ಜಿಲ್ಲೆ

ಅಂತೂ ಸೆರೆ ಸಿಕ್ಕ ನರಭಕ್ಷಕ ಚಿರತೆ ; ಬನ್ನೇರುಘಟ್ಟ ವನ್ಯಮೃಗ ಪುನರ್ವಸತಿ ಕೇಂದ್ರಕ್ಕೆ ರವಾನೆ

Tumakuru

ತುಮಕೂರು: ವರ್ಷದಿಂದ ಸಿಗದೆ ಸತಾಯಿಸುತ್ತಿದ್ದ ನರಭಕ್ಷಕ ಎನ್ನಲಾದ ಚಿರತೆಯೊಂದು ಅದಕ್ಕೆಂದೇ ಸೃಷ್ಟಿಸಿದ್ದ ವಿಶೇಷ ಬೋನಿನಲ್ಲಿ ಕೊನೆಗೂ ಸೆರೆಸಿಕ್ಕಿದೆ. ಹೆಬ್ಬೂರು ಹೋಬಳಿ ಬನ್ನಿಕುಪ್ಪೆ ಬಳಿ ಮಂಗಳವಾರ ರಾತ್ರಿ 8 ವರ್ಷದ ಗಂಡು ಚಿರತೆ ಬೋನಿಗೆ ಬಿದ್ದಿದ್ದು, ಬನ್ನೇರುಘಟ್ಟ ವನ್ಯಮೃಗ ಪುನರ್‌ವಸತಿ ಕೇಂದ್ರಕ್ಕೆ ಸಾಗಿಸಲಾಗಿದೆ.

ಬನ್ನಿಕುಪ್ಪೆಯ ಪ್ಲಾಂಟೇಷನ್‌ಲ್ಲಿ ಅರಣ್ಯ ಇಲಾಖೆ ವಿಶೇಷವಾಗಿ ನಿರ್ಮಿಸಿದ್ದ ಬೋನಿನಲ್ಲಿ ಮಂಗಳವಾರ ರಾತ್ರಿ 9 ಗಂಟೆ ವೇಳೆಗೆ ಚಿರತೆ ಸೆರೆಯಾಗಿದೆ. ತುಮಕೂರು, ಕುಣಿಗಲ್ ಹಾಗೂ ಗುಬ್ಬಿ ತಾಲೂಕುಗಳ ಗಡಿಗೆ ಹೊಂದಿಕೊಂಡ ಮಾನವಹತ್ಯೆ ನಡೆದ ಪ್ರದೇಶದಲ್ಲಿ ನರಭಕ್ಷಕ ಚಿರತೆ ಸೆರೆಗೆ ಅರಣ್ಯ ಇಲಾಖೆ ಕ್ರಮಕೈಗೊಂಡಿದೆ. ನವೆಂಬರ್ 5 ರಂದು ಗುಬ್ಬಿ ತಾಲೂಕು ಸಿಎಸ್ ಪುರದ ಮಣಿಕುಪ್ಪೆ ಗ್ರಾಮದ ಭಾಗ್ಯಮ್ಮ ಚಿರತೆ ದಾಳಿಗೆ ಬಲಿಯಾಗಿದ್ದರು.

