ಮಂಗಳೂರು: ಪುತ್ತೂರಿನಲ್ಲಿ 2001ರಲ್ಲಿ ಕಾರು ಕಳವು ಪ್ರಕರಣದಲ್ಲಿ ಬಂಧಿತರಾಗಿ ಬಳಿಕ ಜಾಮೀನಿನ ಮೇಲೆ ಬಿಡುಗಡೆಗೊಂಡು ನ್ಯಾಯಾಲಯಕ್ಕೆ ವಿಚಾರಣೆಗೆ ಹಾಜರಾಗದೆ ತಲೆಮರೆಸಿಕೊಂಡಿದ್ದ ಕದ್ರಿ ನಿವಾಸಿ ಸುಧೀರ್ ಪ್ರಭು ಎಂಬಾತನನ್ನು ಪುತ್ತೂರು ನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.
2001 ಮಾ.8ರಂದು ಮಂಗಳೂರು ಹಂಪನಕಟ್ಟೆಯಿಂದ ಜಯಂತ ಎಂಬವರ ಬಾಡಿಗೆಗೆ ಕಾರನ ಸುಧೀರ್ ಪ್ರಭು ಮತ್ತು ಬಿ.ಎಂ. ಹನೀಫ ಬಾಡಿಗೆಗೆ ಪಡೆದು ಸಕಲೇಶಪುರ, ಹಾಸನ ಇತ್ಯಾದಿ ಕಡೆಗಳಲ್ಲಿ ಟಿಂಬರ್ ವ್ಯಾಪಾರದ ವಿಚಾರವಾಗಿ ಸುತ್ತಾಡಿ 13ರಂದು ಪುತ್ತೂರಿಗೆ ಬಂದು ಆರಾಧನಾ ಟೂರಿಸ್ಟ್ ಹೋಂ ನಲ್ಲಿ ತಂಗಿದ್ದರು. ಅಲ್ಲಿಂದ ಕಾರನ್ನು ಕಳ್ಳತನ ಮಾಡಿಕೊಂಡು ಹೋಗಿದ್ದರು. ನಂತರ ಕಳವು ಪ್ರಕರಣ ದಾಖಲಾಗಿ ಸದ್ರಿ ಆರೋಪಿಗಳು ದಸ್ತಗಿರಿಯಾಗಿ ನ್ಯಾಯಾಂಗ ಬಂಧನದಲ್ಲಿದ್ದರು. ಬಳಿಕ ಜಾಮೀನಿನ ಮೇಲೆ ಬಿಡುಗಡೆಯಾಗಿ ತಲೆಮರೆಸಿಕೊಂಡಿದ್ದರು. ಆರೋಪಿ ಹನೀಫ್‌ನನ್ನು 2018ರಲ್ಲಿ ಬಂಧಿಸಲಾಗಿತ್ತು.