ಮಂಗಳೂರು: ಬೈಕಂಪಾಡಿ ಬಳಿ ಸೋಮವಾರ ಬೆಳಗ್ಗಿನ ಜಾವ ನಡೆದ ಚಿನ್ನದ ವ್ಯಾಪಾರಿಯ ದರೋಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳು ದರೋಡೆ ಮಾಡಿಕೊಂಡ ಹೋಗಿದ್ದ ಉದ್ಯಮಿಯ ಕಾರು ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪತ್ತೆಯಾಗಿದ್ದು, ಪ್ರಕರಣದ ತನಿಖೆಗೆ ಮಹತ್ವದ ಸುಳಿವು ದೊರೆತಿದೆ.
ಮಹಾರಾಷ್ಟ್ರದ ಸಾಂಗ್ಲಿಯಿಂದ ಕುಟುಂಬದ ಜತೆ ಕಾರಿನಲ್ಲಿ ಕೇರಳದ ಪಯ್ಯನೂರಿಗೆ ತೆರಳುತ್ತಿದ್ದ ಚಿನ್ನದ ವ್ಯಾಪಾರಿ ಪಯ್ಯನೂರಿನ ವಿಕಾಸ್, ಪತ್ನಿ ರೂಪಾಲಿ ಹಾಗೂ ವಿಪುಲ್ ಅವರು ಪ್ರಯಾಣಿಸುತ್ತಿದ್ದ ಕಾರನ್ನು ಮೂರು ಕಾರುಗಳಲ್ಲಿ ಆಗಮಿಸಿದ 7 ಮಂದಿ ದರೋಡೆಕೋರರ ತಂಡ ಬೈಕಂಪಾಡಿ ಬಳಿ ತಡೆದು ನಿಲ್ಲಿಸಿ, ಉದ್ಯಮಿಗೆ ಹಲ್ಲೆ ನಡೆಸಿದೆ. ಬಳಿಕ ಉದ್ಯಮಿಯನ್ನು ಘಟನಾ ಸ್ಥಳದಲ್ಲಿ ಬಿಟ್ಟು ಉದ್ಯಮಿ ಪತ್ನಿ ಹಾಗು ಪುತ್ರನ ಸಹಿತ ಕಾರನ್ನು ದರೋಡೆಕೋರರು ಅಪಹರಿಸಿದ್ದಾರೆ. ಈ ಸಂದರ್ಭ ಮಹಿಳೆ ಕೈಯ್ಯಲ್ಲಿದ್ದ ಬ್ಯಾಗ್‌ನಲ್ಲಿ ಸುಮಾರು 150ಗ್ರಾಂ ಚಿನ್ನಾಭರಣ ಮತ್ತು ನಗದು ಇದ್ದು, ಅದನ್ನು ಸುಲಿಗೆ ಮಾಡಿ ಇಬ್ಬರನ್ನು ಕೂಡಾ ಕುಳೂರಿನಲ್ಲಿ ಇಳಿಸಿ ಕಾರಿನಲ್ಲಿ ಬಿಕರ್ನಕಟ್ಟೆ, ಮರೋಳಿ ಮೂಲಕ ಬಂಟ್ವಾಳ ಕಡೆಗೆ ತೆರಳಿದ್ದಾರೆ. ಆದರೆ ಮೈ ಮೇಲಿದ್ದ ಚಿನ್ನಾಭರಣ ಮುಟ್ಟಿಲ್ಲ. ಈ ಬಗ್ಗೆ ಪಣಂಬೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಪೊಲೀಸರ ಶೋಧ: ಘಟನೆ ಬೆಳಕಿಗೆ ಬರುತ್ತಿದ್ದಂತೆ ಪೊಲೀಸರು ತನಿಖೆ ಆರಂಭಿಸಿದ್ದಾರೆ. ದರೋಡೆ ಕೃತ್ಯ ಎಸಗಿದ ಬಳಿಕ ಆರೋಪಿಗಳು ಕಾರನ್ನು ಬಂಟ್ವಾಳ ವ್ಯಾಪ್ತಿಯ ನಿರ್ಜನ ಪ್ರದೇಶವೊಂದರಲ್ಲಿ ಬಿಟ್ಟು ಪರಾರಿಯಾಗಿರುವುದು ತನಿಖೆ ವೇಳೆ ಬೆಳಕಿಗೆ ಬಂದಿದೆ. ಸ್ಥಳಕ್ಕೆ ಭೇಟಿ ನೀಡಿದ ಪೊಲೀಸ್ ಅಧಿಕಾರಿಗಳು ಹಾಗೂ ತನಿಖಾ ತಂಡ ವಾಹನವನ್ನು ಪರಿಶೀಲಿಸಿದಾಗ, ಕಾರಿನೊಳಗೆ ಸಂಪೂರ್ಣ ಶೋಧ ನಡೆಸಿರುವುದು ಕಂಡುಬಂದಿದೆ. ವಾಹನದಲ್ಲಿದ್ದ ಎಲ್ಲಾ ವಸ್ತುಗಳನ್ನು ಅಸ್ತವ್ಯಸ್ತಗೊಳಿಸಿರುವುದಲ್ಲದೆ, ಸೀಟ್ ಕವರ್‌ಗಳನ್ನು ಸಹ ಹರಿದು ಒಳಭಾಗವನ್ನು ಪರಿಶೀಲಿಸಿರುವುದು ಗಮನಕ್ಕೆ ಬಂದಿದೆ. ಕಾರಿನಲ್ಲಿ ಚಿನ್ನ ಅಡಗಿಸಿ ತಂದಿರಬಹುದೆಂಬ ಲೆಕ್ಕಾಚಾರದಲ್ಲಿ ಇಡೀ ಕಾರನ್ನು ಜಾಲಾಡಿದ್ದಾರೆ. ಚಿನ್ನಾಭರಣ ಸಿಗದೇ ಇದ್ದಾಗ ಕಾರನ್ನು ಅಲ್ಲೇ ಬಿಟ್ಟು ತಾವು ಬಂದಿದ್ದ ಕಾರುಗಳಲ್ಲಿ ಪರಾರಿಯಾಗಿದ್ದಾರೆ.