ಮಂಗಳೂರು: ದಕ್ಷಿಣ ಕನ್ನಡ ಜಿಲ್ಲಾ ಗೃಹರಕ್ಷಕ ದಳ ಮತ್ತು ಪೌರರಕ್ಷಣಾ ಪಡೆ ಇದರ ಸಂಯುಕ್ತ ಆಶ್ರಯದಲ್ಲಿ ಜೀವರಕ್ಷಾ ಟ್ರಸ್ಟ್ ಮತ್ತು ಫಾದರ್ ಮುಲ್ಲರ್ ಆಸ್ಪತ್ರೆ, ಮಂಗಳೂರು ಇವರ ಸಹಯೋಗದೊಂದಿಗೆ ನಗರದ ಮೇರಿಹಿಲ್‌ನಲ್ಲಿರುವ ದಕ್ಷಿಣ ಕನ್ನಡ ಜಿಲ್ಲಾ ಗೃಹರಕ್ಷಕದಳ ಕಚೇರಿಯಲ್ಲಿ ಶುಕ್ರವಾರ ಗೃಹರಕ್ಷಕರಿಗೆ ಹೃದಯ ಸ್ತಂಭನ ಮರುಪೂರಣ ಕೌಶಲ್ಯ ತರಬೇತಿ ಶಿಬಿರ ನಡೆಯಿತು.
ಜೀವರಕ್ಷಾ ಟ್ರಸ್ಟ್‌ನ ಮಂಗಳೂರು ವಲಯದ ವ್ಯವಸ್ಥಾಪಕ ಡಾ.ಕಿಶನ ರಾವ್ ಬಾಳಿಲ ಶಿಬಿರ ಉದ್ಘಾಟಿಸಿದರು. ಪ್ರಸ್ತುತ ಯುವಕರು ಹೆಚ್ಚಿನ ಸಂಖ್ಯಯಲ್ಲಿ ಹೃದಯಾಘಾತಕ್ಕೊಳಗಾಗುತ್ತಿದ್ದು, ಎಲ್ಲ ಕಡೆಗಳಲ್ಲಿ ವೈದ್ಯರ ಲಭ್ಯತೆ ಇರುವುದಿಲ್ಲ. ಈ ನಿಟ್ಟಿನಲ್ಲಿ ಸಮಾಜದಲ್ಲಿ ಸಾಮಾನ್ಯ ಜನರೂ ಕೂಡ ಆರೋಗ್ಯ ತುರ್ತು ಪರಿಸ್ಥಿತಿಗಳನ್ನು ನಿಭಾಯಿಸಲು ಸನ್ನದ್ದರಾಗಬೇಕಾಗಿದೆ. ಈ ಹಿನ್ನಲೆಯಲ್ಲಿ ರಾಜೀವ್ ಗಾಂಧಿ ವಿಶ್ವ ವಿದ್ಯಾಲಯದ ಅಂಗ ಸಂಸ್ಥೆಯಾದ ಜೀವರಕ್ಷಾ ಟ್ರಸ್ಟ್ ವತಿಯಿಂದ ರಾಜ್ಯದೆಲ್ಲೆಡೆ ಸಾಮಾನ್ಯ ಜನರಿಗೆ ಹೃದಯ ಪುನಶ್ಚೇತನ ಕೌಶಲ್ಯ ತರಬೇತಿ ನೀಡಲಾಗುತ್ತದೆ. ಸಮಾಜದ ಆರೋಗ್ಯ ರಕ್ಷಿಸುವಲ್ಲಿ ಬಹು ಮುಖ್ಯ ಭೂಮಿಕೆ ವಹಿಸುವ ಗೃಹರಕ್ಷಕರಿಗೆ ವಿಶೇಷ ತರಬೇತಿ ನೀಡಿ ಸಮಾಜದ ಜನರ ಜೀವ ರಕ್ಷಿಸಲು ಸನ್ನದ್ದರಾಗಿದ್ದಾರೆ ಎಂದರು.
