ತುಮಕೂರು : ಜಿಲ್ಲೆಯಲ್ಲಿ ಕರೊನಾ ಸ್ಫೋಟವಾಗಿದ್ದು ಮಂಗಳವಾರ ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ.ಮಾಧುಸ್ವಾಮಿ ಸಹಿತ ಬರೋಬ್ಬರಿ 332 ಜನರಿಗೆ ಸೋಂಕು ತಗುಲಿದೆ. ವಿವಿಧ ಆಸ್ಪತ್ರೆಗಳಲ್ಲಿ 15 ಜನರು ಗುಣಮುಖರಾಗಿದ್ದು, ಸೋಂಕಿನ ಪ್ರಮಾಣ ಮಿತಿಮೀರಿದೆ. ತುಮಕೂರು 126, ಕೊರಟಗೆರೆ 51, ತಿಪಟೂರು 45, ಕುಣಿಗಲ್ 31, ಚಿ.ನಾ.ಹಳ್ಳಿ 17, ಗುಬ್ಬಿ 11, ಮಧುಗಿರಿ 16, ಪಾವಗಡ 17, ತುರುವೇಕೆರೆ ಹಾಗೂ ಶಿರಾ ತಲಾ 9 ಒಟ್ಟು 332 ಜನರಿಗೆ ಸೋಂಕು ದೃಢವಾಗಿದೆ.
ಸೋಂಕಿತರ ಪ್ರಮಾಣ ಹೆಚ್ಚಾಗಿದ್ದರೂ ಕೂಡ ತುರ್ತು ನಿಗಾ ಘಟಕದಲ್ಲಿ ಚಿಕಿತ್ಸೆ ಅಗತ್ಯವಿರುವವರ ಸಂಖ್ಯೆ ವಿರಳವಾಗಿದೆ. ಜಿಲ್ಲಾಸ್ಪತ್ರೆಯಲ್ಲಿ ಇಬ್ಬರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಸಾವಿನ ಪ್ರಕರಣ ಕೂಡ ವರದಿಯಾಗದಿರುವುದು ಆತಂಕದಲ್ಲಿಯೂ ತುಸು ನೆಮ್ಮದಿ ಮೂಡಿಸಿದೆ.
ಮುಂಚೂಣಿ ಕಾರ್ಯಕರ್ತರಿಗೆ ಬೂಸ್ಟರ್ ಡೋಸ್ ಹಾಗೂ 15ರಿಂದ 18 ವರ್ಷದೊಳಗಿನ ಮಕ್ಕಳಿಗೆ ಲಸಿಕೆ ನೀಡುವ ಕಾರ್ಯ ಕುಂಟುತ್ತ ಸಾಗಿದೆ. ತುಮಕೂರು ನಗರದ ಬಹುತೇಕ ಕಾಲೇಜುಗಳಲ್ಲಿಯೇ ಇನ್ನೂ ಲಸಿಕೆ ನೀಡಿಲ್ಲ.
ಜಿಲ್ಲೆಯ ವಸತಿಶಾಲೆಗಳು, ಹಾಸ್ಟೆಲ್‌ಗಳಲ್ಲಿ ಸೋಂಕು ಕಾಣಿಸಿಕೊಂಡಿರುವುದು ಆತಂಕ ಹೆಚ್ಚಿಸಿದೆ, ವಿದ್ಯಾರ್ಥಿ ಸಮೂಹದಲ್ಲಿ ಕರೊನಾ ವ್ಯಾಪಿಸುತ್ತಿದ್ದು ಸೋಂಕಿತ ಪ್ರಮಾಣ ಶೇ.10 ದಾಟಿದರೆ ಶಾಲೆ, ಕಾಲೇಜು ಬಂದ್ ಮಾಡುವ ಸಾಧ್ಯತೆಯಿದೆ.
