ಜಿಲ್ಲೆ

ಕರೊನಾ ಸಂತ್ರಸ್ತರಿಗೆ ಪರಿಹಾರ ನೀಡಿ ; ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ ಸೂಚನೆ

Tumakuru

ತುಮಕೂರು : ಕರೊನಾ ಸೋಂಕಿನಿಂದಾಗಿ ತಂದೆ-ತಾಯಿಯನ್ನು ಕಳೆದುಕೊಂಡ ಮಕ್ಕಳಿಗೆ ಸರ್ಕಾರದ ಪರಿಹಾರಧನ ನೀಡಬೇಕು ಎಂದು ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ ಸೂಚಿಸಿದರು. ಜಿಲ್ಲಾಧಿಕಾರಿ ಕಚೇರಿಯಲ್ಲಿ ಬುಧವಾರ ಆಯೋಜಿಸಿದ್ದ ಮಕ್ಕಳ ರಕ್ಷಣಾ ಘಟಕಕ್ಕೆ ಸಂಬಂಧಿಸಿದಂತೆ ಜಿಲ್ಲಾ ಮಟ್ಟದ ಪ್ರಗತಿ ಪರಿಶೀಲನಾ ಸಭೆ ಉದ್ದೇಶಿಸಿ ಮಾತನಾಡಿದ ಅವರು, ಕರೊನಾದಿಂದ ತಂದೆ-ತಾಯಿ ಕಳೆದುಕೊಂಡು ಅನಾಥರಾದ ಮಕ್ಕಳಿಗೆ ವಿಳಂಬ ಮಾಡದೆ ಕೂಡಲೇ ಪರಿಹಾರ ಧನ ತಲುಪಿಸಬೇಕು ಎಂದರು.

ಬಾಲನ್ಯಾಯ ಮಂಡಳಿಯಲ್ಲಿ 72 ಪ್ರಕರಣ ದಾಖಲಾಗಿದ್ದು, 13 ಪ್ರಕರಣ ಇತ್ಯರ್ಥಗೊಳಿಸಲಾಗಿದೆ. ಸಾಕ್ಷಿಗಳ ಗೈರು ಹಾಜರಿ ಹಾಗೂ ಇನ್ನಿತರ ಕಾರಣಗಳಿಂದ 31 ಪ್ರಕರಣ ಬಾಕಿಯಿದ್ದು, ಚಾರ್ಜ್‌ಶೀಟ್ ಸಲ್ಲಿಸದ 28 ಪ್ರಕರಣ ಶೀಘ್ರ ಇತ್ಯರ್ಥಗೊಳಿಸಲು ನಗರದ ಡಿವೈಎಸ್ಪಿಗೆ ಸೂಚಿಸಿದರು. ಬಾಲಹಿತೈಷಿ ಯೋಜನೆಯಡಿ ಕರೊನಾ, ಕರೊನೋತ್ತರ ಕಾಯಿಲೆಗಳಿಂದ ಮೃತಪಟ್ಟು ತಂದೆ-ತಾಯಿ ಕಳೆದುಕೊಂಡ 72 ಮಕ್ಕಳಿಗೆ ಮನೋಸ್ಥೈರ್ಯ ತುಂಬಲು ಸ್ಥಳೀಯ ಅಂಗನವಾಡಿ ಕಾರ್ಯಕರ್ತೆಯರನ್ನು ಬಳಸಿಕೊಳ್ಳಬೇಕು ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪನಿರ್ದೇಶಕ ಶ್ರೀಧರ್‌ಗೆ ಸೂಚಿಸಿದರು.

ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ವಾಸಂತಿ ಉಪ್ಪಾರ್ ಸಭೆಗೆ ಮಾಹಿತಿ ನೀಡಿ, ವಿಶೇಷ ಪಾಲನಾ ಯೊಜನೆ, ಪ್ರಾಯೋಜಿತ ಕಾರ್ಯಕ್ರಮ, ಉಪಕಾರ್, ಮುಖ್ಯಮಂತ್ರಿ ಬಾಲಸೇವಾ ಯೋಜನಾ ಕಾರ್ಯಕ್ರಮ ಸೇರಿ ಸಮಗ್ರ ಮಕ್ಕಳ ರಕ್ಷಣಾ ಯೋಜನೆಯಡಿ ಅನುದಾನ ನೀಡಲಾಗಿದೆ ಎಂದರು. 244 ಕರೊನಾ, ಕರೊನೋತ್ತರ ಬಾಧಿದಿತ ಮಕ್ಕಳನ್ನು ಬಾಲಸ್ವರಾಜ್ ಪೋರ್ಟಲ್‌ನಲ್ಲಿ ಅಳವಡಿಸಲಾಗಿದ್ದು, ಪ್ರಾಯೋಜಿತ ಕಾರ್ಯಕ್ರಮದಡಿ ಆರ್ಥಿಕ ಸೌಲಭ್ಯ ಒದಗಿಸಲು 115 ಮಕ್ಕಳನ್ನು ಗುರುತಿಸಲಾಗಿದೆ ಎಂದರು.

