣಮುಖರಾಗದ್ದಾರೆ. ಮಧೂರು ನಿವಾಸಿಗಳು ಮುಂಬೈಯಿಂದ ಬಸ್‌ನಲ್ಲಿ ಹೊರಟು, ಮೇ 23ರಂದು ತಲಪಾಡಿಗೆ ಆಗಮಿಸಿದ್ದರು. ರೋಗ ಲಕ್ಷಣ ಕಂಡುಬಂದ ಹಿನ್ನೆಲೆಯಲ್ಲಿ ಇವರನ್ನು ಅದೇ ದಿನ ಕಾಸರಗೋಡು ಜನರಲ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಮುಂದುವರಿಯುತ್ತಿದೆ. ಮಡಿಕೈ ನಿವಾಸಿ ಕತಾರ್‌ನಿಂದ ಕಣ್ಣೂರು ವಿಮಾನ ನಿಲ್ದಾಣ ಮೂಲಕ ಆಗಮಿಸಿದ್ದು, ಕಾಞಂಗಾಡಿನ ಸರ್ಕಾರಿ ಕ್ವಾರೆಂಟೈನ್‌ನಲ್ಲಿ ದಾಖಲಿಸಲಾಗಿತ್ತು. ಸೋಂಕು ಖಚಿತಗೊಂಡ ಹಿನ್ನೆಲೆಯಲ್ಲಿ ಇವರನ್ನು ಉಕ್ಕಿನಡ್ಕದ ಕಾಸರಗೋಡು ಮೆಡಿಕಲ್ ಕಾಲೇಜಿಗೆ ದಾಖಲಿಸಲಾಗುವುದು ಎಂದು ಜಿಲ್ಲಾ ವೈದ್ಯಾಧಿಕಾರಿ (ಆರೋಗ್ಯ)ಡಾ.ಎಂ.ವಿ.ರಾಮದಾಸ್ ತಿಳಿಸಿದ್ದಾರೆ.

ಮೂಡಬೆಟ್ಟು ಕಂಟೇನ್ಮೆಂಟ್ ವಲಯ

ಪಡುಬಿದ್ರಿ: ಕರೊನಾ ಪಾಸಿಟಿವ್ ಪ್ರಕರಣ ದಾಖಲಾದ ಕಟಪಾಡಿ ಮೂಡಬೆಟ್ಟು ಗ್ರಾಮದ ಪ್ರದೇಶವನ್ನು ಕಂಟೇನ್ಮೆಂಟ್ ಜೋನ್, ಮತ್ತು ಅದರ ಸುತ್ತಲಿನ ಗಡಿ ಪ್ರದೇಶವನ್ನು ಬಫರ್ ಜೋನ್‌ಗಳನ್ನಾಗಿ ಘೋಷಿಸಿ ಆದೇಶ ಹೊರಡಿಸಲಾಗಿದೆ ಎಂದು ಕಾಪು ತಹಸೀಲ್ದಾರ್ ಮಹಮ್ಮದ್ ಇಸಾಕ್ ತಿಳಿಸಿದ್ದಾರೆ.

ಕಾಪು ತಾಲೂಕಿನ ಕಟಪಾಡಿ ಮೂಡಬೆಟ್ಟು ಗ್ರಾಮದ ಕರೊನಾ ಪಾಸಿಟಿವ್ ಪ್ರಕರಣ ದಾಖಲಾದ ಪ್ರದೇಶದ ಪೂರ್ವ ಭಾಗದಲ್ಲಿ ಬರುವ ಮೂಡಬೆಟ್ಟು ಪ್ರಾಥಮಿಕ ಆರೋಗ್ಯ ಕೇಂದ್ರದ ಆವರಣ ಮತ್ತು ಎರಡನೇ ಅಡ್ಡ ರಸ್ತೆ, ಪಶ್ಚಿಮ ದಿಕ್ಕಿನ ನಾಲ್ಕನೇ ಕ್ರಾಸ್, ಉತ್ತರ ಭಾಗದ ಜಿಪಂ ರಸ್ತೆ ಮತ್ತು ದಕ್ಷಿಣ ಭಾಗದ ಕನ್ಯಾನ ಲೇಔಟ್ ರಸ್ತೆಯನ್ನು ಕಂಟೇನ್ಮೆಂಟ್ ಜೋನ್‌ನ್ನಾಗಿ ಘೋಷಿಸಲಾಗಿದೆ. ಇಲ್ಲಿ 60 ಮನೆಗಳಿದ್ದು 275 ಮಂದಿ ವಾಸಿಸುತ್ತಿದ್ದಾರೆ. ಕುರ್ಕಾಲು, ಮಟ್ಟು, ಏಣಗುಡ್ಡೆ ಮತ್ತು ಪಾಂಗಾಳ ಗ್ರಾಮಗಳ ಗಡಿ ಭಾಗವನ್ನು ಬಫರ್ ಜೋನ್ ಆಗಿ ಗುರುತಿಸಲಾಗಿದೆ. ಇಲ್ಲಿ 2151 ಮನೆಗಳಿದ್ದು 4743 ಮಂದಿ ವಾಸಿಸುತ್ತಿದ್ದಾರೆ ಎಂದು ತಿಳಿಸಿದ್ದಾರೆ.