ಭುವನಹಳ್ಳಿ ಹಾಸ್ಟೆಲ್ ವಿದ್ಯಾರ್ಥಿಗಳಿಗೆ ಸೋಂಕು: ಶಿರಾ ತಾಲೂಕು ಭುವನಹಳ್ಳಿ ಗ್ರಾಪಂ ವ್ಯಾಪ್ತಿಯಲ್ಲಿರುವ ಅಂಬೇಡ್ಕರ್ ವಸತಿ ಶಾಲೆಯ 25 ವಿದ್ಯಾರ್ಥಿಗಳಿಗೆ ಮಂಗಳವಾರ ಕರೊನಾ ದೃಢಪಟ್ಟಿದ್ದು, ಆತಂಕ ಹೆಚ್ಚಿಸಿದೆ. ನಾಲ್ವರು ಅಡುಗೆ ಸಿಬ್ಬಂದಿ ಹಾಗೂ ಶಿಕ್ಷಕರಿಗೂ ಸೋಂಕು ತಗುಲಿದೆ, ವಸತಿಶಾಲೆಯ ಎಲ್ಲ ಮಕ್ಕಳಿಗೂ ಆರ್‌ಟಿಪಿಸಿಆರ್ ಪರೀಕ್ಷೆಗೆ ಒಳಪಡಿಸಲಾಗಿದ್ದು ಮುಂಜಾಗ್ರತಾ ಕ್ರಮಕೈಗೊಳ್ಳಲಾಗಿದೆ. ವಸತಿ ಶಾಲೆಯಲ್ಲಿ 215 ವಿದ್ಯಾರ್ಥಿಗಳಿದ್ದು ಮಂಗಳವಾರ ಹಾಜರಿದ್ದ 193 ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಮತ್ತು ಸಿಬ್ಬಂದಿಯನ್ನು ಪರೀಕ್ಷೆಗೆ ಒಳಪಡಿಸಲಾಗಿದೆ. ಸೋಂಕಿತರ ಪೈಕಿ ಮೂವರು ವಿದ್ಯಾರ್ಥಿಗಳಿಗೆ ವಾಂತಿಯಾಗಿದೆ, ಉಳಿದವರಿಗೆ ರೋಗ ಲಕ್ಷಣ ಕಂಡುಬಂದಿಲ್ಲ. ಸೋಂಕು ಕಾಣಿಸಿಕೊಳ್ಳದ ವಿದ್ಯಾರ್ಥಿಗಳಿಗೆ ಸಮೀಪದ ಆಂಜನೇಯ ಸ್ವಾಮಿ ಕಲ್ಯಾಣ ಮಂಟಪದಲ್ಲಿ ವಾಸ್ತವ್ಯಕ್ಕೆ ವ್ಯವಸ್ಥೆ ಮಾಡಲಾಗಿದೆ.
ತಹಸೀಲ್ದಾರ್ ಮಮತಾ, ಬಿಇಒ ಶಂಕರಯ್ಯ, ಕಂದಾಯ ನಿರೀಕ್ಷಕ ಮಂಜುನಾಥ್, ಪಿಡಿಒ ಯೋಗಶ್ರೀನಿವಾಸ್, ಗ್ರಾಮಲೆಕ್ಕಿಗ ನರೇಂದ್ರ ಮತ್ತಿತರರು ಭೇಟಿ ನೀಡಿ ಪರಿಶೀಲನೆ ನಡೆಸಿದರು.
ನರ್ಸಿಂಗ್ ಕಾಲೇಜಿನಲ್ಲೂ ಸೋಂಕು : ಮಧುಗಿರಿ ಪಟ್ಟಣದ ರಾಘವೇಂದ್ರ ನರ್ಸಿಂಗ್ ಕಾಲೇಜಿನ 16 ವಿದ್ಯಾರ್ಥಿಗಳಿಗೆ ಕರೊನಾ ದೃಢಪಟ್ಟಿದೆ. ಪಶ್ಚಿಮ ಬಂಗಾಳ ಮತ್ತು ಕೇರಳ ಮೂಲದ ವಿದ್ಯಾರ್ಥಿಗಳೇ ಹೆಚ್ಚಿನ ಸಂಖ್ಯೆಯಲ್ಲಿರುವ ಕಾಲೇಜಿನಲ್ಲಿ ರೋಗಲಕ್ಷಣದ ಕಾರಣಕ್ಕೆ ನಾಲ್ವರು ವಿದ್ಯಾರ್ಥಿಗಳಿಗೆ ಕರೊನಾ ಪರೀಕ್ಷೆ ಮಾಡಿದಾಗ ಸೋಂಕು ದೃಢವಾಗಿದೆ. ಕಾಲೇಜಿನಲ್ಲಿ ಉಳಿದ 12 ವಿದ್ಯಾರ್ಥಿಗಳಿಗೂ ಪರೀಕ್ಷೆ ಮಾಡಿದಾಗ ಒಟ್ಟು 16 ಪ್ರಕರಣ ಪತ್ತೆಯಾಗಿದೆ. ಎಲ್ಲರನ್ನೂ ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ತಹಸೀಲ್ದಾರ್ ಕೆ.ಅರುಂದತಿ ಮತ್ತು ಪುರಸಭೆ ಮುಖ್ಯಾಧಿಕಾರಿ ನಜ್ಮಾ, ಆರೋಗ್ಯ ನಿರೀಕ್ಷಕ ಬಾಲಾಜಿ ಕಾಲೇಜಿಗೆ ಭೇಟಿ ನೀಡಿ ಪರೀಶಿಲಿಸಿದರು.