ಕಳಸ: ತಾಲೂಕು ಕೇಂದ್ರಕ್ಕೆ ಸಂಬಂಧಿಸಿದ ಕಚೇರಿಗಳನ್ನು ಕೂಡಲೇ ಆರಂಭಿಸಬೇಕು ಎಂದು ಲೋಕಸಭಾ ಸದಸ್ಯೆ ಶೋಭಾ ಕರಂದ್ಲಾಜೆ ಅವರಿಗೆ ಮನವಿ ಸಲ್ಲಿಸಲು ತೆರಳಿದಾಗ ಕಾರು ನಿಲ್ಲಿಸಲಿಲ್ಲ ಎಂಬ ಕಾರಣಕ್ಕೆ ಕಪ್ಪು ಬಾವುಟ ಪ್ರದರ್ಶಿಸಿ ಪ್ರತಿಭಟನೆ ಮಾಡಿದ ಜೆಡಿಎಸ್ ಕಾರ್ಯಕರ್ತರನ್ನು ಕಳಸ ಪೊಲೀಸರು ಬಂಧಿಸಿ, ನಂತರ ಬಿಡುಗಡೆಗೊಳಿಸಿದರು.
ಹೋಬಳಿಯಲ್ಲಿ ವಿವಿಧ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಲು ಗುರುವಾರ ಶೋಭಾ ಕರಂದ್ಲಾಜೆ, ಶಾಸಕ ಎಂ.ಪಿ.ಕುಮಾರಸ್ವಾಮಿ ಆಗಮಿಸಿದ್ದರು. ಹೊರನಾಡು ದೇಗುಲದಲ್ಲಿ ಪೂಜೆ ಮುಗಿಸಿ ಕಳಸಕ್ಕೆ ಬರುವ ವೆಂಕಟರಮಣ ದೇವಸ್ಥಾನದ ಸಮೀಪ ಜೆಡಿಎಸ್ ಕಾರ್ಯಕರ್ತರು ಸಂಸದರಿಗೆ ಕಳಸ ತಾಲೂಕು ಕೇಂದ್ರವನ್ನು ಕೂಡಲೇ ಕಾರ್ಯಾರಂಭ ಮಾಡಿಕೊಡಿ ಮತ್ತು ಅತಿವೃಷ್ಟಿ ಸಂತ್ರಸ್ತರಿಗೆ ಕೂಡಲೇ ಪರಿಹಾರ ಕೊಡಬೇಕು ಎಂದು ಒತ್ತಾಯಿಸಿ ಮನವಿ ಸಲ್ಲಿಸಲು ನಿಂತಿದ್ದರು. ಆದರೆ ಅದೇ ಮಾರ್ಗವಾಗಿ ಬಂದ ಸಂಸದರು, ವಾಹನ ನಿಲ್ಲಿಸದೆ ಮುಂದೆ ಸಾಗಿದಾಗ ಕಾರ್ಯಕರ್ತರು, ಸ್ಥಳದಲ್ಲೇ ಪ್ರತಿಭಟನೆ ನಡೆಸಿದರು. ಸಂಸದರ ವಿರುದ್ಧ ಘೊಷಣೆ ಕೂಗಿದರು. ಪರಿಸ್ಥಿತಿ ಮಿತಿ ಮೀರುತ್ತಿದ್ದಂತೆ ಕೂಡಲೇ 50ಕ್ಕೂ ಹೆಚ್ಚು ಕಾರ್ಯಕರ್ತರನ್ನು ಕಳಸ ಪೊಲೀಸರು ಬಂಧಿಸಿದರು.
