ಸಿಂದಗಿ ಪಟ್ಟಣದ ಸಾರಂಗಮಠದಲ್ಲಿ ಶತಮಾನ ಪೂರೈಸಿದ ಗಣ್ಯ ವರ್ತಕರನ್ನು ಡಾ. ಪ್ರಭುಸಾರಂಗದೇವ ಶಿವಾಚಾರ್ಯರು ಸನ್ಮಾನಿಸಿ ಗೌರವಿಸಿದರು. ಶಾಸಕ ಅಶೋಕ ಮನಗೂಳಿ, ವಿಶ್ವನಾಥ ಗೋಲಾ, ಬಾಬು ಕಮತಗಿ, ಶಿವಪ್ಪಗೌಡ ಬಿರಾದಾರ, ವಿಜಯಕುಮಾರ ಕುಲಕರ್ಣಿ, ಸೈಯ್ಯದ್ ಕಾಶಿಂ ಹುಸೇನಿ ದಾದಾಪೀರ ಮಗರಬಿ, ಎಸ್.ಎಂ. ಬಿರಾದಾರ ಇದ್ದರು. 
ಜಿಲ್ಲೆ

ಹಿರಿಯರಿಂದ ಬಂದ ವೃತ್ತಿ ಪ್ರೀತಿ ಅಗತ್ಯ

ಗಿರೀಶ ಸಗರ

ಸಿಂದಗಿ: ಶತಮಾನಗಳ ತಲೆಮಾರಿನ ವರ್ತಕ ಕುಟುಂಬಗಳ ವೃತ್ತಿ ಪ್ರಾಮಾಣಿಕತೆ, ಶ್ರಮದಾಯಕ ಸಮಾಜಮುಖಿ ಸೇವೆಯ ಜತೆಗೆ ಸಹಕಾರ, ವ್ಯಾಪಾರ ಹಾಗೂ ಸಾವಿರ ಹೆರಿಗೆಯ ಸೂಲಗಿತ್ತಿಯರ ಕಾಯಕ ಶ್ರದ್ಧೆಯನ್ನು ಗುರುತಿಸಿ ಗೌರವಿಸುವ ಮೂಲಕ ಸಾರಂಗಮಠವು ತನ್ನ ಸಮಾಜೋದ್ಧಾರ್ಮಿಕ ಹಿರಿಮೆಯನ್ನು ಹೆಚ್ಚಿಸಿಕೊಂಡಿದೆ ಎಂದು ಶಾಸಕ ಅಶೋಕ ಮನಗೂಳಿ ಹೇಳಿದರು.

ಪಟ್ಟಣದ ಸಾರಂಗಮಠದಲ್ಲಿ ಚೆನ್ನವೀರ ಸ್ವಾಮೀಜಿಗಳ ಪ್ರತಿಷ್ಠಾನ ಹಮ್ಮಿಕೊಂಡಿದ್ದ ನಗರದ ಗಣ್ಯ ವರ್ತಕರಿಗೆ ಹಾಗೂ ಶತಾಯುಷಿಗಳ ಸನ್ಮಾನ ಸಮಾರಂಭದಲ್ಲಿ ಅವರು ಮಾತನಾಡಿದರು.

ನಗರದಲ್ಲಿನ ವಿ.ಎಂ. ಕುಲಕರ್ಣಿ ಬಟ್ಟೆ ವ್ಯಾಪಾರವು ಸದ್ಯ 6ನೆಯ ತಲೆಮಾರನ್ನು ಕಂಡಿದೆ. ಇಂತಹ ಅಂಗಡಿಯಲ್ಲಿ ಕೆಲಸ ಮಾಡಿದವರಲ್ಲಿ ನನ್ನ ತಂದೆಯವರೂ ಒಬ್ಬರಾಗಿದ್ದರು.

ಹಿರಿಯರಿಂದ ಆರಂಭಗೊಂಡ ವ್ಯಾಪಾರವನ್ನು ಮುಂದುವರಿಸಿಕೊಂಡು ಶತಕದ ಹೆಜ್ಜೆಯನ್ನೂ ಸರಿಗಟ್ಟಿಸಿರುವ ಕುಲಕರ್ಣಿ ಸೇರಿದಂತೆ ಪಟ್ಟಣದ ಅನೇಕ ಕುಟುಂಬಗಳು ತಮ್ಮ ಪೂರ್ವಿಕರ ವೃತ್ತಿಯನ್ನು ಪ್ರೀತಿಸಿ ಮುಂದುವರಿಸಿಕೊಂಡು ಬಂದಿರುವುದು ಅದ್ವಿತೀಯ ಸಾಧನೆಗಳಲ್ಲೊಂದು ಎಂದರು.

