ಜಿಲ್ಲೆ

ಶಾಸಕರ ಪುತ್ರನಿಂದ ಬೆಂಟ್ಲಿ ಕಾರು ಅಪಘಾತ ಪ್ರಕರಣ: ಸಿಸಿ ಕ್ಯಾಮರಾ ದೃಶ್ಯ ಪರಿಶೀಲನೆ

Mandara

ಬೆಂಗಳೂರು: ಮೇಖ್ರಿ ವೃತ್ತದ ಕೆಳರಸ್ತೆಯಲ್ಲಿ ಸರಣಿ ಅಪಘಾತ ಮಾಡಿದ ಐಷಾರಾಮಿ ಬೆಂಟ್ಲಿ ಕಾರನ್ನು ಶಾಸಕ ಎನ್.ಎ. ಹ್ಯಾರೀಸ್ ಪುತ್ರ ಮಹಮದ್ ನಲಪಾಡ್ ಚಲಾಯಿಸುತ್ತಿದ್ದರು ಎನ್ನುವುದಕ್ಕೆ ಸದಾಶಿವನಗರ ಸಂಚಾರ ಪೊಲೀಸರು ಮತ್ತಷ್ಟು ಸಾಕ್ಷ್ಯ ಸಂಗ್ರಹಿಸುತ್ತಿದ್ದಾರೆ.

ಭಾನುವಾರ (ಫೆ.9) ಮಧ್ಯಾಹ್ನ 2.30ರಲ್ಲಿ ಆಟೋ ಮತ್ತು ಬೈಕ್​ಗೆ ಬೆಂಟ್ಲಿ ಕಾರು ಡಿಕ್ಕಿ ಹೊಡೆದಿತ್ತು. ಪರಿಣಾಮ ಬೈಕ್ ಸವಾರ ಹಾಗೂ ಆಟೋದಲ್ಲಿದ್ದ ಮಹಿಳೆ ಗಾಯಗೊಂಡಿದ್ದರು. ಈ ಸಂಬಂಧ ಪೊಲೀಸರು ನಲಪಾಡ್​ಗೆ ನೋಟಿಸ್ ಕೊಟ್ಟು ವಿಚಾರಣೆ ನಡೆಸಿದ್ದರು. ಅಪಘಾತದ ವೇಳೆ ತಾನು ಬೆಂಟ್ಲಿ ಕಾರಿನಲ್ಲಿರಲಿಲ್ಲ. ಆ ಕಾರಿನ ಹಿಂದಿದ್ದ ಮತ್ತೊಂದು ಕಾರಿನಲ್ಲಿದ್ದೆ ಎಂದು ಹೇಳಿಕೆ ನೀಡಿದ್ದರು.

ಬಳ್ಳಾರಿ ರಸ್ತೆಯಲ್ಲಿ ಮೇಖ್ರಿ ವೃತ್ತದ ಕಡೆಗೆ ಬೆಂಟ್ಲಿ ಕಾರು ಬರುತ್ತಿರುವ ಬಗ್ಗೆ ಸಿಸಿ ಕ್ಯಾಮರಾ ದೃಶ್ಯಗಳನ್ನು ಪೊಲೀಸರು ಪರಿಶೀಲಿಸುತ್ತಿದ್ದಾರೆ. ದೇವನಹಳ್ಳಿ ವಿಮಾನ ನಿಲ್ದಾಣದ ಬಳಿ ಇರುವ ಟೋಲ್​ಗೇಟ್​ನಿಂದ ಮೇಖ್ರಿ ವೃತ್ತದವರೆಗೆ ರಸ್ತೆಯಲ್ಲಿ ಅಳವಡಿಸಿದ್ದ ಸಿಸಿ ಕ್ಯಾಮರಾ ದೃಶ್ಯಗಳನ್ನು ವಶಕ್ಕೆ ಪಡೆದಿದ್ದಾರೆ. ಅಪಘಾತ ಸಂಭವಿಸಿದ ಸಮಯದಲ್ಲಿ ನಲಪಾಡ್ ಫೋನ್ ಲೊಕೇಷನ್ ಮೇಖ್ರಿ ವೃತ್ತದ ಬಳಿ ತೋರಿಸುತ್ತಿತ್ತು. ಅಲ್ಲದೆ, ಪ್ರತ್ಯಕ್ಷದರ್ಶಿಯೊಬ್ಬರು ಮಹಮದ್ ನಲಪಾಡ್​ನನ್ನು ಗುರುತಿಸಿದ್ದಾರೆ.

ಆದರೆ, ಅದನ್ನು ನಲಪಾಡ್ ನಿರಾಕರಿಸಿರುವ ಹಿನ್ನೆಲೆಯಲ್ಲಿ ಮತ್ತಷ್ಟು ಸಾಕ್ಷ್ಯ ಕಲೆ ಹಾಕಲಾಗುತ್ತಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಜಾಲತಾಣಗಳಲ್ಲಿ ವೈರಲ್!: ಮೇಖ್ರಿ ವೃತ್ತದ ಕೆಳರಸ್ತೆಯಲ್ಲಿ ಬೆಂಟ್ಲಿ ಕಾರು ವೇಗವಾಗಿ ಸಾಗುತ್ತಿರುವ ವಿಡಿಯೋ ಜಾಲತಾಣಗಳಲ್ಲಿ ವೈರಲ್ ಆಗಿದೆ. ಮುಂದೆ ಹೋಗುತ್ತಿದ್ದ ಕೆಲ ವಾಹನಗಳನ್ನು ಬೆಂಟ್ಲಿ ಕಾರು ಹಿಂದಿಕ್ಕಿದೆ. ಅದರಲ್ಲಿ ಅಪಘಾತ ಸಂಭವಿಸಿರುವುದು ದಾಖಲಾಗಿಲ್ಲ. ಅಲ್ಲದೆ, ಕಾರಿನಲ್ಲಿದ್ದ ಪ್ರಯಾಣಿಕರ ಮುಖಚಹರೆಯೂ ಗೊತ್ತಾಗುವುದಿಲ್ಲ.