ಜಿಲ್ಲೆ

ಕರೊನಾ ತಡೆಗೆ ಸಜ್ಜಾಗಿದೆ ಜಿಲ್ಲಾಡಳಿತ

Tumakuru

ತುಮಕೂರು:ಕರೊನಾ ಸೋಂಕು ತಡೆಯಲು ಕೇಂದ್ರ ಸರ್ಕಾರ 'ರಾಷ್ಟ್ರೀಯ ವಿಪತ್ತು' ಎಂದು ಘೊಷಿಸಿ ಮುನ್ನೆಚ್ಚರಿಕೆ ವಹಿಸುವಂತೆ ಸೂಚಿಸಿದ್ದು, ಜಿಲ್ಲಾಡಳಿತ ಎಲ್ಲ ರೀತಿಯ ನಿಯಂತ್ರಣಾ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಡಾ.ಕೆ.ರಾಕೇಶ್‌ಕುಮಾರ್ ಹೇಳಿದರು.

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವಿದೇಶದಿಂದ ಜಿಲ್ಲೆಗೆ 94 ಜನ ಪ್ರಯಾಣ ಬೆಳೆಸಿದ್ದು, ಅವರಲ್ಲಿ 83 ಜನರನ್ನು ಮನೆಗಳಲ್ಲಿಯೇ ಪ್ರತ್ಯೇಕಿಸಿಡಲಾಗಿದೆ ಎಂದರು.

8 ಜನರು 28 ದಿನಗಳ ನಿಗಾವಧಿ ಮುಗಿಸಿದ್ದಾರೆ ಮೂವರು ಮರಳಿ ವಿದೇಶಕ್ಕೆ ಪ್ರಯಾಣ ಮಾಡಿದ್ದಾರೆ. 8 ಜನರು ರಕ್ತ, ಗಂಟಲು ದ್ರವ ಮಾದರಿಗಳ ಪರೀಕ್ಷೆ ನಡೆಸಿದ್ದು, ಇವರೆಲ್ಲರಿಗೂ ಸೋಂಕು ಇಲ್ಲದಿರುವುದು ದೃಢವಾಗಿದೆ ಎಂದರು.

