ಜಿಲ್ಲೆ

ಅವಸಾನದ ಅಂಚಿನಲ್ಲಿ ಏಲಕ್ಕಿ ಬೆಳೆ

ಸುನಿಲ್ ಪೊನ್ನೇಟಿ ಮಡಿಕೇರಿ

ಒಂದೊಮ್ಮೆ ಕೊಡಗು ಎಂದ ಕೂಡಲೇ ಘಮ ಘಮಿಸುವ ಏಲಕ್ಕಿ ನೆನಪಿಗೆ ಬರುತ್ತಿತ್ತು. ದಟ್ಟ ಕಾಡು ಮತ್ತು ಹೆಚ್ಚು ಮಳೆ ಬೀಳುವ ಇಲ್ಲಿಯ ವಾತಾವರಣ ಏಲಕ್ಕಿ ಬೆಳೆಗೆ ಹೇಳಿ ಮಾಡಿಸಿದಂತಿದ್ದರೂ, ವರ್ಷದಿಂದ ವರ್ಷಕ್ಕೆ ಉತ್ಪಾದನೆಯ ಪ್ರಮಾಣ ಕಡಿಮೆ ಆಗುತ್ತಿದೆ. ಬಹುತೇಕ ಏಲಕ್ಕಿ ತೋಟಗಳು ಕಾಫಿ ತೋಟಗಳಾಗಿ ಪರಿವರ್ತನೆ ಆಗಿದ್ದರೆ, ಉಳಿದಿದ್ದ ಅಲ್ಪಸ್ವಲ್ಪ ಬೆಳೆ ರೋಗ ಬಾಧೆಯಿಂದಾಗಿ ಅವಸಾನದ ಅಂಚಿನಲ್ಲಿನಲ್ಲಿದೆ.

ಪ್ರಸ್ತುತ ದಿನಗಳಲ್ಲಿ ಪ್ರವಾಸೋದ್ಯಮದಿಂದಾಗಿ ಜಗತ್ತಿನ ಭೂಪಟದಲ್ಲಿ ಗುರುತಿಸಿಕೊಂಡಿರುವ ಕೊಡಗು ಮೊದಲೆಲ್ಲಾ ಕಿತ್ತಳೆ, ಜೇನು ಹಾಗೂ ಏಲಕ್ಕಿ ಬೆಳೆಗೆ ಹೆಸರಾಗಿತ್ತು. ಹಾಲೇರಿ ರಾಜರ ಅಳ್ವಿಕೆ ನಂತರ ಬಂದ ಬ್ರಿಟಿಷರ ಕಾಲದಲ್ಲೇ ಇಲ್ಲಿಯ ವಿಶಿಷ್ಟ ಪರಿಮಳದ ಏಲಕ್ಕಿ ಸಾಂಬಾರ ಪದಾರ್ಥಗಳಲ್ಲಿ ಸ್ಥಾನ ಪಡೆದುಕೊಂಡಿತ್ತು. ಸವಿರುಚಿಯ ಕಿತ್ತಳೆ ಮತ್ತು ಅದ್ಭುತ ಸ್ವಾಧದ ಜೇನು ಬ್ರಿಟಿಷರ ಜತೆಗೆ ಸಮುದ್ರೋಲ್ಲಂಘನೆಯನ್ನೂ ಮಾಡಿದ್ದವು. ಕೊಡಗಿನಲ್ಲಿ ಕಿತ್ತಳೆ ಮತ್ತು ಜೇನು ದಶಕಗಳ ಹಿಂದಿನಿಂದಲೇ ಕಡಿಮೆಯಾಗುತ್ತಾ ಬಂದಿದ್ದರೂ ಏಲಕ್ಕಿ ಬೆಳೆ ಒಂದಿಷ್ಟು ಪ್ರದೇಶದಲ್ಲಿ ಉಳಿದುಕೊಂಡಿತ್ತು. ಆದರೆ ಇತ್ತೀಚಿನ ವರ್ಷಗಳಲ್ಲಿ ಏಲಕ್ಕಿ ಉತ್ಪಾದನೆ ಕೂಡ ಕಡಿಮೆ ಆಗುತ್ತಾ ಬಂದಿದೆ.

