ಜಿಲ್ಲೆ

ಕಾರು ಪಲ್ಟಿ ಹೊಡೆದು ಐವರಿಗೆ ಗಾಯ: ಮೂವರ ಸ್ಥಿತಿ ಗಂಭೀರ

ಕೆ.ಎನ್.ರಾಘವೇಂದ್ರ
ಮಂಡ್ಯ: ನಗರದ ಹೊರವಲಯದ ಚಿಕ್ಕಮಂಡ್ಯ ಬಳಿ ಸೋಮವಾರ ಸಂಜೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಐವರು ತೀವ್ರ ಗಾಯಗೊಂಡಿದ್ದಾರೆ. ಈ ಪೈಕಿ ಮೂವರ ಸ್ಥಿತಿ ಗಂಭೀರವಾಗಿದೆ. ಬೆಂಗಳೂರಿನ ಬಸವನಗುಡಿ ನಿವಾಸಿಗಳಾದ ಶ್ರೀಕಾಂತ್(36), ಕೃಷ್ಣ(60), ಮೂರ್ತಿ(45), ಇಂದಿರಾನಗರ ನಿವಾಸಿ ಮಂಜುನಾಥ್ ಜಿ.ಅಡಿಗ(25), ನಾಗವಾರದ ರಾಚೇನಹಳ್ಳಿ ನಿವಾಸಿ ಸಿ.ಅರ್ಜುನ್(30) ಗಾಯಗೊಂಡವರು. ಎಲ್ಲರಿಗೂ ಖಾಸಗಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿ, ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ರಾಜರಾಜೇಶ್ವರಿ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿದೆ. ಈ ಪೈಕಿ ಕಾರಿನಲ್ಲಿದ್ದವರ ಪೈಕಿ ಶ್ರೀಕಾಂತ್, ಕೃಷ್ಣ, ಮೂರ್ತಿ ಅವರ ಸ್ಥಿತಿ ಗಂಭೀರವಾಗಿದೆ. ಈ ಐವರು ಊಟಿಯಿಂದ ಬೆಂಗಳೂರಿಗೆ ಫಾರ್ಚ್ಯೂನರ್ ಕಾರಿನಲ್ಲಿ ತೆರಳುತ್ತಿದ್ದಾಗ ಸಂಜೆ 5.15ರ ಸಮಯದಲ್ಲಿ ಕಾರಿನ ಮುಂದಿನ ಬಲಭಾಗದ ಟೈಯರ್ ಬ್ಲಾಸ್ಟ್ ಆಗಿದೆ. ಈ ವೇಳೆ ಚಾಲಕ ಕಾರನ್ನು ಎಡಭಾಗಕ್ಕೆ ತಿರುಗಿಸಿದಾಗ ನಿಯಂತ್ರಣ ಪೆನ್ಸಿಂಗ್‌ಗೆ ಡಿಕ್ಕಿಯಾಗಿ ಬೆಂಗಳೂರು-ಮೈಸೂರು ರಾಷ್ಟ್ರೀಯ ಹೆದ್ದಾರಿಯಲ್ಲೇ ಪಲ್ಟಿ ಹೊಡೆದಿದೆ. ಈ ಸಮಯದಲದಲಿ ಹಿಂದಿನಿಂದ ಯಾವುದೇ ವಾಹನಗಳು ಬಾರದಿದ್ದ ಕಾರಣ ಅನಾಹುತ ತಪ್ಪಿದೆ. ಅಪಘಾತದ ಬಗ್ಗೆ ಮಾಹಿತಿ ದೊರೆತ ತಕ್ಷಣವೇ ರಾಷ್ಟ್ರೀಯ ಹೆದ್ದಾರಿಯ ಆಂಬುಲೆನ್ಸ್ ಸ್ಥಳಕ್ಕೆ ಆಗಮಿಸಿದ್ದು, ಗಾಯಾಳುಗಳನ್ನು ಆಸ್ಪತ್ರೆಗೆ ಕರೆದೊಯ್ದಿದೆ. ಇತ್ತ ಕಾರನ್ನು ಸ್ಥಳೀಯರ ನೆರವಿನೊಂದಿಗೆ ಪೊಲೀಸರು ರಸ್ತೆ ಬದಿಗೆ ಸರಿಸಿದ್ದು, ಸುಗಮ ಸಂಚಾರಕ್ಕೆ ಅವಕಾಶ ಮಾಡಿಕೊಂಡಿದ್ದಾರೆ. ಮಂಡ್ಯ ಸೆಂಟ್ರಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.