ಪ್ರತೀದಿನ ಸೋಂಕಿನ ಬಗ್ಗೆ ಮುಂಜಾಗ್ರತಾ ಕ್ರಮ ಅನುಸರಿಸಲಾಗುತ್ತಿದೆ. ಹೆಚ್ಚು ಜನ ಸೇರುವ ಎಲ್ಲ ತರಹದ ಸನ್ನಿವೇಶಗಳಿಗೆ ನಿಷೇಧ ಹೇರಲಾಗಿದೆ. ಈ ವಿಷಯದಲ್ಲಿ ಆರೋಗ್ಯ ಇಲಾಖೆಯ ಅಧಿಕಾರಿ, ಸಿಬ್ಬಂದಿಗೆ 3 ಹಂತದ ತರಬೇತಿ ಕೂಡ ನೀಡಲಾಗಿದೆ ಎಂದರು. ಆರೋಗ್ಯ ಸಿಬ್ಬಂದಿಗೆ ಮುನ್ನೆಚ್ಚರಿಕಾ ಕ್ರಮವಾಗಿ ಮಾಸ್ಕ್ ಮತ್ತು ಸ್ಯಾನಿಟೈಜರ್‌ಗಳನ್ನು ನೀಡಲಾಗಿದೆ. ಅಂಗನವಾಡಿ, ಆಶಾ ಕಾರ್ಯಕರ್ತೆಯರು ಹಾಗೂ ಸ್ಥಳೀಯ ಸಂಸ್ಥೆ ಸಹಕಾರದೊಂದಿಗೆ ಮನೆ-ಮನೆಗೆ ವೈರಸ್ ಬಗ್ಗೆ ಜಾಗೃತಿ ಮೂಡಿಸಲಾಗುತ್ತಿದೆ ಎಂದರು. ವಿದೇಶದಿಂದ ಪ್ರಯಾಣ ಬೆಳೆಸಿರುವವರ ಬಗ್ಗೆ ನಿಗಾವಹಿಸಿ ಕ್ರಮ ಕೈಗೊಳ್ಳಲಾಗಿದೆ. ಜಿಲ್ಲೆಯಲ್ಲಿ 100 ಐಸೋಲೇಶನ್ ವಾರ್ಡ್‌ಗಳನ್ನು ಗುರುತಿಸಲಾಗಿದ್ದು ಜಿಲ್ಲೆಯಲ್ಲಿರುವ 242 ಖಾಸಗಿ ಕ್ಲಿನಿಕ್‌ಗಳಲ್ಲಿಯೂ ಸೂಚನೆ ನೀಡಲಾಗಿದೆ ಎಂದರು. ಶ್ರೀದೇವಿ ಮತ್ತು ಸಿದ್ದಾರ್ಥ ಮೆಡಿಕಲ್ ಕಾಲೇಜಿನಲ್ಲಿ ಕಂಟೋನೆಂಟ್ ಐಸೋಲೇಶನ್ ವಾರ್ಡ್‌ಗಳನ್ನು ತೆರೆಯಲಾಗಿದೆ, ಪ್ರತಿನಿತ್ಯ ಖಾಸಗಿ ಕ್ಲಿನಿಕ್‌ಗಳು ಜಿಲ್ಲಾಡಳಿತಕ್ಕೆ ವರದಿ ಸಲ್ಲಿಸಲು ನಿರ್ದೇಶಿಸಲಾಗಿದೆ ಎಂದರು. ಜ್ವರ, ನೆಗಡಿ, ಕೆಮ್ಮು, ತಲೆನೋವು, ಉಸಿರಾಟದ ತೊಂದರೆ ಹಾಗೂ ಭೇದಿಯಂತಹ ಲಕ್ಷಣಗಳು ಕಂಡು ಬಂದರೆ ಹತ್ತಿರದ ಆಸ್ಪತ್ರೆಗಳಲ್ಲಿ ತಪಾಸಣೆ ಮಾಡಿಸಿಕೊಳ್ಳಲು ಸಲಹೆ ನೀಡಿದರು.

ಜನದಟ್ಟಣೆ ಸೇರುವ ಸಂತೆ, ಜಾತ್ರೆ, ಶಾಲಾ-ಕಾಲೇಜು, ಸಿನಿಮಾ ಮಂದಿರ, ಪಬ್, ಕ್ಲಬ್‌ಗಳನ್ನು ತಾತ್ಕಾಲಿಕವಾಗಿ ಮುಚ್ಚಲು ಆದೇಶ ಹೊರಡಿಸಲಾಗಿದೆ ಎಂದರು. ಜಿಪಂ ಸಿಇಒ ಶುಭಾ ಕಲ್ಯಾಣ್, ಡಿಹೆಚ್‌ಒ ಡಾ.ಚಂದ್ರಿಕಾ, ಜಿಲ್ಲಾ ಸರ್ಜನ್ ಡಾ.ವೀರಭದ್ರಯ್ಯ, ಎಎಸ್‌ಸಿ ಉದೇಶ್ ಸುದ್ದಿಗೋಷ್ಠಿಯಲ್ಲಿ ಇದ್ದರು.

