ಶನಿವಾರಸಂತೆ: ಫೀಲ್ಡ್ ಮಾರ್ಷಲ್ ಜನರಲ್ ಕಾರ್ಯಪ್ಪ ಅವರು ದೇಶಕಂಡ ವೀರಸೇನಾನಿ, ಸಮಯ ಪಾಲಕ, ಅತ್ಯುನ್ನತ್ತ ದೇಶಪ್ರೇಮಿಯಾಗಿದ್ದರು ಎಂದು ಶನಿವಾರಸಂತೆ ವಿಘ್ನೇಶ್ವರ ಬಾಲಕಿಯರ ಪ್ರೌಢಶಾಲಾ ಶಿಕ್ಷಕ ಕೆ.ಪಿ.ಜಯಕುಮಾರ್ ಶ್ಲಾಘಿಸಿದರು.
ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಜನಿಸಿದ ಶನಿವಾರಸಂತೆಯ ನಿವಾಸ (ಪ್ರಸ್ತುತ ಸಾರ್ವಜನಿಕ ಗ್ರಂಥಾಲಯ)ದಲ್ಲಿ ಮಂಗಳವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿ, ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಅವರ ತಂದೆ ಕೋದಂಡೇರ ಮಾದಪ್ಪ ಅವರು ಶನಿವಾರಸಂತೆಯಲ್ಲಿ ಕಂದಾಯ ಇಲಾಖೆ ಅಧಿಕಾರಿಯಾಗಿದ್ದರು. ಆ ಸಂದರ್ಭದಲ್ಲಿ ಕಾರ್ಯಪ್ಪ ಜನಿಸಿದರು. ಕೆಲವು ವರ್ಷ ಇಲ್ಲಿನ ಪರಿಸರದಲ್ಲಿ ಬಾಲ್ಯವನ್ನು ಕಳೆದ ಕಾರ್ಯಪ್ಪ ನಂತರ ತಂದೆ ಬೇರೆಕಡೆಗೆ ವರ್ಗಾವಣೆಗೊಳ್ಳುತ್ತಾರೆ. ಅಲ್ಲಿ ವಿದ್ಯಾಬ್ಯಾಸ ಪೂರೈಸಿದ ನಂತರ ಕಾರ್ಯಪ್ಪ ಅವರು ಸೇನೆಗೆ ಸೇರುತ್ತಾರೆ. ಹಂತಹಂತವಾಗಿ ಸೇನೆಯ ಅತ್ಯುನತ ಹುದ್ದೆಗೇರುತ್ತಾರೆ ಎಂದರು.
ಕಾರ್ಯಪ್ಪ ಅವರು 1948ರ ಪಾಕ್ ಜತೆಗಿನ ಯುದ್ಧದಲ್ಲಿ ಸೈನ್ಯದ ಮುಂದಾಳತ್ವವನ್ನು ವಹಿಸುತ್ತಾರೆ. ಈ ಮೂಲಕ ಯುದ್ಧದಲ್ಲಿ ದೇಶಕ್ಕೆ ಜಯ ತಂದುಕೊಟ್ಟಿದ್ದಾರೆ. 1962ರಲ್ಲಿ ನಡೆದ ಚೀನಾ ಮೇಲಿನ ಯುದ್ಧದಲ್ಲಿ ಅವರು ನಿವೃತ್ತರಾಗಿದ್ದರೂ ದೇಶಕ್ಕೆ ಸೇವೆ ಸಲ್ಲಿಸಲು ಮತ್ತೆ ಅವಕಾಶ ಕೊಡುವಂತೆ ಸರಕಾರಕ್ಕೆ ಪತ್ರ ಬರೆದು ಮನವಿ ಮಾಡಿಕೊಂಡಿದ್ದರು ಎಂದರು.
ವಿದ್ಯಾರ್ಥಿಗಳು ಸೇರಿದಂತೆ ಪ್ರತಿಯೊಬ್ಬರೂ ವೇರ ಸೇನಾನಿ ಕಾರ್ಯಪ್ಪ ಅವರಲ್ಲಿದ್ದ ದೇಶಪ್ರೇಮ, ಶಿಸ್ತು ನಿಯಮ, ಸಮಯ ಪಾಲನೆ ಇವುಗಳನ್ನು ತನ್ನಲ್ಲಿ ಅಳವಡಿಸಿಕೊಳ್ಳುವಂತೆ ಮನವಿ ಮಾಡಿದರು.
ಶನಿವಾರಸಂತೆ ಗ್ರಾಪಂ ಅಧ್ಯಕ್ಷೆ ಗೀತಾ ಹರೀಶ್ ಕಾರ್ಯಪ್ಪ ಅವರ ಭಾವಚಿತ್ರಕ್ಕೆ ಪುಷ್ಪಾರ್ಚಣೆ ಮಾಡುವ ಮೂಲಕ ಗೌರವ ಸಲ್ಲಿಸಿದರು. ಕಾರ್ಯಕ್ರಮದಲ್ಲಿ ನಿವೃತ್ತ ಸೈನಿಕರಾದ ಮಿಲ್ಟ್ರಿ ನಾಗರಾಜ್, ಬೆಳ್ಳಿಯಪ್ಪ, ಪಿಡಿಒ ಹರೀಶ್, ಸಾಹಿತಿ ನಯನತಾರಾ ಪ್ರಕಾಶ್ಚಂದ್ರ, ಕಾರ್ಯಕ್ರಮವನ್ನು ಆಯೋಜಿಸಿದ್ದ ಕಾರ್ಯಪ್ಪ ಅಭಿಮಾನಿ ಬಳಗದ ಬಿಲಾಲ್ ಅಮೀರ್‌ಜಾನ್, ಆರೋಗ್ಯ ಇಲಾಖೆಯ ಮುತ್ತಪ್ಪ, ಆಟೋ ಚಾಲಕರ ಸಂಘದ ಸತ್ಯ ಹಾಜರಿದ್ದರು. ವಿಘ್ನೇಶ್ವರ ಬಾಲಕಿಯರ ವಿದ್ಯಾಸಂಸ್ಥೆಯ ವಿದ್ಯಾರ್ಥಿನಿಯರು ಕಾರ್ಯಪ್ಪ ಅವರು ಜನಿಸಿದ ಮನೆಯ ಸುತ್ತಮುತ್ತ ಸ್ವಚ್ಛಗೊಳಿಸಿ, ಶ್ರಮದಾನ ಮಾಡಿದರು.