ಡಿಎಚ್‌ಒ ಡಾ.ನಾಗೇಂದ್ರಪ್ಪ, ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕಿ ಪ್ರೇಮಾ, ಡಿಡಿಪಿಐ ಸಿ.ನಂಜಯ್ಯ ಇದ್ದರು.

ದಾಖಲಾಗಿದ್ದು 195 ಪ್ರಕರಣ, ಶಿಕ್ಷೆ 2 : ಜಿಲ್ಲೆಯಲ್ಲಿ ಪೋಕ್ಸೋ ಕಾಯ್ದೆಯಡಿ 195 ಪ್ರಕರಣ ದಾಖಲಾಗಿವೆ. ಇದರಲ್ಲಿ 36 ಪ್ರಕರಣ ಇತ್ಯರ್ಥಗೊಂಡಿದ್ದು, 34 ಖುಲಾಸೆ ಹಾಗೂ 2 ಪ್ರಕರಣಗಳಲ್ಲಿ ಶಿಕ್ಷೆಯಾಗಿದೆ, ಉಳಿದಂತೆ 159 ಪ್ರಕರಣ ಬಾಕಿಯಿದೆ.

ಪ್ರಸಕ್ತ ಸಾಲಿನ ದತ್ತು ಕಾರ್ಯಕ್ರಮದಡಿ ಸಂಸ್ಥೆಗೆ ದಾಖಲಾಗಿರುವ 36 ಮಕ್ಕಳ ಪೈಕಿ 17 ಮಕ್ಕಳನ್ನು ದತ್ತು ನೀಡಲಾಗಿದೆ. ಪ್ರಸ್ತುತ ಜಿಲ್ಲೆಯ ದತ್ತು ಕೇಂದ್ರದಲ್ಲಿ 19 ಮಕ್ಕಳಿದ್ದು, ಈ ಪೈಕಿ 12 ಮಕ್ಕಳ ದತ್ತು ನೀಡಲು ಅರ್ಹರಿದ್ದಾರೆ.

ಸರ್ಕಾರಿ ಜಮೀನು ಒತ್ತುವರಿಯಾಗಿದ್ದರೆ ದೂರು ನೀಡಿ : ಜಿಲ್ಲೆ ವ್ಯಾಪ್ತಿಯಲ್ಲಿ ಸರ್ಕಾರಿ ಜಮೀನು ಒತ್ತುವರಿಯಾಗಿದ್ದರೆ ಕೂಡಲೇ ಜಿಲ್ಲಾಧಿಕಾರಿ ಅಥವಾ ಆಯಾ ತಹಸೀಲ್ದಾರರಿಗೆ ದೂರು ನೀಡಬೇಕು ಎಂದು ಜಿಲ್ಲಾಡಳಿತ ಮನವಿ ಮಾಡಿದೆ.

ಕೆರೆ-ಕಟ್ಟೆ, ಕುಂಟೆ, ಹಳ್ಳ, ಸರೋವರ ಮತ್ತು ಇನ್ನಿತರ ಜಲಕಾಯ, ಜಲಮೂಲಗಳೆಂದು ವರ್ಗೀಕೃತವಾದ ಹಾಗೂ ಗ್ರಾಮ ನಕಾಶೆಯಲ್ಲಿ ರಸ್ತೆ, ಬೀದಿ, ಬಂಡಿದಾರಿ, ಓಣಿ ಅಥವಾ ಹಾದಿ ಎಂದು ನಮೂದಾಗಿರುವ ಇತರ ಎಲ್ಲ ಸರ್ಕಾರಿ ಜಮೀನುಗಳು ಒತ್ತುವರಿಯಾಗಿದ್ದಲ್ಲಿ ಸಾರ್ವಜನಿಕರು ನೇರವಾಗಿ ದೂರು ನೀಡಬಹುದು. ಸರ್ಕಾರ ಜಿಲ್ಲೆಯ ಎಲ್ಲ ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿ ಸ್ಮಶಾನ ಭೂಮಿ ಕಲ್ಪಿಸಲು ಉದ್ದೇಶಿಸಿರುವ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಅಥವಾ ಸಂಬಂಧಿಸಿದ ತಾಲೂಕು ತಹಸೀಲ್ದಾರರಿಗೆ ಸಾರ್ವಜನಿಕ ದೂರು ನೀಡಲು ಅವಕಾಶ ನೀಡಲಾಗಿದೆ.

