ಜಿಲ್ಲೆ

ಕಾರು ಡಿಕ್ಕಿಯಾಗಿ ಇಬ್ಬರು ಮಹಿಳೆಯರ ಸಾವು

ಬೆಳಗಾವಿ: ವಾಕಿಂಗ್ ಮಾಡುತ್ತಿದ್ದ ವೇಳೆ ಕಾರು ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಮಹಿಳೆಯರು ಸ್ಥಳದಲ್ಲೇ ಮೃತಪಟ್ಟು, ಓರ್ವ ಮಹಿಳೆ ಗಂಭೀರವಾಗಿ ಗಾಯಗೊಂಡ ಘಟನೆ ಬೆಳಗಾವಿ ತಾಲೂಕಿನ ಮುತಗಾ-ನಿಲಜಿ ಗ್ರಾಮದ ಬಳಿ ರಾಜ್ಯ ಹೆದ್ದಾರಿಯಲ್ಲಿ ಭಾನುವಾರ ತಡರಾತ್ರಿ ನಡೆದಿದೆ.

ಮುತಗಾ ಗ್ರಾಮದ ಸವಿತಾ ಬಾಲಕೃಷ್ಣ ಪಾಟೀಲ (47), ವಿದ್ಯಾ ಭಾವು ಪಾಟೀಲ (45) ಮೃತ ಮಹಿಳೆಯರು. ಶಾಂತಾ ಕೃಷ್ಣ ಚೌಗಲೆ (55) ಎಂಬ ಮಹಿಳೆ ಗಾಯಗೊಂಡಿದ್ದು, ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಮಹಿಳೆಯರು ರಾತ್ರಿ ಊಟ ಮಾಡಿ ವಾಕಿಂಗ್ ಮಾಡುತ್ತಿದ್ದರು. ಅದೇ ವೇಳೆ ಬೆಳಗಾವಿಯಿಂದ ಸಾಂಬ್ರಾ ಕಡೆಗೆ ಬರುತ್ತಿದ್ದ ಕಾರ್ ನಿಯಂತ್ರಣ ತಪ್ಪಿ ಡಿಕ್ಕಿ ಹೊಡೆದು ಮುಂದೆ ಸಾಗಿ ಮನೆಯೊಳಗೆ ನುಗ್ಗಿದೆ. ಚಾಲಕ ಕೂಡ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.

ಸ್ಥಳಕ್ಕೆ ಅಪರಾಧ ವಿಭಾಗದ ಡಿಸಿಪಿ ಯಶೋದಾ ವಂಟಗೋಡಿ, ಗ್ರಾಮೀಣ ಎಸಿಪಿ ಶಿವಾರೆಡ್ಡಿ, ಮಾರಿಹಾಳ ಠಾಣೆ ಇನ್ಸ್‌ಪೆಕ್ಟರ್ ವಿಜಯಕುಮಾರ ಸಿನ್ನೂರ ಹಾಗೂ ಸಿಬ್ಬಂದಿ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಮಾರಿಹಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.