ಜಿಲ್ಲೆಯಲ್ಲೇ ಅತಿ ಹೆಚ್ಚು ಮಳೆ ಬೀಳುವ ಮಡಿಕೇರಿ ತಾಲೂಕಿನ ಭಾಗಮಂಡಲ, ನಾಪೋಕ್ಲು, ಆವಂದೂರು, ಬೇಂಗೂರು, ಚೇರಂಬಾಣೆ, ಮುಕ್ಕೊಡ್ಲು, ಸೋಮವಾರಪೇಟೆ ತಾಲೂಕಿನ ಶಾಂತಳ್ಳಿ ಹೋಬಳಿಯ ಬೆಟ್ಟದಳ್ಳಿ, ಪುಷ್ಪಗಿರಿ, ಹಂಚಿನಳ್ಳಿ, ಕುಮಾರಳ್ಳಿ, ನಾಡ್ನಳ್ಳಿ, ಹೆಗ್ಗಡಮನೆ, ಕುಡಿಗಾಣ, ಬೀದಳ್ಳಿ, ಕೊತ್ನಳ್ಳಿ, ತಡ್ಡಿಕೊಪ್ಪ, ಮಲ್ಲಳ್ಳಿ, ಬೀದಳ್ಳಿ, ಹರಗ, ಗರ್ವಾಲೆ, ಸೂರ್ಲಬ್ಬಿ, ಕುಮಾರಳ್ಳಿ, ಮಾಲ್‌ಮಾನೆ, ಕೂತಿ, ತೋಳೂರುಶೆಟ್ಟಳ್ಳಿ, ಬಿಳಿಗೇರಿ, ತಾಕೇರಿ, ಕಿರಗಂದೂರು, ತಲ್ತಾರೆ ಶೆಟ್ಟಳ್ಳಿ ಭಾಗದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಏಲಕ್ಕಿ ಬೆಳೆಯಲಾಗುತ್ತಿತ್ತು. ಈ ಬೆಳೆಗೆ ವಾರ್ಷಿಕ ಸರಾಸರಿ ೧೫೦ ರಿಂದ ೨೫೦ ಇಂಚು ಮಳೆ ಬೇಕು. ಜತೆಗೆ ತಂಪಾದ ಹವಾಮಾನವೂ ಇರಬೇಕು.

ಜಿಲ್ಲೆಯಲ್ಲಿ ಸುಮಾರು ೪೦೦ ಹೆಕ್ಟೇರ್ ಪ್ರದೇಶದಲ್ಲಿ ಏಲಕ್ಕಿ ಬೆಳೆಯಲಾಗುತ್ತಿದೆ. ೨೦೧೭-೧೮ರಲ್ಲಿ ಜಿಲ್ಲೆಯಲ್ಲಿ ೩,೬೧೮ ಮೆಟ್ರಿಕ್ ಟನ್ ಏಲಕ್ಕಿ ಬೆಳೆಯಲಾಗಿತ್ತು. ೨೦೨೧-೨೨ರಲ್ಲಿ ಈ ಪ್ರಮಾಣ ೩೦೫೫ ಮೆಟ್ರಿಕ್ ಟನ್‌ಗೆ ಇಳಿದಿದೆ. ಕಳೆದ ೫ ವರ್ಷಗಳ ಏಲಕ್ಕಿ ಉತ್ಪಾದನೆ ಪ್ರಮಾಣ ತಾಲೂಕುವಾರು ಗಮನಿಸುವುದಾದರೆ ೨೦೧೭-೧೮ರಲ್ಲಿ ಮಡಿಕೇರಿ ತಾಲೂಕಿನಲ್ಲಿ ೨೧೭೮, ವಿರಾಜಪೇಟೆ ತಾಲೂಕಿನಲ್ಲಿ ೭೦೭ ಹಾಗೂ ಸೋಮವಾರಪೇಟೆ ತಾಲೂಕಿನಲ್ಲಿ ೭೩೪ ಮೆಟ್ರಿಕ್ ಟನ್ ಏಲಕ್ಕಿ ಬೆಳೆಯಲಾಗಿದೆ. ೨೦೧೮-೧೯ ರಲ್ಲಿ ಮಡಿಕೇರಿ ತಾಲೂನಲ್ಲಿ ೧೮೩೭, ವಿರಾಜಪೇಟೆ ತಾಲೂಕಿನಲ್ಲಿ ೬೦೫ ಹಾಗೂ ಸೋಮವಾರಪೇಟೆ ತಾಲೂಕಿನಲ್ಲಿ ೬೨೧ ಮೆಟ್ರಿಕ್ ಟನ್ ಏಲಕ್ಕಿ ಉತ್ಪಾದನೆ ಆಗಿದೆ.

