ಕೋಲಾರ: ಕರೊನಾ ಮಹಾಮಾರಿಗೆ ಸೋಮವಾರ ಜಿಲ್ಲೆಯಲ್ಲಿ ಸೋಂಕಿತರೊಬ್ಬರು ಬಲಿಯಾಗಿದ್ದು, ಹೊಸದಾಗಿ 10 ಮಂದಿಗೆ ಸೋಂಕು ಕಾಣಿಸಿಕೊಂಡಿದ್ದರೆ 10 ಮಂದಿ ಗುಣಹೊಂದಿದ್ದಾರೆ.
ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದ ಕೆಜಿಎಫ್‌ನ ಬೆಮೆಲ್ ಕಾರ್ಮಿಕ (59) ಆರ್.ಎಲ್.ಜಾಲಪ್ಪ ಆಸ್ಪತ್ರೆಗೆ ದಾಖಲಾಗಿದ್ದು, ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಇದರೊಂದಿಗೆ ಜಿಲ್ಲೆಯಲ್ಲಿ ಕರೊನಾಗೆ ಬಲಿಯಾದವರ ಸಂಖ್ಯೆ 4ಕ್ಕೆ ಏರಿಕೆಯಾಗಿದೆ.
10 ಮಂದಿಗೆ ಸೋಂಕು: ಕೋಲಾರ, ಕೆಜಿಎಫ್ ತಲಾ 2, ಬಂಗಾರಪೇಟೆ 1 ಹಾಗೂ ಮುಳಬಾಗಿಲಿನಲ್ಲಿ 5 ಹೊಸ ಪ್ರಕರಣಗಳು ದೃಢಪಟ್ಟಿವೆ. ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 184ಕ್ಕೆ ಏರಿದಂತಾಗಿದೆ.
ಬಂಗಾರಪೇಟೆಯಲ್ಲಿ ಪಿ-12007ರ ಸಂಪರ್ಕದಿಂದ ಪುರುಷ (30 ವರ್ಷ) ಅಂತರ ಜಿಲ್ಲಾ ಪ್ರಯಾಣದ ಹಿನ್ನೆಲೆಯಲ್ಲಿ ಇಬ್ಬರು ಪುರುಷರು (46 ವರ್ಷ) ಪಿ-18095ರ ಸಂಪರ್ಕದಿಂದ 22 ವರ್ಷ ಮತ್ತು 26 ವರ್ಷದ ಮಹಿಳೆಯರಿಬ್ಬರಿಗೆ ಸೋಂಕು ಹರಡಿದೆ.
ಕೋಲಾರದ ಖಾಸಗಿ ಆಸ್ಪತ್ರೆಯಲ್ಲಿ ಆರೋಗ್ಯ ಕಾರ್ಯಕರ್ತೆ (22 ವರ್ಷ), ಕೆಜಿಎಫ್‌ನ ಪಿ-18096ರ ಸಂಪರ್ಕದಿಂದ ಒಟ್ಟು ಮೂವರಿಗೆ ಪುರುಷ (33 ವರ್ಷ ಮತ್ತು 26 ವರ್ಷ) ಹಾಗೂ ಮಹಿಳೆ (45) ಸೋಂಕು ಕಾಣಿಸಿಕೊಂಡಿದ್ದು, ಅದೇ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕೋಲಾರದ 40 ವರ್ಷದ ಮಹಿಳೆ ವಿಷಮಶೀತ ಜ್ವರದಿಂದ ಬಳಲುತ್ತಿದ್ದು, ಸೋಂಕು ದೃಢಪಟ್ಟು ಕೋವಿಡ್ ಆಸ್ಪತ್ರೆಯಲ್ಲಿದ್ದಾರೆ.
ಪ್ರಥಮ ಸಂಪರ್ಕದಲ್ಲಿದ್ದ 48 ಮಂದಿ ಹಾಗೂ ದ್ವಿತೀಯ ಸಂಪರ್ಕದಲ್ಲಿದ್ದ 36 ಮಂದಿಯನ್ನು ಕ್ವಾರಂಟೈನ್ ಮಾಡಲಾಗಿದೆ. 660 ಮಾದರಿ ಪರೀಕ್ಷಿಸಲಾಗಿದ್ದು, 111 ಮಾದರಿ ವರದಿ ನೆಗೆಟಿವ್ ಬಂದರೆ 10 ವರದಿ ಪಾಸಿಟಿವ್ ಆಗಿವೆ.
