ಜಿಲ್ಲೆ

ಕಾರಿನ ಗ್ಲಾಸ್ ಒಡೆದು ವಸ್ತು ದೋಚುವ ಗ್ಯಾಂಗ್

Dakshina Kannada

ಮಂಗಳೂರು: ನಗರದಲ್ಲಿ ಪಾರ್ಕ್ ಮಾಡಿದ ಕಾರುಗಳ ಗ್ಲಾಸ್ ಒಡೆದು ಒಳಗಿದ್ದ ಬ್ಯಾಗ್, ಲ್ಯಾಪ್‌ಟಾಪ್ ಮೊದಲಾದ ಸೊತ್ತುಗಳನ್ನು ದೋಚುವ ಉತ್ತರ ಭಾರತದ ಗ್ಯಾಂಗ್ ಕಾರ್ಯಾಚರಿಸುತ್ತಿದ್ದು, ಶುಕ್ರವಾರ ಒಂದೇ ದಿನ ಎರಡು ಪ್ರಕರಣಗಳು ದಾಖಲಾಗಿವೆ.

ಲೈಟ್‌ಹೌಸ್ ಹಿಲ್ ರಸ್ತೆಯಲ್ಲಿರುವ ಖಾಸಗಿ ಕಂಪನಿ ಏರಿಯಾ ಮ್ಯಾನೇಜರ್ ಪ್ರದೀಪ್ ರೈ ಮಾಲೀಕತ್ವದ ಕಾರನ್ನು ಕಚೇರಿಯ ಪಾರ್ಕಿಂಗ್ ಸ್ಥಳದಲ್ಲಿ ನಿಲ್ಲಿಸಲಾಗಿತ್ತು. ಅದರ ಬಲಭಾಗದ ಹಿಂಬದಿ ಗಾಜು ಒಡೆದು ಕಾರಿನೊಳಗಿದ್ದ 40 ಸಾವಿರ ರೂ., ಕಚೇರಿಗೆ ಸಂಬಂಧಿಸಿದ ದಾಖಲಾತಿಗಳಿದ್ದ ಬ್ಯಾಗನ್ನು ಕಳ್ಳರು ದೋಚಿದ್ದಾರೆ. ಬಂದರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಉರ್ವಸ್ಟೋರ್ ಮುಡಾ ಕಚೇರಿ ಎದುರು ನಿಲ್ಲಿಸಿದ್ದ ಅಭಿಷೇಕ್ ಎಂಬುವರಿಗೆ ಸೇರಿದ ಕಾರಿನ ಗಾಜು ಒಡೆದು ಲ್ಯಾಪ್‌ಟಾಪ್, ಐಪೋನ್ ಮತ್ತು ವಿವಿಧ ಬ್ಯಾಂಕ್‌ಗಳ ಚೆಕ್ ಹಾಳೆಗಳನ್ನು ಕಳವು ಮಾಡಿರುವ ಬಗ್ಗೆ ಉರ್ವ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಎರಡೂ ಕಡೆ ಒಂದೇ ಗ್ಯಾಂಗ್ ಕೃತ್ಯ ಎಸಗಿರುವ ಸಾಧ್ಯತೆ ಇದೆ. ಆರೋಪಿಗಳ ಸಿಸಿ ಕ್ಯಾಮರಾ ದೃಶ್ಯಾವಳಿಗಳು ಪೊಲೀಸರಿಗೆ ಲಭ್ಯವಾಗಿದ್ದು, ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ. ಸಾರ್ವಜನಿಕರು ಬೆಲೆ ಬಾಳುವ, ಅಮೂಲ್ಯ ಸೊತ್ತುಗಳನ್ನು ವಾಹನಗಳಲ್ಲಿ ಇಟ್ಟು ಹೋಗದಂತೆ ಪೊಲೀಸರು ತಿಳಿಸಿದ್ದಾರೆ.