ಮಳವಳ್ಳಿ: ತಾಲೂಕಿನ ವಾಸುವಳ್ಳಿ ಗ್ರಾಮದ ಬಳಿ ಭಾನುವಾರ ರಾತ್ರಿ ಕಾರೊಂದು ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಯ ಮರಕ್ಕೆ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಯುವಕರು ಮೃತಪಟ್ಟು, ನಾಲ್ವರು ತೀವ್ರವಾಗಿ ಗಾಯಗೊಂಡಿದ್ದಾರೆ.
ಬೆಂಗಳೂರು ಮೂಲದ ನಿವಾಸಿ ಹೇಮಂತ್ ಯಾದವ್(17) ಸ್ಥಳದಲ್ಲೇ ಮೃತಪಟ್ಟಿದ್ದು, ದರ್ಶನ್(20) ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆ ಕೊನೆಯುಸಿರೆಳೆದಿದ್ದಾರೆ. ಮಹದೇವ, ತೇಜಸ್, ಅಭಿಷೇಕ್, ಉಮೇಶ್ ಗಾಯಗೊಂಡಿದ್ದಾರೆ. ಚಾಲಕ ಶ್ರೀನಿವಾಸ ಪ್ರಾಣಾಪಾಯದಿಂದ ಪಾರಾಗಿ ಅವಘಡದ ನಂತರ ಪರಾರಿಯಾಗಿದ್ದಾನೆ.
ಬೆಂಗಳೂರಿನ ಗೋವಿಂದರಾಜನಗರ ನಿವಾಸಿಗಳಾದ ಏಳು ಜನ ಸ್ನೇಹಿತರು ಇನ್ನೋವಾ ಕಾರಿನಲ್ಲಿ ಕೊಳ್ಳೇಗಾಲ ತಾಲೂಕಿನ ಚಿಕ್ಕಲೂರಿನ ಸಿದ್ದಪ್ಪಾಜಿ ದೇವಸ್ಥಾನಕ್ಕೆ ತೆರಳಿದ್ದು, ಪೂಜಾ ಕಾರ್ಯ ಮುಗಿಸಿ ತಡರಾತ್ರಿ 11.30ರ ಸುಮಾರಿನಲ್ಲಿ ಬೆಂಗಳೂರಿಗೆ ಹಿಂದಿರುಗುತ್ತಿದ್ದಾಗ ವಾಸುವಳ್ಳಿ ಬೋರೆ ಬಳಿ ವೇಗವಾಗಿ ಚಲಿಸುತ್ತಿದ್ದ ಕಾರು ಚಾಲಕನ ನಿಯಂತ್ರಣ ಕಳೆದುಕೊಂಡು ರಸ್ತೆ ಬದಿಯ ಮರವೊಂದಕ್ಕೆ ಅಪ್ಪಳಿಸಿದೆ. ಅಪಘಾತದ ತೀವ್ರತೆಗೆ ಕಾರಿನ ಎಡ ಬದಿ ಸಂಪೂರ್ಣ ಜಖಂಗೊಂಡು ಬಿಡಿ ಭಾಗಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿವೆ.
ಅಪಘಾತ ಮಾಹಿತಿ ತಿಳಿದು ಸ್ಥಳಕ್ಕೆ ಸಿಬ್ಬಂದಿಯೊಡನೆ ದೌಡಾಯಿಸಿದ ಪಿಎಸ್‌ಐ ಅಶೋಕ್ ಗಾಯಗೊಂಡವರನ್ನು ಬೆಳಕವಾಡಿ ಆರೋಗ್ಯ ಕೇಂದ್ರದಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿ ನಂತರ ಹೆಚ್ಚಿನ ಚಿಕಿತ್ಸೆಗೆ ಮೈಸೂರಿನ ಕೆ.ಆರ್. ಆಸ್ಪತ್ರೆಗೆ ಅವರನ್ನು ಸಾಗಿಸಿ ದಾಖಲು ಮಾಡಿದ್ದಾರೆ.
ಹೇಮಂತ್ ಯಾದವ್ ಮೃತದೇಹವನ್ನು ಬೆಳಕವಾಡಿ ಶವಾಗಾರದಲ್ಲಿ ಇರಿಸಲಾಗಿದ್ದು, ದರ್ಶನ್ ಶವವನ್ನು ಮೈಸೂರಿನ ಕೆ.ಆರ್.ಆಸ್ಪತ್ರೆ ಶವಾಗಾರದಲ್ಲಿ ಇರಿಸಲಾಗಿದೆ. ಸೋಮವಾರ ಮರಣೋತ್ತರ ಪರೀಕ್ಷೆಯ ನಂತರ ಎರಡೂ ಶವಗಳನ್ನು ವಾರಸುದಾರರಿಗೆ ಒಪ್ಪಿಸಲಾಯಿತು. ಬೆಳಕವಾಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.