ಸೋಂಕು ತಡೆಗಟ್ಟಲು ಕ್ರಮ ಅಗತ್ಯ: ಕರೊನಾ ಸೋಂಕು ತಡೆಗಟ್ಟಲು ಮಹಾನಗರ ಪಾಲಿಕೆ ಸಾಕಷ್ಟು ಮುಂಜಾಗ್ರತಾ ಕ್ರಮಕೈಗೊಂಡಿದೆ. ಆದರೆ, ನಗರವನ್ನು ಸ್ವಚ್ಛವಾಗಿಡುವ ಪೌರಕಾರ್ಮಿಕರಿಗೆ ಸುರಕ್ಷತಾ ಸಾಧನಗಳನ್ನು ನೀಡಿಲ್ಲದಿರುವುದು ಆತಂಕಕಾರಿ ಎಂದು ಮಾಜಿ ಸಚಿವ ಸೊಗಡುಶಿವಣ್ಣ ಹೇಳಿದರು.

ಜಗತ್ತಿಗೆ ಸಾಂಕ್ರಾಮಿಕ ರೋಗ ಬಂದಿದ್ದು, ಮನೆ ಜತೆಗೆ ನಮ್ಮ ಪರಿಸರ ಸ್ವಚ್ಛವಾಗಿಟ್ಟುಕೊಳ್ಳಬೇಕಿದೆ. ಈ ಕಾರ್ಯಕ್ಕೆ ಎಲ್ಲರ ಸಹಕಾರ ಅಗತ್ಯವಿದೆ. ನಗರದ ಸ್ವಚ್ಛತೆ ಕಾಪಾಡುವ ಕಾರ್ಪೋರೇಷನ್ ಅಂಗಳವೇ ಸ್ವಚ್ಛವಾಗಿಲ್ಲ. ಪೂರ್‌ಹೌಸ್ ಕಾಲನಿಯಲ್ಲಿ ದನದ ಮಾಂಸ ಅಂಗಡಿಗಳ ಸುತ್ತಮುತ್ತ ಅನೈರ್ಮಲ್ಯದಿಂದ ಕೂಡಿದೆ. ಹೆಲ್ತ್ ಇನ್‌ಸ್ಪೆಕ್ಟರ್‌ಗಳು, ಪರಿಸರ ಇಂಜಿನಿಯರ್‌ಗಳೇ ಕಚೇರಿಗಳಲ್ಲಿ ಕಾಣುತ್ತಿಲ್ಲ. ಇನ್ನೂ ಸ್ವಚ್ಛತೆಗೆ ಏನು ಕ್ರಮವಹಿಸುವರು ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತರಾಟೆಗೆ ತೆಗೆದುಕೊಂಡರು. ಪೌರಕಾರ್ಮಿಕರು ಮುಖಗವುಸು, ಗಮ್‌ಬೂಟ್, ಕೈಗವುಸು ಯಾವುದೇ ಸುರಕ್ಷತಾ ಸಾಧನಗಳಿಲ್ಲದೆ ನಗರದಲ್ಲಿ ಸ್ವಚ್ಛತೆ ಕಾರ್ಯದಲ್ಲಿ ತೊಡಗಿದ್ದಾರೆ. ಈ ಬಗ್ಗೆ ಯಾವೊಬ್ಬ ಅಧಿಕಾರಿಗಳೂ ಗಮನಹರಿಸಿಲ್ಲ. ಇನ್ನೂ ಮನೆ, ಮನೆ ಕಸ ಸಂಗ್ರಹಿಸುವ ಆಟೋ ಡ್ರೈವರ್‌ಗಳು, ಕಸ ಸಂಗ್ರಹಿಸುವ ಸಿಬ್ಬಂದಿಗೆ ಮೊದಲು ಆರೋಗ್ಯ ತಪಾಸಣೆ ಮಾಡಬೇಕು. ಕರೊನಾ ಹರಡುವುದನ್ನು ತಡೆಗಟ್ಟುವ ಹೋರಾಟಕ್ಕೆ ಪ್ರತಿಯೊಬ್ಬರ ಸಹಕಾರ ಅಗತ್ಯವಿದೆ. ಇನ್ನಾದರೂ ಆಯುಕ್ತರು ಎಚ್ಚೆತ್ತುಕೊಳ್ಳಬೇಕು ಎಂದರು.

