ಜಿಲ್ಲೆ

ಕರೊನಾ ಭೀತಿ, ಕಾರ್ಖಾನೆ ಮುಚ್ಚುವಂತೆ ಜನರ ಪಟ್ಟು, ಸಾರ್ವಜನಿಕರ ಆಕ್ರೋಶ

ಹಾರೋಹಳ್ಳಿ: ಕರೊನಾ ಭೀತಿ ನಡುವೆಯೂ ಹಾರೋಹಳ್ಳಿ ಕೈಗಾರಿಕಾ ಪ್ರದೇಶದಲ್ಲಿರುವ ಸ್ಟೌ ಕ್ರ್‌ಟಾ ಕಾರ್ಖಾನೆ ಗುರುವಾರ ಕಾರ್ಯಾಚರಿಸಿದೆ.

ಸೋಂಕು ಹರಡುವ ಹಿನ್ನೆಲೆಯಲ್ಲಿ ಕೈಗಾರಿಕೆಗಳನ್ನು ಮುಚ್ಚಿ ಅಂತರ ಕಾಯ್ದುಕೊಳ್ಳುವಂತೆ ಹಾಗೂ ಮುಂಜಾಗ್ರತೆ ವಹಿಸಿದ್ದರೂ ಸ್ಟೌ ಕ್ರ್‌ಟಾ ಕಾರ್ಖಾನೆ ಮಾಲೀಕರು 400 ಕಾರ್ಮಿಕರನ್ನು ಕೆಲಸದಲ್ಲಿ ತೊಡಗಿಸಿರುವುದು ಕೊಳ್ಳಿಗಾನಹಳ್ಳಿ, ರಾಮಸಾಗರ ಹಾಗೂ ಸುತ್ತಮುತ್ತಲ ಗ್ರಾಮಸ್ಥರ ಕೆಂಗಣ್ಣಿಗೆ ಗುರಿಯಾಗಿದೆ.

ಜಿಲ್ಲಾ ವ್ಯಾಪ್ತಿ ಹೊರತುಪಡಿಸಿ ಬೇರೆ ಯಾರೂ ಬೇರೆ ಜಿಲ್ಲೆಯಿಂದ ಬಂದು ಕೆಲಸ ಮಾಡಬಾರದು, ಅವಶ್ಯಕತೆ ಇದ್ದಲ್ಲಿ ಮಾತ್ರ ಬರಬಹುದು ಎಂದು ಜಿಲ್ಲಾಡಳಿತ ಸೂಚಿಸಿದ್ದರೂ ಇದಾವುದನ್ನೂ ಲೆಕ್ಕಿಸದೆ ಕಾರ್ಖಾನೆ ಕಾರ್ಮಿಕರನ್ನು ಕರೆಸಿ ಕೆಲಸ ಮಾಡಿಸುತ್ತಿದೆ. ಸೋಂಕು ಹರಡಿಸಲು ಈ ರೀತಿ ಮಾಡುತ್ತಿದ್ದೀರಾ ಎಂದು ಕಾರ್ಖಾನೆ ಆಡಳಿತ ಮಂಡಳಿ ಹಾಗೂ ನೌಕರರ ವಿರುದ್ಧ ಸಾರ್ವಜನಿಕರು ಹರಿಹಾಯ್ದರು.

ಯಾವುದೇ ಕಾರಣಕ್ಕೂ ಕಾರ್ಖಾನೆ ನಡೆಯ ಬಾರದು, ಬೆಂಗಳೂರಿ ನಿಂದ ಕಾರ್ಮಿಕರು ಇಲ್ಲಿಗೆ ಬರಬಾರದು ಎಂದು ಪಟ್ಟುಹಿಡಿದರು. ಈ ವೇಳೆ ಮಾತಿಗೆ ಮಾತು ಬೆಳೆದು ಆತಂಕದ ವಾತಾವರಣ ಸೃಷ್ಟಿಯಾಗಿತ್ತು.

ಜಿಲ್ಲಾ ಪೊಲೀಸರು ಅನುಮತಿ ನೀಡಿದ್ದಾರೆ. ಕೆಲ ಕಾರ್ಮಿಕರಿಗೆ ಕೆಲಸ ಮಾಡಲೂ ಪಾಸ್ ಕೂಡ ನೀಡಿದ್ದಾರೆ ಎಂದು ಪೊಲೀಸರು ನೀಡಿರುವ ದಾಖಲೆ ತೋರಿಸಿ ಕೆಲಸ ಮಾಡುತ್ತೇವೆ ಎಂದು ಆಡಳಿತ ಮಂಡಳಿ ಹೇಳಿದಾಗ ಆಕ್ರೋಶಗೊಂಡ ಜನ ಕೆಲಸ ಮಾಡಲು ಬಿಡುವುದಿಲ್ಲ ಎಂದು ಪಟ್ಟುಹಿಡಿದರು.