೨೦೧೯-೨೦ರಲ್ಲಿ ಮಡಿಕೇರಿ ತಾಲೂಕಿನಲ್ಲಿ ೧೮೧೨, ವಿರಾಜಪೇಟೆ ತಾಲೂಕಿನಲ್ಲಿ ೫೯೩ ಹಾಗೂ ಸೋಮವಾರಪೇಟೆ ತಾಲೂಕಿನಲ್ಲಿ ೬೦೮ ಮೆಟ್ರಿಕ್ ಟನ್ ಏಲಕ್ಕಿ ಬೆಳೆದರೆ, ೨೦೨೦-೨೧ರಲ್ಲಿ ಮಡಿಕೇರಿ ತಾಲೂಕಿನಲ್ಲಿ ೧೭೪೩, ವಿರಾಜಪೇಟೆ ತಾಲೂಕಿನಲ್ಲಿ ೫೧೬ ಹಾಗೂ ಸೋಮವಾರಪೇಟೆ ತಾಲೂಕಿನಲ್ಲಿ ೫೧೩ ಮೆಟ್ರಿಕ್ ಟನ್ ಏಲಕ್ಕಿ ಉತ್ಪಾದನೆ ಆಗಿದೆ. ೨೦೨೦-೨೨ರಲ್ಲಿ ಮಡಿಕೇರಿ ತಾಲೂಕಿನಲ್ಲಿ ೧೮೨೨, ವಿರಾಜಪೇಟೆ ತಾಲೂಕಿನಲ್ಲಿ ೫೯೯ ಹಾಗೂ ಸೋಮವಾರಪೇಟೆ ತಾಲೂಕಿನಲ್ಲಿ ೬೩೪ ಮೆಟ್ರಿಕ್ ಟನ್ ಏಲಕ್ಕಿ ಬೆಳೆಯಲಾಗಿದೆ ಎಂದು ತೋಟಗಾರಿಕೆ ಇಲಾಖೆಯ ಅಂಕಿ ಅಂಶಗಳು ಹೇಳುತ್ತವೆ.
ಏಲಕ್ಕಿ ಉತ್ಪಾದನೆ ವರ್ಷದಿಂದ ವರ್ಷಕ್ಕೆ ಇಳಿಕೆ ಆಗುತ್ತಿದ್ದರೂ ಸರಾಸರಿ ಬೆಲೆ ಕೂಡ ಇಳಿಕೆ ಆಗುತ್ತಿರುವುದು ಬೆಳೆಗಾರರಲ್ಲಿ ಆತಂಕ ಮೂಡಿಸಿದೆ.

೨೦೧೯-೨೦ರಲ್ಲಿ ಕೆಜಿಗೆ ೨,೯೦೮ರೂ. ಇದ್ದಿದ್ದು, ೨೦೨೩-೨೪ರಲ್ಲಿ ೧,೯೧೬ ಆಗಿದೆ. ೨೦೨೦-೨೧ರಲ್ಲಿ ೧,೪೭೮ ರೂ., ೨೦೨೧-೨೨ರಲ್ಲಿ ೯೯೬ರೂ., ೨೦೨೨-೨೩ರಲ್ಲಿ ೧,೧೧೪ ಬೆಲೆ ಇತ್ತು. ಬೆಲೆಯಲ್ಲಿನ ಇಂಥ ಅಸ್ಥಿರತೆ ಬೆಳೆಗಾರರನ್ನು ಏಲಕ್ಕಿ ಬೆಳೆಯಿಂದ ಹಿಂದೆ ಸರಿಯುವಂತೆ ಮಾಡಿದೆ. ಮುಂಗಾರು ಮಳೆಯಲ್ಲಿನ ವ್ಯತ್ಯಯ, ಅಕಾಲಿಕ ಮಳೆ, ಕಡಿಮೆಯಾಗುತ್ತಿರುವ ಮಳೆಯ ಪ್ರಮಾಣ, ಕಟ್ಟೆ ಹಾಗೂ ಕೊಳೆರೋಗವೂ ಏಲಕ್ಕಿ ಕೃಷಿ ಅವನತಿಗೆ ಕಾರಣವಾಗಿದೆ.

