ಜಿಲ್ಲೆ

ಕರೊನಾ ಕಟ್ಟಿಹಾಕಲು ಶತಪ್ರಯತ್ನ ; ಸೋಮವಾರ 1147 ಜನರಿಗೆ ಪಾಸಿಟಿವ್ ; ಜಿಲ್ಲಾಧಿಕಾರಿ ನೇತೃತ್ವದಲ್ಲಿ ಸರಣಿ ಸಭೆ

Tumakuru

ತುಮಕೂರು : ದಿನೇದಿನೆ ಜಿಲ್ಲೆಯಲ್ಲಿ ಕರೊನಾ ಸೋಂಕಿತರ ಸಂಖ್ಯೆ ದುಪ್ಪಟ್ಟಾಗುತ್ತಿದ್ದು ಜಿಲ್ಲಾಡಳಿತ ಸರಣಿ ಸಭೆ ನಡೆಸುವ ಮೂಲಕ ಸೋಂಕು ನಿಯಂತ್ರಣಕ್ಕೆ ಶತಪ್ರಯತ್ನ ಮುಂದುವರಿಸಿದೆ. ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ ಸೋಮವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ಎಲ್ಲ ಅಧಿಕಾರಿಗಳ ಜತೆ ಆನ್‌ಲೈನ್ ಮೂಲಕ ಸಭೆ ನಡೆಸಿ, ಅನುಸರಿಸಬೇಕಾದ ಮಾರ್ಗಸೂಚಿ ಬಗ್ಗೆ ಸೂಚನೆ ನೀಡಿದರು.

ಎಲ್ಲ ತಾಲೂಕು ಆಡಳಿತ ಪ್ರತಿನಿತ್ಯ ಜಿಲ್ಲಾಡಳಿತದ ಜತೆ ನಿರಂತರ ಸಂಪರ್ಕ ಕಾಯ್ದುಕೊಳ್ಳಬೇಕು, ಎಲ್ಲರೂ ಸಮರೋಪಾದಿಯಲ್ಲಿ ಕರ್ತವ್ಯ ನಿರ್ವಹಿಸುವ ಮೂಲಕ ಸೋಂಕು ನಿಯಂತ್ರಣಕ್ಕೆ ಶ್ರಮಿಸಬೇಕು ಎಂದರು. ಅಧಿಕಾರಿಗಳು ಕೇಂದ್ರ ಸ್ಥಾನದಲ್ಲಿದ್ದು ಅತ್ಯಂತ ಜಾಗರೂಕರಾಗಿ ಕೆಲಸ ನಿರ್ವಹಿಸಬೇಕಿದೆ ಎಂದರು.

ಶಿಕ್ಷಣ ಸಂಸ್ಥೆಗಳಲ್ಲಿ ಸೋಂಕಿನ ಪ್ರಮಾಣ ಹೆಚ್ಚಾಗುತ್ತಿದ್ದು, ವಿದ್ಯಾರ್ಥಿಗಳಿಗೆ ಲಸಿಕೆ ನೀಡುವಲ್ಲಿ ಶೇ.100 ಗುರಿ ಸಾಧಿಸಬೇಕು, 2ನೇ ಡೋಸ್ ಕೂಡ ಶೀಘ್ರದಲ್ಲೇ ಶೇ.100 ಪ್ರಗತಿಯಾಗಬೇಕು ಎಂದರು. ಅಪರ ಜಿಲ್ಲಾಧಿಕಾರಿ ಕೆ.ಚನ್ನಬಸಪ್ಪ, ಪಾಲಿಕೆ ಆಯುಕ್ತೆ ರೇಣುಕಾ, ಡಿಎಚ್‌ಒ ಡಾ.ನಾಗೇಂದ್ರಪ್ಪ, ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ಮೋಹನ್‌ದಾಸ್ ಸಭೆಯಲ್ಲಿದ್ದರು.

