ಜಿಲ್ಲೆ

ಕಾರು ಡಿಕ್ಕಿಯಾಗಿ ಇಬ್ಬರು ಸಾವು

Belagavi

ಬೆಳಗಾವಿ: ವಾಕಿಂಗ್ ಮಾಡುತ್ತಿದ್ದ ವೇಳೆ ಕಾರು ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಮಹಿಳೆಯರು ಸ್ಥಳದಲ್ಲೇ ಮೃತಪಟ್ಟು, ಓರ್ವ ಮಹಿಳೆ ಗಂಭೀರವಾಗಿ ಗಾಯಗೊಂಡ ಘಟನೆ ಬೆಳಗಾವಿ ತಾಲೂಕಿನ ಮುತಗಾ-ನಿಲಜಿ ಗ್ರಾಮದ ಬಳಿಯ ರಾಜ್ಯ ಹೆದ್ದಾರಿಯಲ್ಲಿ ಭಾನುವಾರ ತಡರಾತ್ರಿ ನಡೆದಿದೆ.

ಮುತಗಾ ಗ್ರಾಮದ ನಿವಾಸಿ ಸವಿತಾ ಬಾಲಕೃಷ್ಣ ಪಾಟೀಲ (47), ವಿದ್ಯಾ ಭಾವು ಪಾಟೀಲ (45) ಮೃತ ಮಹಿಳೆಯರು. ಶಾಂತಾ ಕೃಷ್ಣಾ ಚೌಗಲೆ (55) ಎಂಬ ಮಹಿಳೆ ಗಾಯಗೊಂಡಿದ್ದು, ಅವರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಮಹಿಳೆಯರು ರಾತ್ರಿ ಊಟ ಮಾಡಿ ವಾಕಿಂಗ್ ಮಾಡುತ್ತಿದ್ದರು. ಅದೇ ವೇಳೆ ಬೆಳಗಾವಿಯಿಂದ ಸಾಂಬ್ರಾ ಕಡೆಗೆ ಬರುತ್ತಿದ್ದ ಕಾರು ನಿಯಂತ್ರಣ ತಪ್ಪಿ ಡಿಕ್ಕಿ ಹೊಡೆದು ಮುಂದೆ ಸಾಗಿ ಮನೆಯೊಳಗೆ ನುಗ್ಗಿದೆ. ಚಾಲಕ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಸ್ಥಳಕ್ಕೆ ಅಪರಾಧ ವಿಭಾಗದ ಡಿಸಿಪಿ ಯಶೋದಾ ವಂಟಗೋಡಿ, ಗ್ರಾಮೀಣ ಎಸಿಪಿ ಶಿವಾರೆಡ್ಡಿ, ಮಾರಿಹಾಳ ಠಾಣೆ ಇನ್ಸ್‌ಪೆಕ್ಟರ್ ವಿಜಯಕುಮಾರ ಸಿನ್ನೂರ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಮಾರಿಹಾಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.