ಏಲಕ್ಕಿ ಬೆಳೆ ವಿನಾಶದ ಅಂಚಿನಲ್ಲಿರುವುದರಿಂದ ಬೆಳೆಗಾರರಿಗೆ ಪ್ರೋತ್ಸಾಹದ ರೀತಿಯಲ್ಲಿ ಭಾರತೀಯ ಸಾಂಬಾರು ಮಂಡಳಿಯ ವತಿಯಿಂದ ಕೆಲವೊಂದು ಯೋಜನೆಗಳನ್ನು ಅನುಷ್ಠಾನಗೊಳಿಸಲಾಗುತ್ತಿದೆ. ಮರುನಾಟಿಗೆ ಸಹಾಯಧನ ಕಾರ್ಯಕ್ರಮದಡಿಯಲ್ಲಿ ರೋಗಗ್ರಸ್ಥ ಹಳೆಯ ತೋಟಗಳಲ್ಲಿ ಮರುನಾಟಿ ವ್ಯವಸ್ಥಿತವಾಗಿ ಹೊಸ ಪ್ರದೇಶ ವಿಸ್ತರಿಸಲು ಸಾಮಾನ್ಯ ವರ್ಗದ ರೈತರಿಗೆ ತಗಲುವ ಘಟಕ ವೆಚ್ಚದ ಶೇ. ೩೩.೩೩ರಂತೆ ಹೆಕ್ಟೇರಿಗೆ ಗರಿಷ್ಠ ೭೫ ಸಾವಿರ ರೂ., ಪರಿಶಿಷ್ಟ ಜಾತಿ ಮತ್ತು ಪಂಗಡದ ರೈತರಿಗೆ ಶೇ.೭೫ರಂತೆ ೮೪ ಸಾವಿರ ರೂ. ಸಹಾಯಧನ ನೀಡಲಾಗುತ್ತದೆ.
ನೀರಿನ ಶೇಖರಣಾ ಘಟಕಕ್ಕೆ ಸಹಾಯಧನ ಕಾರ್ಯಕ್ರಮದಡಿಯಲ್ಲಿ ಸಾಮಾನ್ಯ ವರ್ಗದ ರೈತರಿಗೆ ನಿರ್ಮಾಣ ವೆಚ್ಚದ ಶೇ.೫೦ರಂತೆ ಘಟಕಕ್ಕೆ ಗರಿಷ್ಠ ೩೦ ಸಾವಿರ ರೂ., ಪರಿಶಿಷ್ಟ ಜಾತಿ ಮತ್ತು ಪಂಗಡದ ರೈತರಿಗೆ ಶೇ ೭೫ರಂತೆ ೪೫ ಸಾವಿರ ರೂ. ಸಹಾಯಧನ ನೀಡಲಾಗುವುದು. ಮಳೆ ನೀರು ಕೊಯ್ಲು ಘಟಕಕ್ಕೆ ಸಹಾಯಧನ ಕಾರ್ಯಕ್ರಮದಡಿಯಲ್ಲಿ ಸಾಮಾನ್ಯ ವರ್ಗದ ರೈತರಿಗೆ ಪ್ರತಿ ಘಟಕಕ್ಕೆ ನಿರ್ಮಾಣ ವೆಚ್ಚದ ಶೇ. ೩೩.೩೩ ರಂತೆ ಪ್ರತಿ ಘಟಕಕ್ಕೆ ಗರಿಷ್ಠ ೧೮ ಸಾವಿರ ರೂ., ಪರಿಶಿಷ್ಟ ಜಾತಿ ಮತ್ತು ಪಂಗಡದ ರೈತರಿಗೆ ಶೇ. ೭೫ರಂತೆ ೪೦ ಸಾವಿರ ರೂ. ಸಹಾಯಧನ ಕೊಡಲಾಗುತ್ತಿದೆ.