ವಿದೇಶದಿಂದ 50-60 ಮಂದಿ ನಗರಕ್ಕೆ ಮರಳಿದ್ದಾರೆ. ಇವರನ್ನೆಲ್ಲಾ ತಪಾಸಣೆಗೊಳಪಡಿಸಲಾಗಿದೆ. ಜಿಲ್ಲೆಯಲ್ಲಿ ಎಲ್ಲಿಯೂ ಕರೊನಾ ಶಂಕಿತ ಲಕ್ಷಣಗಳು ಕಂಡುಬಂದಿಲ್ಲ. ಜಿಲ್ಲಾ ಆಸ್ಪತ್ರೆಯಲ್ಲಿ ಸುಸಜ್ಜಿತ ಐಸೋಲೇಶನ್ ವಾರ್ಡ್ ಅನ್ನು ಸಿದ್ಧಪಡಿಸಲಾಗಿದೆ. ಅದೇ ರೀತಿ ಸಿದ್ಧಗಂಗಾ ಆಸ್ಪತ್ರೆ, ಶ್ರೀದೇವಿ ಆಸ್ಪತ್ರೆ ಸೇರಿ ಖಾಸಗಿ ಆಸ್ಪತ್ರೆಗಳಲ್ಲಿ ಕರೊನಾ ಸಂಬಂಧಿಸಿದಂತೆ ಚಿಕಿತ್ಸೆಗೆ ಪ್ರತ್ಯೇಕ ವಾರ್ಡ್‌ಗಳನ್ನು ವ್ಯವಸ್ಥೆ ಮಾಡಲಾಗಿದೆ. ಕರೊನಾ ವಿರುದ್ಧ ಹೋರಾಟಕ್ಕೆ ಕಂಕಣಬದ್ಧರಾಗಿದ್ದು ಜನರು ಆತಂಕ ಪಡುವ ಅಗತ್ಯವಿಲ್ಲ ಎಂದು ಹೇಳಿದರು. ಎಂಎಸ್‌ಐಎಲ್ ಮಾಜಿ ಅಧ್ಯಕ್ಷ ಎಂ.ಬಿ.ನಂದೀಶ್, ಜಯಸಿಂಹ, ಬನಶಂಕರಿಬಾಕು, ಕೆ.ಪಿ.ಮಹೇಶ್, ಊರುಕೆರೆ ನಂಜುಂಡಪ್ಪ, ಕೆ.ಹರೀಶ್, ಶಬ್ಬೀರ್ ಅಹ್ಮದ್, ಮದನ್ ಸಿಂಗ್ ಮತ್ತಿರರು ಹಾಜರಿದ್ದರು.

ಅಜ್ಜಗೊಂಡನಹಳ್ಳಿ ತ್ಯಾಜ್ಯ ವಿಲೇವಾರಿ ಘಟಕದಲ್ಲೇ ಕಸದ ರಾಶಿಗಳು ಬೃಹತ್ ಬೆಟ್ಟಗಳಂತಾಗಿವೆ. ವೈಜ್ಞಾನಿಕ ಕಸವಿಲೇವಾರಿ ಸ್ಥಗಿತಗೊಂಡಿದೆ. ಘಟಕದಲ್ಲಿನ ಯಂತ್ರೋಪಕರಣಗಳು ಕೆಟ್ಟುನಿಂತಿವೆ. ಇಲ್ಲಿನ ಸಿಬ್ಬಂದಿ ಯಾವುದೇ ಸುರಕ್ಷತಾ ಸಾಧನಗಳಿಲ್ಲದೆ ಕಾರ್ಯನಿರ್ವಹಿಸುತ್ತಿದ್ದು ಕಸ ವಿಲೇವಾರಿ ಹಣವನ್ನು ಲೂಟಿ ಮಾಡಲಾಗುತ್ತಿದೆ. ಸೊಗಡುಶಿವಣ್ಣ ಮಾಜಿ ಸಚಿವ