10 ಮಂದಿ ಬಿಡುಗಡೆ: ಕೋಲಾರ ತಾಲೂಕಿನ 5 ಜನ, ಕೆಜಿಎಫ್‌ನ 3 ಸೋಂಕಿತರು ಮತ್ತು ಮುಳಬಾಗಿಲಿನ ಇಬ್ಬರು ಗುಣಮುಖರಾಗಿ ಬಿಡುಗಡೆ ಹೊಂದಿದ್ದಾರೆ. ಇದರೊಂದಿಗೆ ಸೋಂಕಿತರಲ್ಲಿ ಗುಣಮುಖರಾದವರ ಸಂಖ್ಯೆ 82ಕ್ಕೆ ಏರಿಕೆಯಾಗಿದೆ.
ನಗರಸಭೆ ಸೀಲ್‌ಡೌನ್: ಕೋಲಾರ ನಗರಸಭೆ ಸಿಬ್ಬಂದಿಯೊಬ್ಬರಿಗೆ ಕರೊನಾ ದೃಢಪಟ್ಟಿದ್ದು, ನಗರಸಭೆ ಕಾರ್ಯಾಲಯ ಸೀಲ್‌ಡೌನ್ ಮಾಡಲಾಗಿದೆ. ಸೋಂಕಿತ ವ್ಯಕ್ತಿ ಚಾಲಕನಾಗಿದ್ದರು. ಜ್ವರ, ತಲೆನೋವು ಕಾಣಿಸಿಕೊಂಡಿದ್ದರಿಂದ ಚಿಕಿತ್ಸೆಗೆ ಒಳಗಾಗಿದ್ದರು. ಇವರ ಸಂಪರ್ಕದಲ್ಲಿ 6 ನಗರಸಭೆ ಸಿಬ್ಬಂದಿ ಸೇರಿ 20 ಜನರನ್ನು ಹೋಂ ಕ್ವಾರಂಟೈನ್ ಮಾಡಲಾಗಿದೆ.
ಹೋಳೂರಿನಲ್ಲೂ ಕರೊನಾ: ತಾಲೂಕಿನ ಹೋಳೂರು ಗ್ರಾಮದಲ್ಲಿ 48 ವರ್ಷದ ವ್ಯಕ್ತಿಯೊಬ್ಬರು ಕೆಲ ದಿನಗಳಿಂದ ಜ್ವರದ ಕಾರಣದಿಂದ ಆಸ್ಪತ್ರೆಗೆ ದಾಖಲಾಗಿದ್ದು, ಈಗ ಸೋಂಕು ದೃಢಪಟ್ಟಿದೆ. ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ವೆಂಕಟೇಶ್ ಸೋಂಕಿತನ ಕುಟುಂಬಸ್ಥರ ಮಾಹಿತಿ ಸಂಗ್ರಹಿಸಿದ್ದು, ಕುಟುಂಬದ 4 ಸದಸ್ಯರನ್ನೂ ಕ್ವಾರಂಟೈನ್ ಮಾಡಿದ್ದಾರೆ.