ಹಾರೋಹಳ್ಳಿ ಪೊಲೀಸರು ಪರಿಸ್ಥಿತಿ ತಿಳಿಗೊಳಿಸಿದರು. ಕೊಳ್ಳಿಗಾನಹಳ್ಳಿ ಪಿಡಿಒ ದೊಡ್ಡಲಿಂಗೇಗೌಡ ಸ್ಥಳಕ್ಕೆ ಬಂದು ಪರಿಶೀಲಿಸಿದರು. ಕಾರ್ಖಾನೆ ಸುತ್ತಮುತ್ತ ಬಿಗುವಿನ ವಾತಾವರಣ ನಿರ್ಮಾಣವಾಗಿದೆ.

ಪೊಲೀಸರಿಂದ ಪಡೆದಿರುವ ವಾಹನದ ಪಾಸ್ ಅನ್ನೇ ಕಾರ್ಮಿಕರು ಕೆಲಸ ಮಾಡಲು ಅನುಮತಿ ಪಡೆದಿರುವ ಪತ್ರ ಎಂದು ಕಾರ್ಖಾನೆ ಮಾಲೀಕರು ತೋರಿಸುತ್ತಿದ್ದಾರೆ. ಕೆಲಸ ಮಾಡಲು ನೀಡಿರುವ ಪತ್ರ ತೋರಿಸುವಂತೆ ಕೇಳಿದರೆ ದೌರ್ಜನ್ಯ ಎಸಗುತ್ತಿದ್ದಾರೆ. ಕಾರ್ಖಾನೆ ಕಾರ್ಯ ಸ್ಥಗಿತಗೊಳಿಸುವಂತೆ ಶುಕ್ರವಾರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಮನವಿ ಸಲ್ಲಿಸಲಾಗುವುದು ಎಂದು ಕೊಳ್ಳಿಗಾನಹಳ್ಳಿ ಕೆ.ಎಸ್. ನಾಗೇಂದ್ರ ತಿಳಿಸಿದರು.

ಕಾರ್ಖಾನೆಗೆ ಭೇಟಿ ನೀಡಿ ಪರಿಶೀಲಿಸಿದಾಗ ರಾಮನಗರ ಜಿಲ್ಲಾ ಪೊಲೀಸರು ಕೆಲವು ಕಾರ್ಮಿಕರಿಗೆ ಕೆಲಸ ಮಾಡಲು ಅನುಮತಿ ನೀಡಿದ್ದಾರೆ. ಸಾರ್ವಜನಿಕರ ಹಿತದೃಷ್ಟಿಯಿಂದ ವರಿಷ್ಠಾಧಿಕಾರಿಗೆ ಮನವರಿಕೆ ಮಾಡಲಾಗಿದೆ. ಪರಿಶೀಲಿಸಿ ಅನುಮತಿ ಹಿಂಪಡೆಯಲಾಗುವುದು ಎಂದು ತಿಳಿಸಿದ್ದಾರೆ. ನಂತರ ಮುಂದಿನ ಕ್ರಮಕ್ಕಾಗಿ ಮೇಲಧಿಕಾರಿಗಳಿಗೆ ವರದಿ ಸಲ್ಲಿಸಲಾಗುವುದು. ಕೆ. ದೊಡ್ಡಲಿಂಗೇಗೌಡ ಪಿಡಿಒ, ಕೊಳ್ಳಿಗಾನಹಳ್ಳಿ ಗ್ರಾಪಂ ಜಿಲ್ಲಾ ಪೊಲೀಸರು ಕೆಲಸ ಮಾಡಲು ಅನುಮತಿ ನೀಡಿದ್ದು, ಬಂದೋಬಸ್ತ್ ಕೈಗೊಂಡಿದ್ದೇವೆ. ಜಿಲ್ಲಾಧಿಕಾರಿಗಳು ಅನುಮತಿ ರದ್ದುಗೊಳಿಸಿ ಆದೇಶಿಸಿದರೆ ಅದಕ್ಕೆ ಬದ್ಧರಾಗಿದ್ದೇವೆ. ಸಿ.ರವಿಕುಮಾರ್ ಎಸ್‌ಐ, ಹಾರೋಹಳ್ಳಿ ಠಾಣೆ