ಬಂಧಿತ ಜೆಡಿಎಸ್ ಕಾರ್ಯಕರ್ತರನ್ನು ಬಸ್ನಲ್ಲಿ ಠಾಣೆ ಸಮೀಪ ಕರೆದುಕೊಂಡು ಬರುತ್ತಿದ್ದಂತೆ ಜೆಡಿಎಸ್ ಕಾರ್ಯಕರ್ತರು ಕಪ್ಪು ಬಾವುಟ ಪ್ರದರ್ಶಿಸಲು ಮುಂದಾದರು. ಕಪ್ಪು ಬಾವುಟಗಳನ್ನು ಪೊಲೀಸರು ವಶಪಡಿಸಿಕೊಂಡರು. ಪೊಲೀಸ್ ಠಾಣಾ ಆವರಣದಲ್ಲೇ ಕೆಲ ಕಾಲ ಪ್ರತಿಭಟನೆ ನಡೆಸಿ ಸಂಸದರ ನಡೆಯನ್ನು ತೀವ್ರವಾಗಿ ಖಂಡಿಸಿದರು. ಸಂಸದೆ ಶೋಭಾ ಕರಂದ್ಲಾಜೆ ನೂಜಿಯಲ್ಲಿ ರಸ್ತೆ ಕಾಮಗಾರಿ ಗುದ್ದಲಿ ಪೂಜೆ ನೆರವೇರಿಸಿ ವಾಪಸಾದ ನಂತರ ಬಂಧಿತರನ್ನು ಬಿಡುಗಡೆಗೊಳಿಸಿದರು.
ಕಳಸ ತಾಲೂಕು ಕೇಂದ್ರ ಮಾಡಲು ಬಿಜೆಪಿ ಸರ್ಕಾರಕ್ಕೆ ಸಾಧ್ಯವಾಗಲಿಲ್ಲ. ಆದರೆ ಜೆಡಿಎಸ್-ಕಾಂಗ್ರೆಸ್ ಸಮ್ಮಿಶ್ರ ಸರ್ಕಾರದ ಸಂದರ್ಭ ಎಚ್.ಡಿ.ಕುಮಾರಸ್ವಾಮಿ ಕಳಸವನ್ನು ತಾಲೂಕು ಕೇಂದ್ರವನ್ನಾಗಿ ಮಾಡಿದ್ದಾರೆ. ಇದಾಗಿ ಒಂದು ವರ್ಷ ಕಳೆದರೂ ತಾಲೂಕು ಕೇಂದ್ರವನ್ನು ಆರಂಭಿಸಲು ಸಾಧ್ಯವಾಗಿಲ್ಲ ಎಂದು ಮಾಜಿ ಶಾಸಕ ಬಿ.ಬಿ.ನಿಂಗಯ್ಯ ದೂರಿದರು.
ನಾವು ಯಾವುದೇ ಬಂಧನಕ್ಕೂ ಹೆದರಲ್ಲ. ಇನ್ನು ಎಲ್ಲದಕ್ಕೂ ತಯಾರಾಗಿದ್ದೇವೆ. ಮುಂದಿನ ದಿನದಲ್ಲಿ ಕಳಸ ತಾಲೂಕು ಕೇಂದ್ರದ ಕಾರ್ಯಾರಂಭಕ್ಕೆ ಒತ್ತಾಯಿಸಿ ಕಳಸ ಪಟ್ಟಣ ಬಂದ್ ಮಾಡುತ್ತೇವೆ. ಅಧಿಕಾರದಲ್ಲಿರುವ ಸಂಸದರ ಇಂತಹ ನಡೆ ಸರಿಯಲ್ಲ ಎಂದು ಮುಖಂಡ ಜಿ.ಕೆ.ಮಂಜಪ್ಪಯ್ಯ ಹೇಳಿದರು.
ಜೆಡಿಎಸ್ ಮುಖಂಡರಾದ ದೇವರಾಜ್, ರತ್ನಾಕರ್, ಬ್ರಹ್ಮದೇವ, ರವಿ ರೈ, ಅನಿಲ್ ಡಿಸೋಜ, ಮಹಮ್ಮದ್ ರಫೀಕ್, ಜ್ವಾಲನಯ್ಯ, ಸಂತೋಷ್ ಹಿನಾರಿ, ಕೆ.ಜೆ.ಧರಣೇಂದ್ರ, ಪ್ರಸಾದ್, ಪ್ರಕಾಶ್ಕುಮಾರ್, ಸುರೇಶ್, ಭಾಸ್ಕರ್ ಇತರರಿದ್ದರು.