ಜಿಲ್ಲೆ

ನಿಂತಿದ್ದ ಕ್ಯಾಂಟರ್​ಗೆ ಕಾರು ಡಿಕ್ಕಿ: ಮದುವೆ ಮುಗಿಸಿ ಮನೆಗೆ ಮರಳುತ್ತಿದ್ದ ಮೂವರ ದಾರುಣ ಸಾವು

ಹಾವೇರಿ: ನಿಂತಿದ್ದ ಕ್ಯಾಂಟರ್​ಗೆ ಕಾರು ಡಿಕ್ಕಿಯಾಗಿ ಸ್ಥಳದಲ್ಲೇ ಮೂವರು ಸಾವಿಗೀಡಾಗಿ, ಒಬ್ಬರು ಗಂಭೀರವಾಗಿ ಗಾಯಗೊಂಡಿರುವ ಘಟನೆ ರಾಣೇಬೆನ್ನೂರಿನ ರಾಷ್ಟ್ರೀಯ ಹೆದ್ದಾರಿ 4ರ ಕಮದೋಡ ಪೆಟ್ರೋಲ್ ಬಂಕ್ ಬಳಿ ನಡೆದಿದೆ.

ಹನುಮಂತಪ್ಪ (65), ಗೀತಾ (55) ಮತ್ತು ಶಿವಾನಿ (10) ಮೃತರು. ಗಾಯಾಳು ರೇಣುಕಾರನ್ನು ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಮೃತರು ಹರಿಹರ ತಾಲೂಕಿನ ಕುಂಬಳೂರು ಗ್ರಾಮದ ನಿವಾಸಿಗಳು.

ಅಪಘಾತದ ತೀವ್ರತೆಗೆ ಬಾಲಕಿಯ ಮುಖ ನಜ್ಜುಗುಜ್ಜಾಗಿದ್ದು, ಅಪಘಾತದ ಭೀಕರತೆ ಕಂಡು ದಾರಿಹೋಕರು ಬೆಚ್ಚಿಬಿದ್ದಿದ್ದಾರೆ. ಮದುವೆಗೆಂದು ಹುಬ್ಬಳ್ಳಿಗೆ ಹೋಗಿ ಹರಿಹರಕ್ಕೆ ಮರಳಿ ಬರುವಾಗ ಅಪಘಾತ ಸಂಭವಿಸಿದೆ.

ಕಾರು ಚಾಲಕನ ಅತಿವೇಗವೇ ಘಟನೆಗೆ ಕಾರಣ ಎನ್ನಲಾಗಿದೆ. ಘಟನಾ ಸ್ಥಳಕ್ಕೆ ಹಲಗೇರಿ ಠಾಣಾ ಪೊಲೀಸರು ಭೇಟಿ ನೀಡಿ ಪರೀಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. (ದಿಗ್ವಿಜಯ ನ್ಯೂಸ್​)