ದಕ್ಷಿಣ ಕನ್ನಡ ಜಿಲ್ಲಾ ಗೃಹರಕ್ಷಕ ದಳದ ಸಮಾದೇಷ್ಟ ಡಾ.ಮುರಲೀಮೋಹನ್ ಚೂಂತಾರು ಅಧ್ಯಕ್ಷತೆ ವಹಿಸಿದ್ದರು. ಜಗತ್ತಿನಲ್ಲಿ ಸಾವಿಗೆ ಕಾರಣವಾಗುವ ರೋಗಗಳಲ್ಲಿ ಹೃದಯ ಸ್ತಂಭನ ಮತ್ತು ಹೃದಯಾಘಾತಕ್ಕೆ ಅಗ್ರಸ್ಥಾನ ಇದೆ. ಪ್ರತಿ 100 ರಲ್ಲಿ 60 ಮಂದಿ ಹೃದಯ ಸಂಬಂಧಿ ರೋಗಗಳಿಂದ ಸಾವನ್ನಪ್ಪುತ್ತಾರೆ. ಹೃದಯ ಸ್ತಂಭನವಾದಾಗ ತಕ್ಷಣವೇ ಸೂಕ್ತ ರೀತಿಯಲ್ಲಿ ಸ್ಪಂದಿಸಿ ಹೃದಯ ಪುನಶ್ಚೇತನ ಪ್ರಕ್ರಿಯೆ ಮಾಡಿದಲ್ಲಿ ಶೇ.50 ರೋಗಿಗಳನ್ನು ಬದುಕಿಸಲು ಸಾಧ್ಯವಿದೆ. ಈ ಹಿನ್ನಲೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿನ ಎಲ್ಲ ಗೃಹರಕ್ಷಕರಿಗೆ ಮತ್ತು ಪೌರರಕ್ಷಣಾ ಕಾರ‌್ಯಕರ್ತರಿಗೆ ಈ ಹೃದಯ ಸ್ತಂಭನ ಮರುಪೂರಣಾ ಕೌಶಲ್ಯ ತರಬೇತಿ ನೀಡಿ ಅವರನ್ನು ಜೀವರಕ್ಷಕರನ್ನಾಗಿ ಸಿದ್ದಪಡಿಸಲಾಗುತ್ತದೆ ಎಂದರು.
ಸಂಪನ್ಮೂಲ ವ್ಯಕ್ತಿ ಡಾ.ನಮೃತಾ ಶೆಟ್ಟಿ ಮಾತನಾಡಿ, ಹೃದಯ ಸ್ತಂಭನವಾದಾಗ ನೀವು ಇಂದು ಕಲಿತ ವಿಚಾರಗಳನ್ನು ತಕ್ಷಣವೇ ಕಾರ‌್ಯರೂಪಕ್ಕೆ ತಂದಲ್ಲಿ, ಜನರ ಜೀವ ಉಳಿಸಿದ ಸಾರ್ಥಕತೆ ನಿಮಗೆ ದೊರಕುತ್ತದೆ. ಇದಕ್ಕೆ ಬೆಲೆ ಕಟ್ಟಲು ಸಾಧ್ಯವಾಗದು. ಈ ನಿಟ್ಟಿನಲ್ಲಿ ಪ್ರತೀ ಗೃಹರಕ್ಷಕರೂ ಈ ತರಬೇತಿ ಪಡೆದಲ್ಲಿ ವೈದ್ಯರ ಮೇಲಿನ ಜವಾಬ್ದಾರಿ ಮತ್ತು ಒತ್ತಡ ಸ್ವಲ್ಪ ಕಡಿಮೆಯಾಗಬಹುದು ಎಂದರು.
ಕೋರ್ಸ್ ಡೈರೆಕ್ಟರ್‌ಗಳಾದ ಡಾ.ಶೈಲಜಾ ಕಟ್ಟಿ ಹಾಗೂ ಜಿನ್ಸಿ ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿದ್ದರು. ಉಪ ಸಮಾದೇಷ್ಟ ರಮೇಶ್ ವಂದಿಸಿದರು. 15 ಮಂದಿ ಗೃಹರಕ್ಷಕರಿಗೆ ಈ ತರಬೇತಿಯನ್ನು ನೀಡಿ ಪ್ರಮಾಣ ಪತ್ರವನ್ನು ವಿತರಿಸಲಾಯಿತು.