ಜಿಲ್ಲೆ

ಜಿಲ್ಲೆಯಲ್ಲಿ ಕರೊನಾ ಮಹಾಸ್ಫೋಟ ; 1326 ಜನರಲ್ಲಿ ಸೋಂಕು ದೃಢ ; ತುಮಕೂರಲ್ಲಿ 591 ಮಂದಿಗೆ ಪಾಸಿಟಿವ್

Tumakuru

ತುಮಕೂರು : ಜಿಲ್ಲೆಯಲ್ಲಿ ಕರೊನಾ ಮಹಾಸ್ಫೋಟವಾಗಿದೆ. ಶನಿವಾರ ಒಂದೇ ದಿನ 1,326 ಜನರಲ್ಲಿ ಸೋಂಕು ದೃಢಪಟ್ಟಿದೆ. ತುಮಕೂರು ತಾಲೂಕು ಒಂದರಲ್ಲೇ 591 ಮಂದಿಗೆ ಕೋವಿಡ್‌ಗೆ ತಗುಲಿದೆ. ಕುಣಿಗಲ್ ತಾಲೂಕಿನಲ್ಲಿ 154, ಶಿರಾ 109, ತಿಪಟೂರಿನಲ್ಲಿ 102 ಜನರಿಗೆ ಸೋಂಕು ಕಾಣಿಸಿಕೊಂಡಿದೆ. ಇದರಿಂದಾಗಿ ಈ ತಾಲೂಕುಗಳಲ್ಲಿ ಆತಂಕ ಉಂಟಾಗಿದೆ. ಮಧುಗಿರಿ 96, ಕೊರಟಗೆರೆ 81, ಪಾವಗಡ 61, ಗುಬ್ಬಿ 56, ತುರುವೇಕರೆ 54 ಹಾಗೂ ಚಿ.ನಾ. ಹಳ್ಳಿಯ1ಲ್ಲಿ 22 ಜನರು ಸೇರಿ ಒಟ್ಟು 1,326 ಸೋಂಕು ತಗುಲಿದಂತಾಗಿದೆ. ಜಿಲ್ಲಾಸ್ಪತ್ರೆಯ ತುರ್ತು ನಿಗಾ ಘಟಕದಲ್ಲಿ ಸದ್ಯ ನಾಲ್ವರು ಚಿಕಿತ್ಸೆ ಪಡೆಯುತ್ತಿದ್ದಾರೆ.

4,045 ಸಕ್ರಿಯ ಪ್ರಕರಣ: ವಿವಿಧ ಆಸ್ಪತ್ರೆಗಳಿಂದ 21 ಜನ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. ಸದ್ಯ ಸಕ್ರಿಯ ಪ್ರಕರಣಗಳ ಸಂಖ್ಯೆ 4,045ಕ್ಕೆ ಏರಿಕೆಯಾಗಿದೆ. ಈವರೆಗೆ ಜಿಲ್ಲೆಯಲ್ಲಿ 1,25,514 ಜನರಿಗೆ ಸೋಂಕು ತಗುಲಿದಂತಾಗಿದೆ. ಸೋಂಕು ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ ಕೋವಿಡ್ ಪರೀಕ್ಷೆಯನ್ನೂ ಹೆಚ್ಚಿಸಲಾಗಿದೆ. ರೋಗ ಲಕ್ಷಣಗಳು ಇಲ್ಲದಿದ್ದರೂ ಸೋಂಕು ಖಚಿತವಾಗುತ್ತಿದೆ. ಈ ಹಿನ್ನೆಲೆಯಲ್ಲಿ ವಾರಾಂತ್ಯ ಕರ್ಫ್ಯೂ ವೇಳೆ ಸಾಧ್ಯವಾದಷ್ಟೂ ಮನೆಯಲ್ಲಿ ಉಳಿದ ಜನರು ಸೋಂಕು ಹಬ್ಬದಂತೆ ತಡೆದು ಜಿಲ್ಲಾಡಳಿತಕ್ಕೆ ಸಹಕರಿಸಿದರು.

ಬೂಸ್ಟರ್ ಡೋಸ್ ಪಡೆದರೂ ಸೋಂಕು : ಜಿಲ್ಲೆಯಲ್ಲಿ ಆರೋಗ್ಯ ಕಾರ್ಯಕರ್ತರು, ವೈದ್ಯಕೀಯ ಸಿಬ್ಬಂದಿ, ಕರೊನಾ ಸೇನಾನಿಗಳು ಹಾಗೂ 60 ವರ್ಷ ಮೇಲ್ಪಟ್ಟವರಿಗೆ ಮುನ್ನೆಚ್ಚರಿಕೆಯಾಗಿ ಜ.10ರಿಂದ ಬೂಸ್ಟರ್ ಡೋಸ್ ಲಸಿಕಾ ಅಭಿಯಾನ ಹಮ್ಮಿಕೊಳ್ಳಲಾಗಿದೆ. ಆದರೆ, ಬೂಸ್ಟರ್ ಡೋಸ್ ಪಡೆದವರಲ್ಲೂ ಸೋಂಕು ಕಾಣಿಸಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ.

ಸಂಕ್ರಾಂತಿ ಸಡಗರಕ್ಕೆ ಬ್ರೇಕ್ : ಸಂಕ್ರಾಂತಿ ಸಾಮೂಹಿಕ ಆಚರಣೆಯ ಸಡಗರಕ್ಕೆ ಕರೊನಾ ಬ್ರೇಕ್ ಹಾಕಿದೆ. ನಗರ, ಪಟ್ಟಣ ಪ್ರದೇಶಗಳಲ್ಲಿ ವ್ಯಾಪಕವಾಗಿರುವ ಸೋಂಕು ಆತಂಕವುಂಟು ಮಾಡಿ ಸಂಭ್ರಮಕ್ಕೆ ಕಡಿವಾಣ ಹಾಕಿತ್ತು. ಆದರೂ, ಗ್ರಾಮೀಣ ಭಾಗದಲ್ಲಿ ಸಂಕ್ರಾಂತಿ ಕಿಚ್ಚು ಹೆಚ್ಚಿತ್ತು. ವಾರಾಂತ್ಯ ಕರ್ಫ್ಯೂ ಕೂಡ ಆಚರಣೆಗೆ ತೊಡಕಾಗಿತ್ತು.