ಆದಿಶೇಷ ಮಠದ ವೀರರಾಜೇಂದ್ರ ಸ್ವಾಮೀಜಿಗಳು ಆಶೀರ್ವಚನ ನೀಡಿ, ಸಾರಂಗಮಠದ ಧಾರ್ಮಿಕ ಹಿರಿಮೆಯೊಂದಿಗೆ ಪಟ್ಟಣದಲ್ಲಿ ಶತಾಯುಷಿ ಜೀವನ ಕಂಡ ಮತ್ತು ಶತಮಾನ ಪೂರೈಸಿದ ವ್ಯಾಪಾರಿ ಕುಟುಂಬಗಳನ್ನು ಮಾದರಿಯಾಗಿ ಬಿಂಬಿಸುವ ಮೂಲಕ ಸಮಾಜಕ್ಕೆ ಮೇಲ್ಪಂತೋಕ್ತಿ ಹಾಕಿದ್ದಾರೆ ಎಂದರು.

ಸನ್ಮಾನ ಸ್ವೀಕರಿಸಿದ ಅಡತ್ ವರ್ತಕ ನೆಹರು ಪೋರವಾಲ ಮಾತನಾಡಿ, ನಮ್ಮ ಪೂರ್ವಜರಿಗೆ ವ್ಯಾಪಾರ ಮಾಡಲು ಶ್ರೀಮಠದ ಲಿಂ. ಚೆನ್ನವೀರ ಸ್ವಾಮೀಜಿಗಳು ಜಾಗೆ ನೀಡಿದ್ದರು ಎಂದರು.

ಬೆಲ್ಲದ ವ್ಯಾಪಾರಿ ಅಶೋಕ ವಾರದ ಮಾತನಾಡಿ, ವಕೀಲಕಿ ವೃತ್ತಿಯನ್ನು ತೊರೆದು ಹಿರಿಯರು ನಡೆಸುತ್ತಿದ್ದ ವ್ಯಾಪಾರವನ್ನು ಗಟ್ಟಿಗೊಳಿಸಿ, ವಿವಿಧ ವ್ಯಾಪಾರಗಳನ್ನು ಮಾಡುತ್ತ ಹೊಸ ತಲೆಮಾರಿಗೆ ವೃತ್ತಿ ಪ್ರೀತಿಯನ್ನು ಮುಂದುವರಿಸಿಕೊಂಡು ಬಂದಿದ್ದೇವೆ ಎಂದರು.

ಪಟಾಕಿ ವ್ಯಾಪಾರಿ ವಿಶ್ವನಾಥ ಗೋಲಾ (94), ಟೇಲರ್ ಸೈಯ್ಯದ್ ಕಾಶಿಂ ಹುಸೇನಿ ದಾದಾಪೀರ ಮಗರಬಿ (94) ಸಹಕಾರಿ ಕ್ಷೇತ್ರದ ಶಿವಪ್ಪಗೌಡ ಬಿರಾದಾರ (92), ಸೂಲಗಿತ್ತಿ ನಾಜುಕಮಾ ಮರ್ತೂರ (90), ಕಿರಾಣಿ ವ್ಯಾಪಾರಿ ಬಾಬು ಕಮತಗಿ, ಬಟ್ಟೆ ವ್ಯಾಪಾರಿ ವಿಜಯಕುಮಾರ ಕುಲಕರ್ಣಿ ಅವರನ್ನು ಸಾರಂಗಮಠದ ಡಾ. ಪ್ರಭು ಸಾರಂಗದೇವ ಶಿವಾಚಾರ್ಯರು ಗೌರವಿಸಿ ವೃತ್ತಿ ಮತ್ತು ಶ್ರಮದಾಯಕ ಸೇವೆ ನಿರಂತರ ವೃದ್ಧಿಗೊಳ್ಳಲಿ ಎಂದು ಹಾರೈಸಿದರು.

ಜಿಲ್ಲಾ ಸರ್ಕಾರಿ ಆಸ್ಪತ್ರೆಯ ಡಾ. ಸಂಪತ್ ಗುಣಾರಿ ಅವರು ತಮ್ಮ ಪರಿವಾರದ ಪರವಾಗಿ ಡಾ. ಪ್ರಭು ಸಾರಂಗದೇವ ಶಿವಾಚಾರ್ಯರಿಗೆ ತುಲಾಭಾರ ನಡೆಸಿದರು.