ಜಿಲ್ಲೆ

ನಡುರಸ್ತೆಯಲ್ಲೇ ಹೊತ್ತಿ ಉರಿದ ಕಾರು; ಧಗಧಗಿಸಿದ ಬೆಂಕಿ...

vijayavani

ಮಂಗಳೂರು: ನಗರದ ಪಿವಿಎಸ್ ವೃತ್ತದ ಬಳಿ ಶನಿವಾರ ಮಧ್ಯಾಹ್ನ ಚಲಿಸುತ್ತಿದ್ದ ಕಾರಿನಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಕಾರಿನ ಎದುರಿನ ಭಾಗ ಹೊತ್ತಿ ಉರಿದಿದೆ. ಕಾರಿನಲ್ಲಿದ್ದ ನಾಲ್ವರು ಅಪಾಯದಿಂದ ಪಾರಾಗಿದ್ದಾರೆ.

ಮುಡಿಪು ಕಡೆಯಿಂದ ಬಂದ ಇಂಡಿಕಾ ಕಾರು ಪಿವಿಎಸ್ ಜಂಕ್ಷನ್ ತಲುಪಿದಾಗ ಕಾರಿನ ಎದುರಿನ ಭಾಗದಲ್ಲಿ ಹೊಗೆ ಕಾಣಿಸಿಕೊಂಡಿತು. ಚಾಲಕ ಕೂಡಲೇ ಕಾರನ್ನು ರಸ್ತೆಯ ಎಡ ಬದಿಗೆ ನಿಲ್ಲಿಸಿದರು. ಕಾರಿನಲ್ಲಿ ಮೂವರು ಮಹಿಳೆಯರು ಹಾಗೂ ಚಾಲಕ ಸೇರಿ ಒಟ್ಟು ನಾಲ್ವರಿದ್ದರು. ಅವರೆಲ್ಲರೂ ಕಾರಿನಿಂದ ಇಳಿದು ಬಂದಿದ್ದಾರೆ. ಕೆಲವೇ ಹೊತ್ತಿನಲ್ಲಿ ಕಾರಿನ ಇಂಜಿನ್ ಸೇರಿ ಎದುರಿನ ಭಾಗ ಬೆಂಕಿಗೆ ಆಹುತಿಯಾಯಿತು.

ತಕ್ಷಣ ಅಗ್ನಿಶಾಮಕ ಠಾಣೆಗೆ ಕರೆ ಮಾಡಿದ್ದು, ಘಟನೆ ನಡೆದ ಕೆಲ ಹೊತ್ತಿನಲ್ಲಿ ಪಾಂಡೇಶ್ವರದಿಂದ ಅಗ್ನಿಶಾಮಕ ದಳದ ಸಿಬಂದಿ ಆಗಮಿಸಿದರು. ಆದರೆ ಅದಕ್ಕೂ ಮೊದಲು ಸಂಚಾರಿ ಪೊಲೀಸರು ಹಾಗೂ ಸ್ಥಳೀಯರು ನೀರು ಚಿಮುಕಿಸಿ ಬೆಂಕಿ ನಂದಿಸುವಲ್ಲಿ ಬಹುತೇಕ ಯಶಸ್ವಿಯಾಗಿದ್ದರು. ಕಾರಿನ ಬ್ಯಾಟರಿ, ಇಂಜಿನ್ ಭಾಗದಲ್ಲಿ ಶಾರ್ಟ್ ಸರ್ಕ್ಯೂಟ್ ಉಂಟಾಗಿ ಅವಘಡ ಉಂಟಾಗಿರಬೇಕು ಎಂದು ಅಗ್ನಿಶಾಮಕ ದಳದ ಅಧಿಕಾರಿಗಳು ಶಂಕಿಸಿದ್ದಾರೆ.

ಕಾರು ಬೆಂಕಿಗೆ ಆಹುತಿಯಾಗುವುದನ್ನು ನೋಡಲು ನೂರಾರು ಸಂಖ್ಯೆಯಲ್ಲಿ ಕುತೂಹಲಿಗಳು ಜಮಾಯಿಸಿದ್ದರು. ಇದರಿಂದ ವಾಹನ ಸಂಚಾರಕ್ಕೆ ಅಡಚಣೆ ಉಂಟಾಯಿತು. ಸಂಚಾರಿ ಪೊಲೀಸರು ಜನರನ್ನು ಚದುರಿಸಿ, ಸುಗಮ ವಾಹನ ಸಂಚಾರಕ್ಕೆ ಅನುವು ಮಾಡಿ ಕೊಟ್ಟರು.