ಬೆಂಗಳೂರು: ಮಾನಸಿಕ ಆರೋಗ್ಯವನ್ನು ಯುವಜನರು ಕಾಪಾಡಿಕೊಳ್ಳುವ ಜತೆಗೆ ಮಾನಸಿಕ ಅಸ್ವಸ್ಥರನ್ನು ಪ್ರೀತಿ, ಕಾಳಜಿಯಿಂದ ಕಾಣಬೇಕು ಎಂದು ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ಉಪ ಕಾರ್ಯದರ್ಶಿ ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶ ಶ್ರೀಧರ ಎಂ ತಿಳಿಸಿದರು.
ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ, ಬೆಂಗಳೂರು ನಗರ ಜಿಲ್ಲಾಡಳಿತ, ನಗರ ಜಿಲ್ಲಾ ಪಂಚಾಯತ್ ಹಾಗೂ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ (ಮಾನಸಿಕ ಆರೋಗ್ಯ ವಿಭಾಗ) ಸಂಯುಕ್ತ ಆಶ್ರಯದಲ್ಲಿ ಆರ್.ಸಿ. ಕಾಲೇಜಿನಲ್ಲಿ ಬುಧವಾರ ಹಮ್ಮಿಕೊಂಡಿದ್ದ ವಿಶ್ವ ಸ್ಕೀಜೋಫ್ರೀನಿಯಾ ದಿನಾಚರಣೆ ಉದ್ಘಾಟಿಸಿ ಮಾತನಾಡಿದರು.
ದೇಶದಲ್ಲಿ ಮಾನಸಿಕ ಅಸ್ವಸ್ಥರ ಸಂಖ್ಯೆ ಹೆಚ್ಚಿದ್ದು ಅವರಿಗೆ ಉತ್ತಮ ಚಿಕಿತ್ಸೆ ಹಾಗೂ ಆರೈಕೆ ಬೇಕಿದೆ. ಇದನ್ನು ಸರ್ಕಾರ ಮಾಡುತ್ತಿದ್ದರೂ, ನಾಗರಿಕರು ಕೂಡ ಮಾನಸಿಕ ರೋಗದಿಂದ ಬಳಲುತ್ತಿರುವವರ ಬಗ್ಗೆ ಸಹಾನುಭೂತಿ ವ್ಯಕ್ತಪಡಿಸಬೇಕಿದೆ. ಕಾನೂನು ಸೇವೆಗಳ ಪ್ರಾಧಿಕಾರದ ವತಿಯಿಂದ ದೊರೆಯುವ ಉಚಿತ ಕಾನೂನು ಸೇವೆಗಳ ಸದುಪಯೋಗ ಪಡೆದುಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.
ಮೊಬೈಲ್ ಬಳಕೆಯಿಂದ ದೂರವಿರಿ:
ನಗರ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ರವೀಂದ್ರನಾಥ್ ಎಂ ಮೇಟಿ ಮಾತನಾಡಿ, ದೈನಂದಿನ ಕಾರ್ಯದಲ್ಲಿ ಉತ್ತಮ ಜೀವನ ಶೈಲಿಯ ಪದ್ಧತಿಗಳನ್ನು ಅಳವಡಿಸಿಕೊಂಡು ಮಾನಸಿಕ ಆರೋಗ್ಯವನ್ನು ವೃದ್ಧಿಸಿಕೊಳ್ಳಬಹುದು. ಅನವಶ್ಯಕವಾಗಿ ಮೊಬೈಲ್ ಬಳಕೆ ಮಾಡುವುದರಿಂದ ದೂರ ಇರಬೇಕು ಎಂದು ಸಲಹೆ ನೀಡಿದರು.
ಇದೇ ವೇಳೆ ಮನೋವೈದ್ಯ ಡಾ. ಚೇತನ್ ಕುಮಾರ್ ಅವರು ವಿಶ್ವ ಸ್ಕಿಜೋಫ್ರೀನಿಯಾ ದಿನದ ಬಗ್ಗೆ ಉಪನ್ಯಾಸ ನೀಡಿ, ಮಾನಸಿಕ ಆರೋಗ್ಯದ ಕುರಿತು ಹೆಚ್ಚಿನ ಮಾಹಿತಿಗೆ ಹಾಗೂ ಉಚಿತ ಚಿಕಿತ್ಸೆಗಾಗಿ ಸಮೀಪದ ಸರ್ಕಾರಿ ಆಸ್ಪತ್ರೆಗೆ (ಮನೋಚೈತನ್ಯ ಶಿಬಿರ) ಭೇಟಿ ನೀಡಬಹುದು. ಉಚಿತ ದೂರವಾಣಿ ಸಂಖ್ಯೆ 14416 ಕರೆ ಮಾಡಿ ಆಪ್ತ ಸಮಾಲೋಚನೆ ಹಾಗೂ ಹೆಚ್ಚಿನ ಮಾಹಿತಿ ಪಡೆಯಬಹುದು ಎಂದರು.
ಕಾರ್ಯಕ್ರಮದಲ್ಲಿ ನಗರ ಜಿಲ್ಲಾ ಶಸ್ತ್ರಚಿಕಿತ್ಸಕ ಡಾ. ಸುರೇಶ್ ರೆಡ್ಡಿ, ಡಾ. ನಾಗರಾಜು ಎಂ.ಜಿ., ಮನೋಶಾಸ್ತ್ರಜ್ಞ ಪ್ರಭು ಎಲ್, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಎಂ.ರೇವಣ್ಣ, ಆರ್.ಸಿ ಕಾಲೇಜಿನ ಆಡಳಿತ ಮಂಡಳಿ ಸದಸ್ಯರು ಹಾಗೂ ಆರೋಗ್ಯ ಶಿಕ್ಷಣಾಧಿಕಾರಿಗಳು ಪಾಲ್ಗೊಂಡಿದ್ದರು.