ಯುವ ವಿಜ್ಞಾನಿ ಪ್ರಶಸ್ತಿ ಸ್ಪರ್ಧೆ ಮುಂದೂಡಿಕೆ : ಕರೊನಾ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ವಿವಿಧ ಇಲಾಖೆಗಳ ಸಹಯೋಗದಲ್ಲಿ ಜ.21ರಂದು ಆಯೋಜಿಸಿದ್ದ ಜಿಲ್ಲಾ ಮಟ್ಟದ ಯುವ ವಿಜ್ಞಾನಿ ಪ್ರಶಸ್ತಿ ಸ್ಪರ್ಧೆ ಮುಂದೂಡಲಾಗಿದೆ ಎಂದು ರಾಜ್ಯ ವಿಜ್ಞಾನ ಪರಿಷತ್ತಿನ ಗೌರವ ಕಾರ್ಯದರ್ಶಿ ಸಿ.ಕೃಷ್ಣೇಗೌಡ ತಿಳಿಸಿದ್ದಾರೆ. ಸ್ಪರ್ಧೆಗೆ ನೋಂದಣಿ ಮಾಡಿಕೊಂಡಿರುವ ವಿದ್ಯಾರ್ಥಿಗಳಿಗೆ ಸ್ಪರ್ಧೆ ಜರುಗುವ ಮುಂದಿನ ದಿನಾಂಕ ತಿಳಿಸಲಾಗುವುದು. ಮಾಹಿತಿಗಾಗಿ ಸ್ಪರ್ಧೆಯ ರಾಜ್ಯ ಸಂಯೋಜಕಿ ಮೀನಾಕ್ಷಿ ಶಿವಾನಂದ ಕುಡಸೋಮಣ್ಣ ಅವರನ್ನು ಮೊ.7353960666 ಸಂಪರ್ಕಿಸಿ.

ಎಸ್‌ಪಿ ರಾಹುಲ್‌ಕುಮಾರ್‌ಗೆ ಜ್ವರ : ಜಿಲ್ಲೆಯಲ್ಲಿ ಕರೊನಾ ಸ್ಫೋಟ ಮುಂದುವರಿದಿದ್ದು ಸೋಮವಾರ 1147 ಜನರಿಗೆ ಕರೊನಾ ದೃಢವಾಗಿದೆ. ಇದರಲ್ಲಿ ಶೇ.10ಕ್ಕಿಂತ ಹೆಚ್ಚು ಶಾಲೆ ಮಕ್ಕಳು, ಶಿಕ್ಷಕರೇ ಇರುವುದು ಆತಂಕ ಹೆಚ್ಚಿಸಿದೆ. ಜಿಲ್ಲಾ ಪೊಲೀಸ್ ಅಧೀಕ್ಷಕ ರಾಹುಲ್‌ಕುಮಾರ್ ಕೂಡ ಜ್ವರದಿಂದ ಮನೆಯಲ್ಲಿಯೇ ವಿಶ್ರಾಂತಿ ಪಡೆಯುತ್ತಿದ್ದು ಅಧಿಕಾರಿ ವಲಯದ ಸಾಕಷ್ಟು ಜನರಿಗೂ ಕರೊನಾ ರೋಗ ಲಕ್ಷಣ ಕಾಣಿಸಿಕೊಳ್ಳಲಾರಂಭಿಸಿದೆ. ತುಮಕೂರು ತಾಲೂಕಿನಲ್ಲಿ 537, ಕುಣಿಗಲ್ 106, ಶಿರಾ 150, ಮಧುಗಿರಿ 127, ಕೊರಟಗೆರೆ 80, ಚಿ.ನಾ.ಹಳ್ಳಿ 43, ಗುಬ್ಬಿ 19, ಪಾವಗಡ 38, ತಿಪಟೂರು 25 ಹಾಗೂ ತುರುವೇಕೆರೆಯಲ್ಲಿ 22 ಜನರಿಗೆ ಸೋಂಕು ತಗುಲಿದ್ದು, ಜಿಲ್ಲೆಯಲ್ಲಿ ಒಟ್ಟು ಸೋಂಕಿತರ ಸಂಖ್ಯೆ 120511ಕ್ಕೇರಿದೆ.