ಬಾಣಂತಿಗೆ ಸೋಂಕು: ಮಾಲೂರಿನ ಎಟ್ಟಕೋಡಿ ಗ್ರಾಮದ ಬಾಣಂತಿಗೆ ಕರೊನಾ ದೃಢಪಟ್ಟಿದೆ. ಗ್ರಾಮದ ಕುಂಬಾರಕೋಟೆ ಬೀದಿಯ ಗರ್ಭಿಣಿ ಹೆರಿಗೆಗೆ ತವರೂರು ತಮಿಳುನಾಡಿನ ಬಾಗಲೂರಿಗೆ ಹೋಗಿ ಹೊಸೂರಿನಲ್ಲಿ ಹೆರಿಗೆ ಮಾಡಿಸಿಕೊಂಡು ಮನೆಗೆ ಹಿಂತಿರುಗಿದ್ದು, 4 ದಿನಗಳ ಹಿಂದೆ ಎಟ್ಟಕೋಡಿಗೆ ಬಂದಿದ್ದರು. ಆರೋಗ್ಯದಲ್ಲಿ ಏರುಪೇರಾಗಿ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದಾಗ ಸೋಂಕು ದೃಢಪಟ್ಟು ಕೋವಿಡ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಇವರ ಒಂದೂವರೆ ತಿಂಗಳ ಮಗುವನ್ನು ನರ್ಸ್‌ಗಳು ಆರೈಕೆ ಮಾಡುತ್ತಿದ್ದಾರೆ. ಕುಂಬಾರಕೋಟೆ ಬೀದಿಯನ್ನು ಸೀಲ್ ಡೌನ್ ಮಾಡಲಾಗಿದೆ.
ಶಾಸಕರ ಸ್ವಗ್ರಾಮ ಸೀಲ್‌ಡೌನ್: ಮಾಲೂರು ಶಾಸಕ ಕೆ.ವೈ.ನಂಜೇಗೌಡರ ಸ್ವಗ್ರಾಮ ಕೊಮ್ಮನಹಳ್ಳಿಗೂ ಕರೊನಾ ಎಂಟ್ರಿ ಕೊಟ್ಟಿದೆ. ಬೆಂಗಳೂರಿನಲ್ಲಿ ಸಾಫ್ಟ್‌ವೇರ್ ಇಂಜಿನಿಯರ್ ಆಗಿದ್ದ ವ್ಯಕ್ತಿ ಸೋಂಕು ಹೆಚ್ಚಾದ ಹಿನ್ನೆಲೆಯಲ್ಲಿ ಸ್ವಗ್ರಾಮದಲ್ಲೇ ಇದ್ದು ಕೆಲಸ ಮಾಡಿಕೊಂಡಿದ್ದ. ಈತನಿಗೆ ಮದುವೆ ನಿಗದಿಯಾಗಿರುವ ಹಿನ್ನೆಲೆಯಲ್ಲಿ ಕಳೆದ ವಾರ ಒಡವೆ ಖರೀದಿಗೆ ಬೆಂಗಳೂರಿಗೆ ಹೋಗಿ ಬಂದ ನಂತರ ಆರೋಗ್ಯದಲ್ಲಿ ಏರುಪೇರಾಗಿದೆ. ಗಂಟಲು ದ್ರವ ಪರೀಕ್ಷೆಗೆ ಒಳಪಡಿಸಿದಾಗ ಸೋಂಕು ದೃಢಪಟ್ಟಿದೆ. ಗ್ರಾಮವನ್ನು ಸೀಲ್‌ಡೌನ್ ಮಾಡಲಾಗಿದೆ.
ಶಾಸಕರ ನಿವೇದನೆ: ಸ್ವಗ್ರಾಮ ಕೊಮ್ಮನಹಳ್ಳಿಯ ಟೆಕ್ಕಿಗೆ ಕರೊನಾ ದೃಢಪಟ್ಟ ಹಿನ್ನೆಲೆಯಲ್ಲಿ ಕುಂದುಕೊರತೆ ಹೇಳಿಕೊಂಡು ಯಾರೂ ತಮ್ಮನ್ನು ಭೇಟಿಯಾಗಲು ಮನೆಗೆ ಬರಬೇಡಿ, ಸಮಸ್ಯೆಗಳ ಬಗ್ಗೆ ದೂರವಾಣಿ ಇಲ್ಲವೇ ಸಾಮಾಜಿಕ ಜಾಲತಾಣದ ಮೂಲಕ ಗಮನಕ್ಕೆ ತಂದರೆ ಬಗೆಹರಿಸಿಕೊಡುವುದಾಗಿ ಶಾಸಕ ಕೆ.ವೈ. ನಂಜೇಗೌಡ ಸಾರ್ವಜನಿಕರಲ್ಲಿ ನಿವೇದನೆ ಮಾಡಿಕೊಂಡಿದ್ದಾರೆ.