ಹಾಸನ: ಅಪರಿಚಿತ ವ್ಯಕ್ತಿಯಿಂದ ಮನೆಯ ಮುಂದೆ ನಿಲ್ಲಿಸಿದ್ದ ಕಾರಿಗೆ ಬೆಂಕಿ ಹಚ್ಚಿ, ಕೇಳಲು ಹೋದವರ ಮೇಲೆ ಕಲ್ಲು ಎತ್ತಿ ಹಾಕಿ ಕೊಲೆ ಮಾಡಲು ಯತ್ನಸಿದ ವ್ಯಕ್ತಿಯನ್ನು ಪೆನ್ಷನ್ ಮೊಹಲ್ಲಾ ಠಾಣೆಯ ಪೊಲೀಸರು ಬಂಧಿಸಿದ್ದಾರೆ.
ಪೆನ್‌ಷನ್ ಮೊಹಲ್ಲಾದ ನಿವಾಸಿ ರಾಹಿಲ್ ಬಂಧಿತ ವ್ಯಕ್ತಿ.
ಶಾಂತಿನಗರದ ಮನೆಯೊಂದರ ಮುಂದೆ ನಿಲ್ಲಿಸಿದ್ದ ಕಾರಿಗೆ ಬಿಸಿಲು ತಾಗದಂತೆ ಬಟ್ಟೆಯನ್ನು ಕಟ್ಟಲಾಗಿತ್ತು. ಬುಧವಾರ ಸಂಜೆ 4 ಗಂಟೆಯ ಸಮಯದಲ್ಲಿ ಪಾಮಮತ್ತನಾಗಿ ಬಂದ ರಾಹಿಲ್ ಜೇಬಿನಿಂದ ಬೆಂಕಿ ಪಟ್ಟಣ ತೆಗೆದು ಬಟ್ಟೆಗೆ ಬೆಂಕಿ ಹಾಕಿದ್ದಾರೆ. ಇದರಿಂದ ಕಾರಿಗೂ ಬೆಂಕಿ ತಗುಲಿ ಹೊತ್ತಿ ಉರಿದಿದೆ. ಅಷ್ಟರಲ್ಲಿ ಅಕ್ಕಪಕ್ಕದ ಮನೆಯವರು ಬಂದು ನೀರು ಹಾಕಿ ಬೆಂಕಿ ನಂದಿಸಿದ್ದಾರೆ. ಆದರೂ ಕಾರಿನ ಬಲಭಾಗದ ಡೋರ್‌ಗಳು ಭಾಗಶಃ ಹಾನಿಗೀಡಾಗಿವೆ. ಈ ವೇಳೆ ಆರೋಪಿಯನ್ನು ಮನೆಯ ಮಾಲೀಕರಾದ ಸುಬ್ಬೇಗೌಡರು ಹಿಡಿಯಲು ಮುಂದಾದಾಗ ಆರೋಪಿ ಅಲ್ಲೆ ಬಿದ್ದಿದ್ದ ಸೈಜ್ ಕಲ್ಲನ್ನು ತೆಗೆದುಕೊಂಡು ಹೊಡೆಯಲು ಮುಂದಾಗಿದ್ದಾನೆ. ಆಗ ಸಾರ್ವಜನಿಕರು ಸೇರಿ ಆರೋಪಿಯನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಪೆನ್‌ಷನ್ ಮೊಹಲ್ಲಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.