ಸರ್ಕಾರಿ ನಿಯಮಗಳನ್ವಯ ಗ್ರಾಮ ಹಾಗೂ ನಗರ ಪ್ರದೇಶಗಳಲ್ಲಿ ಸರ್ಕಾರಿ ಜಮೀನು ಲಭ್ಯವಿರುವ ಕಡೆ ಸ್ಮಶಾನದ ಉದ್ದೇಶಕ್ಕಾಗಿ 2 ಎಕರೆ ವಿಸ್ತೀರ್ಣದ ಜಮೀನು ಕಾಯ್ದಿರಿಸುವ ಅಧಿಕಾರವನ್ನು ಜಿಲ್ಲಾಧಿಕಾರಿಗೆ ನೀಡಲಾಗಿದ್ದು, ಸರ್ಕಾರಿ ಜಮೀನು ಒತ್ತುವರಿಯಾಗಿದ್ದಲ್ಲಿ ಸಾರ್ವಜನಿಕರು ದೂರು ನೀಡಬಹುದು. ಸ್ಮಶಾನಕ್ಕಾಗಿ ಸರ್ಕಾರಿ ಜಮೀನು ಕಾಯ್ದಿರಿಸಲು ಹಾಗೂ ಗೋಮಾಳ ಜಮೀನು ನಿಗಧಿತ ಪ್ರಮಾಣಕ್ಕಿಂತ ಕಡಿಮೆ ಇದ್ದರೂ ಸಹಾ ಸ್ಮಶಾನಕ್ಕಾಗಿ ಮೀಸಲಿಡಲು ಕರ್ನಾಟಕ ಭೂ ಕಂದಾಯ ನಿಯಮಗಳು 1966ರ ನಿಯಮ 97(4)()ರಲ್ಲಿ ಅವಕಾಶ ನೀಡಲಾಗಿದೆ. ಸ್ಮಶಾನದ ಉದ್ದೇಶ ಸಾರ್ವಜನಿಕ ಉದ್ದೇಶವಾಗಿರುವುದರಿಂದ ಬ ಖರಾಬು ಎಂದು ವರ್ಗೀಕೃತವಾದ ಹಾಗೂ ಒತ್ತುವರಿಯಿಂದ ತೆರವುಗೊಳಿಸಿರುವ ಸರ್ಕಾರಿ ಜಮೀನು ಸ್ಮಶಾನಕ್ಕಾಗಿ ಕಾಯ್ದಿರಿಸಲು ಅವಕಾಶ ಕಲ್ಪಿಸಿಕೊಡಲಾಗಿದೆ.

ಸರ್ಕಾರಿ ಜಮೀನಿನಲ್ಲಿ ಅನಧಿಕೃತವಾಗಿ ಸಾಗುವಳಿ ಮಾಡುತ್ತಿದ್ದರೆ ಸಕ್ರಮೀಕರಣಕ್ಕಾಗಿ ಸಲ್ಲಿಸುವ ಅರ್ಜಿಗಳ ಪೈಕಿ ಜಿಲ್ಲಾಧಿಕಾರಿಗಳ ಹಂತದಲ್ಲಿಯೇ ಅನರ್ಹ ಅರ್ಜಿಗಳು ಇದ್ದಲ್ಲಿ ಅವುಗಳನ್ನು ವಜಾಗೊಳಿಸಿ ಜಮೀನನ್ನು ಸರ್ಕಾರದ ವಶಕ್ಕೆ ಪಡೆದು ಸ್ಮಶಾನಕ್ಕಾಗಿ ಕಾಯ್ದಿರಿಸಲಾಗುವುದು. ಒಂದು ವೇಳೆ ಯಾವುದೇ ಗ್ರಾಮದಲ್ಲಿ ಸ್ಮಶಾನಕ್ಕಾಗಿ ಕಾಯ್ದಿರಿಸಲು ಸರ್ಕಾರಿ ಜಮೀನು ಲಭ್ಯವಿಲ್ಲದಿದ್ದಲ್ಲಿ ಅಂತಹ ಗ್ರಾಮಗಳಲ್ಲಿ ಮಾರ್ಗಸೂಚಿ ಮೌಲ್ಯದ ಮೂರು ಪಟ್ಟು ದರದಲ್ಲಿ ಖಾಸಗಿಯವರಿಂದ ಜಮೀನುಗಳನ್ನು ಖರೀದಿಸಲು ಅವಕಾಶವಿದೆ. ವೈ.ಎಸ್.ಪಾಟೀಲ, ಜಿಲ್ಲಾಧಿಕಾರಿ