ತುಮಕೂರು ತಾಲೂಕಿನ 69 ವರ್ಷದ ವ್ಯಕ್ತಿ ಸೋಂಕಿಗೆ ಬಲಿಯಾಗಿದ್ದು, ಸಾವಿನ ಸಂಖ್ಯೆ1144ಕ್ಕೇರಿದೆ. ಜಿಲ್ಲಾಸ್ಪತ್ರೆ ತುರ್ತು ನಿಗಾ ಘಟಕದಲ್ಲಿ 10 ಸೋಂಕಿತರಿಗೆ ಚಿಕಿತ್ಸೆ ಮುಂದುವರಿದಿದೆ. ಚಿಕ್ಕನಾಯಕನಹಳ್ಳಿ ಪಟ್ಟಣದ ಪ್ರತಿಷ್ಠಿತ ಖಾಸಗಿ ಶಾಲೆ 9ನೇ ತರಗತಿ ವಿದ್ಯಾರ್ಥಿನಿಗೆ ಸೋಂಕು ದೃಢವಾಗಿದ್ದು ಆಡಳಿತ ಮಂಡಳಿ ಮಾಹಿತಿಯೇ ಎಲ್ಲ ಎಂದು ತಿಳಿಸಿರುವುದು ಅನುಮಾನಕ್ಕೆ ಕಾರಣವಾಗಿದೆ. ಯಾವುದೇ ಶಿಕ್ಷಣ ಸಂಸ್ಥೆಯಲ್ಲಿ ಸೋಂಕು ಪತ್ತೆಯಾದರೆ 7 ದಿನ ರಜೆ ಘೋಷಿಸುವ ಅಧಿಕಾರಿ ಆಯಾ ಶಾಲೆ ಮುಖ್ಯಸ್ಥರಿಗೆ ಜಿಲ್ಲಾಡಳಿತ ನೀಡಿದೆ.

ಶಿರಾದಲ್ಲಿ 79 ಮಕ್ಕಳು, 22 ಶಿಕ್ಷಕರಿಗೆ ಸೋಂಕು : ಜಿಲ್ಲೆಯ ಎಲ್ಲ ವಲಯದಲ್ಲಿಯೂ ಕರೊನಾ ಕಾಣಿಸಿಕೊಂಡಿದೆ, ಬಹುತೇಕ ಖಾಸಗಿ ವಿದ್ಯಾಸಂಸ್ಥೆಗಳು ಮಕ್ಕಳಲ್ಲಿ ಪಾಸಿಟಿವ್ ಕೇಸ್ ದೃಢವಾಗಿದ್ದರೂ ವಿಷಯ ಮುಚ್ಚಿಟ್ಟು ಶಾಲೆ ನಡೆಸುತ್ತಿರುವುದು ಆತಂಕ ಹೆಚ್ಚಿಸಿದೆ.

ಶಿರಾ ತಾಲೂಕಿನಲ್ಲಿ ಒಂದೇ ದಿನ 79 ಮಕ್ಕಳು, 22 ಶಿಕ್ಷಕರು, ಒಬ್ಬರು ಅಡುಗೆ ಸಿಬ್ಬಂದಿಗೆ ಸೋಂಕು ದೃಢವಾಗಿದೆ, ಶಿರಾ ಪಟ್ಟಣದಲ್ಲಿಯೇ 42 ಮಕ್ಕಳು ಹಾಗೂ ಏಳು ಶಿಕ್ಷಕರಿಗೆ ಪಾಸಿಟಿವ್ ಆಗಿದೆ.