ಸುಧಾರಿತ ಏಲಕ್ಕಿ ಸಂಸ್ಕರಣಾ ಸಾಧನಗಳಿಗೆ ಸಹಾಯಧನ ಕಾರ್ಯಕ್ರಮದಡಿಯಲ್ಲಿ ಸಾಮಾನ್ಯ ವರ್ಗದ ರೈತರಿಗೆ ನಿರ್ಮಾಣ ವೆಚ್ಚದ ಶೇ. ೭೫ರಂತೆ ಪ್ರತಿ ಘಟಕಕ್ಕೆ ಗರಿಷ್ಠ ೧.೫೦ ಲಕ್ಷ ರೂ., ಪರಿಶಿಷ್ಟ ಜಾತಿ ಮತ್ತು ಪಂಗಡದ ರೈತರಿಗೆ ಶೇ. ೯೦ರಂತೆ ೩,೩೭,೫೦೦ ರೂ. ಸಹಾಯಧನ ನೀಡಲಾಗುತ್ತದೆ.
ತೋಟಗಾರಿಕೆ ಮಿಷನ್ ಯೋಜನೆಯಡಿಯಲ್ಲಿ ಏಲಕ್ಕಿ ಬೆಳೆಯ ಪ್ರದೇಶ ವಿಸ್ತರಣೆ ಕಾರ್ಯಕ್ರಮದಡಿ ಘಟಕ ವೆಚ್ಚದ ಶೇ.೪೦ರಂತೆ ಪ್ರತಿ ಹೆಕ್ಟೇರ್‌ಗೆ ಗರಿಷ್ಠ ೨೦ ಸಾವಿರ ರೂ. ಸಹಾಯಧನ ನೀಡಲಾಗುತ್ತಿದೆ. ತೋಟಗಾರಿಕೆ ಬೆಳೆಗಳ ಕೀಟ ಮತ್ತು ರೋಗಗಳ ಸಮಗ್ರ ನಿಯಂತ್ರಣ ಯೋಜನೆಯಡಿ ಸಸ್ಯ ಸಂರಕ್ಷಣೆ ಔಷಧಿಗಳಿಗೆ ಗರಿಷ್ಠ ೧ ಹೆಕ್ಟೇರ್‌ಗೆ ಶೇ.೭೫ ರಂತೆ ಸಾಮಾನ್ಯ ರೈತರಿಗೆ ೭.೫ ಸಾವಿರ ರೂ., ಪರಿಶಿಷ್ಟ ಪಂಗಡ ಅಥವಾ ಜಾತಿ ರೈತರಿಗೆ ಶೇ.೯೦ರಂತೆ ೯ ಸಾವಿರ ರೂ., ಸಹಾಯಧನ ಕೊಡಲಾಗುತ್ತಿದೆ.

ರಾಷ್ಟ್ರೀಯ ತೋಟಗಾರಿಕರ ಮಿಷನ್ ಯೋಜನೆಯಡಿ ಕೀಟ ಮತ್ತು ರೋಗಗಳ ನಿರ್ವಹಣೆ ಹಾಗೂ ಪೋಷಕಾಂಶಗಳ ನಿರ್ವಹಣೆಗಾಗಿ ಘಟಕ ವೆಚ್ಚದ ಶೇ. ೪೦ರಂತೆ ಗರಿಷ್ಠ ೧,೨೦೦ ರೂ.ನಂತೆ ೪ ಹೆಕ್ಟೇರ್ ವರೆಗೆ ಸಹಾಯಧನದ ಸೌಲಭ್ಯ ಇದೆ. ಹನಿ ನೀರಾವರಿ ಯೋಜನೆಯಡಿ ಎಲಕ್ಕಿ ಬೆಳೆಗೆ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ರೈತರಿಗೆ ಶೇ.೯೦ರಷ್ಟು ಮತ್ತು ಇತರೇ ರೈತರಿಗೆ ಶೇ.೭೫ರಷ್ಟು ಸಹಾಯಧನವನ್ನು ಗರಿಷ್ಠ ೨ ಹೆಕ್ಟೇರ್‌ವರೆಗೆ ಕೊಡಲಾಗುತದೆ. ೨ ಹೆಕ್ಟೇರ್‌ನಿಂದ ೫ ಹೆಕ್ಟೇರ್ ವರೆಗೆ ಎಲ್ಲಾ ವರ್ಗದ ರೈತರಿಗೆ ಶೇ.೪೫ರಷ್ಟು ಸಹಾಯಧನ ನೀಡಲಾಗುತ್ತಿದೆ.