ಜಿಲ್ಲೆ

ಕರೊನಾ ಲಸಿಕಾಕರಣ ಪೂರ್ಣಗೊಳಿಸಿ ; ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ ಸೂಚನೆ

Tumakuru

ತುಮಕೂರು : ಜಿಲೆಯಲ್ಲಿ ಕರೊನಾ ಲಸಿಕಾಕರಣಕ್ಕೆ ಸಂಬಂಧಿಸಿದಂತೆ ನಿಗದಿತ ಗುರಿ ಮುಟ್ಟಬೇಕಿದ್ದು, ಲಸಿಕೆ ಕೊರತೆಯುಂಟಾದರೆ ಪೂರೈಸಲು ಜಿಲ್ಲಾಡಳಿತದಿಂದ ಕ್ರಮ ಕೈಗೊಳ್ಳಲಿದೆ ಎಂದು ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ ತಿಳಿಸಿದರು.

ಜಿಲ್ಲಾಧಿಕಾರಿ ಕಚೇರಿಯಲ್ಲಿ ಸೋಮವಾರ ಆನ್‌ಲೈನ್ ಮೂಲಕ ಜಿಲ್ಲೆಯ ಎಲ್ಲ ಅಧಿಕಾರಿಗಳ ಜತೆ ಸಭೆ ನಡೆಸಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಶೇ.101 ಮೊದಲನೇ ಡೋಸ್, ಶೇ.85 ಎರಡನೇ ಡೋಸ್ ಲಸಿಕಾಕರಣ ಪೂರ್ಣಗೊಂಡಿದೆ ಎಂದರು.

ಜಿಲ್ಲೆಯಲ್ಲಿ ಬೂಸ್ಟರ್ ಡೋಸ್ ಲಸಿಕಾಕರಣದಲ್ಲಿ ಶೇ.51 ಪ್ರಗತಿ ಸಾಧಿಸಿದ್ದು, ಅರ್ಹತೆ ಹೊಂದಿರುವ 21 ಸಾವಿರ ಫಲಾನುಭವಿಗಳಿಗೆ ಶೀಘ್ರವೇ ಲಸಿಕೆ ನೀಡಲು ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಿದರು.

ಬೂಸ್ಟರ್ ಡೋಸ್ ನೀಡುವಲ್ಲಿ ಹಿಂದುಳಿದಿರುವ ತಾಲೂಕುಗಳ ವೈದ್ಯಾಧಿಕಾರಿಗಳಿಗೆ ಲಸಿಕಾಕರಣ ಪೂರ್ಣಗೊಳಿಸಲು ಸೂಚಿಸಿದರು.

ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ಗ್ರಾಮ ಒನ್ ಅತ್ಯಂತ ಮಹತ್ವದ ಕಾರ್ಯಕ್ರಮವಾಗಿದ್ದು, ಜಿಲ್ಲೆಯಲ್ಲಿ ಫೆ.15ರೊಳಗೆ ಗ್ರಾಮ ಒನ್ ಕೇಂದ್ರ ತೆರೆಯಲು ಆಯಾ ತಾಲೂಕುಗಳ ತಹಸೀಲ್ದಾರ್‌ಗಳು ಸೂಕ್ತ ಕ್ರಮವಹಿಸಬೇಕು ಎಂದರು.

ಜಿಪಂ ಸಿಇಒ ಡಾ.ಕೆ.ವಿದ್ಯಾಕುಮಾರಿ ಮಾತನಾಡಿ, ಜಿಲ್ಲೆಯ ನಗರ ಹಾಗೂ ಗ್ರಾಮೀಣ ಪ್ರದೇಶದ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಔಷಧ ಕೊರತೆಯಾದರೆ ಜಿಲ್ಲಾಡಳಿತಕ್ಕೆ ಮಾಹಿತಿ ನೀಡಿದಲ್ಲಿ ರಾಷ್ಟ್ರೀಯ ಹೆಲ್ತ್ ಮಿಷನ್‌ನಡಿ ಔಷಧಗಳನ್ನು ಪೂರೈಸಲು ಕ್ರಮಕೈಗೊಳ್ಳಲಾಗುವುದು ಎಂದರು.

ಅಪರ ಜಿಲ್ಲಾಧಿಕಾರಿ ಕೆ.ಚನ್ನಬಸಪ್ಪ ಮಾತನಾಡಿ, ಕರೊನಾ ಸಂಬಂಧ ಮೊಬೈಲ್‌ನಲ್ಲಿ ಹೋಮ್ ಐಸೋಲೇಷನ್ ಆ್ಯಪ್ ಲಭ್ಯವಿದ್ದು ಪಾಸಿಟಿವ್ ಬಂದವರಿಗೆ ನೀಡುವ ಔಷಧಗಳ ಕಿಟ್ ಮಾಹಿತಿ ಆ್ಯಪ್‌ನಲ್ಲಿ ನಮೂದಿಸಲು ಅವಕಾಶವಿದೆ. ಅಧಿಕಾರಿಗಳು ಈ ತಂತ್ರಜ್ಞಾನದ ಉಪಯೋಗ ಪಡೆದುಕೊಳ್ಳಬೇಕು ಎಂದರು.

ಕಳೆದ ನವೆಂಬರ್‌ನಲ್ಲಿ ಸುರಿದ ಮಹಾಮಳೆಯಿಂದಾಗಿ ಜಿಲ್ಲೆಯಲ್ಲಿ ಸಂಪೂರ್ಣ ಹಾನಿಗೀಡಾದ ಎ ಮತ್ತು ಬಿ ಗುಂಪಿನ ಮನೆಗಳ ಜಿಪಿಎಸ್ ಮಾಡಿಸುವ ಕಾರ್ಯವನ್ನು ಶೀಘ್ರವಾಗಿ ಪೂರ್ಣಗೊಳಿಸಬೇಕು ಎಂದು ತಿಳಿಸಿದರು. ಸ್ಮಶಾನ ಹಾಗೂ ವಿವಿಧ ಉದ್ದೇಶಗಳಿಗೆ ಭೂಮಿಯನ್ನು ಕಾಯ್ದಿರಿಸುವಿಕೆ, ಸಾಮಾಜಿಕ ಭದ್ರತಾ ಯೋಜನೆಗಳ ಪ್ರಗತಿ ಸೇರಿದಂತೆ ವಿವಿಧ ವಿಷಯಗಳನ್ನು ಸಭೆಯಲ್ಲಿ ಚರ್ಚಿಸಲಾಯಿತು. ಸಭೆಯಲ್ಲಿ ಉಪವಿಭಾಗಾಧಿಕಾರಿ ವಿ.ಅಜಯ್, ಪಾಲಿಕೆ ಆಯುಕ್ತೆ ರೇಣುಕಾ, ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಟಿ.ಎ.ವೀರಭದ್ರಯ್ಯ, ಜಿಲ್ಲಾ ಅರಣ್ಯ ಸಂರಕ್ಷಣಾಧಿಕಾರಿ ಡಾ.ರಮೇಶ್ ಮತ್ತಿತರರು ಇದ್ದರು.