ಮೊಬೈಲ್‌ಗೆ ಮಾಹಿತಿ: ಬನ್ನಿಕುಪ್ಪೆ ಪ್ರದೇಶದಲ್ಲಿ ನರಭಕ್ಷಕ ಚಿರತೆ ಸೆರೆ ಹಿಡಿಯಲು ವರ್ಷದಿಂದ ಹರಸಾಹಸ ನಡೆಸಿದ್ದ ಅರಣ್ಯ ಇಲಾಖೆ ಕ್ಯಾಮರಾ ಟ್ರಾಪ್ ಸೇರಿ ಹಲವು ಕ್ರಮಕೈಗೊಂಡಿತ್ತು. ರಾತ್ರಿ 9ಕ್ಕೆ ಬೋನಿಗೆ ಬೀಳುತ್ತಿದ್ದಂತೆ ಕ್ಯಾಮರಾಟ್ರಾೃಪ್ ಮೂಲಕ ಡಿಎಫ್‌ಒಗೆ ಚಿರತೆ ಸೆರೆಸಿಕ್ಕ ಮಾಹಿತಿ ಫೋಟೋ ಸಹಿತ ಬಂದಿದ್ದು ತಕ್ಷಣವೇ ಅರಣ್ಯ ಸಂರಕ್ಷಣಾಧಿಕಾರಿ ಎಚ್.ಸಿ.ಗಿರೀಶ್, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಡಿ.ರಾಜೇಂದ್ರ, ವಲಯ ಅರಣ್ಯ ಅಧಿಕಾರಿ ಎಚ್.ಎಲ್. ನಟರಾಜ್. ಕೆ.ಟಿ.ಮಂಜುನಾಥ್, ಸಿ.ರವಿ ಹಾಗೂ ಸಿಬ್ಬಂದಿ ಸ್ಥಳಕ್ಕೆ ತೆರಳಿ ಪರಿಶೀಲಿಸಿದರು.  ಈ ಹಿಂದೆ ಕ್ಯಾಮರಾ ಟ್ರಾೃಪ್‌ನಲ್ಲಿ ಸೆರೆಸಿಕ್ಕ ಫೂಟೇಜ್‌ಗಳಲ್ಲಿ ಚಿರತೆ ಕಂಡುಬಂದಿದ್ದು ಇದೇ ನರಭಕ್ಷಕ ಚಿರತೆ ಎಂಬುದಕ್ಕೆ ಪುಷ್ಟಿ ಸಿಕ್ಕಿವೆ.

ನವೆಂಬರ್‌ವರೆಗೆ ಐವರು ಬಲಿ : ತುಮಕೂರು, ಕುಣಿಗಲ್ ಹಾಗೂ ಗುಬ್ಬಿ ತಾಲೂಕುಗಳನ್ನೊಳಗೊಂಡ ಗಡಿಭಾಗದ 20 ಕಿ.ಮೀ., ವ್ಯಾಪ್ತಿ ಪ್ರದೇಶದಲ್ಲಿ ಮಾನವಹತ್ಯೆ ಚಿರತೆ ದಾಳಿ ನಡೆದಿದೆ. 2019ರ ಅಕ್ಟೋಬರ್‌ನಿಂದ 2020ರ ನವೆಂಬರ್‌ವರೆಗೆ ಐವರು ಚಿರತೆ ದಾಳಿಗೆ ಬಲಿಯಾಗಿದ್ದರು. ಅಕ್ಟೋಬರ್‌ನಲ್ಲಿ ತುಮಕೂರು ತಾಲೂಕಿನ ಹೆಬ್ಬೂರು ಹೋಬಳಿ ಬನ್ನಿಕುಪ್ಪೆಯಲ್ಲಿ ವೃದ್ಧೆ ಲಕ್ಷಮ್ಮ, ಕುಣಿಗಲ್ ತಾಲೂಕಿನ ದೊಡ್ಡಮರಳವಾಡಿಯಲ್ಲಿ ವೃದ್ಧ ಆನಂದಯ್ಯ, ಗುಬ್ಬಿ ತಾಲೂಕಿನ ಸಿ.ಎಸ್.ಪುರ ಹೋಬಳಿ ಮಣಿಕುಪ್ಪೆಯ 5 ವರ್ಷದ ಮಗು ಚಿರಂತನ್‌ಗೌಡ, ಅದಾದ ಬಳಿಕ 2020ರ ಫೆ.29ರಂದು ತುಮಕೂರು ತಾಲೂಕಿನ ಹೆಬ್ಬೂರು ಹೋಬಳಿ ಕರ್ಣಕುಪ್ಪೆ ಗ್ರಾಪಂನ ಬೈಚನಹಳ್ಳಿಯ 3 ವರ್ಷದ ಚಂದನಾ ಹಾಗೂ ಕಳೆದ ನ.5 ರಂದು ಸಿಎಸ್ ಪುರ ಹೋಬಳಿ ಮಣಿಕುಪ್ಪೆಯ ಭಾಗ್ಯಮ್ಮ ಎಂಬುವರು ಚಿರತೆ ದಾಳಿಗೆ ಬಲಿಯಾಗಿದ್ದರು.

ತಪ್ಪಿಸಿಕೊಳ್ಳುತ್ತಿದ್ದ ಚಿರತೆ : ಮಾನವ ಹತ್ಯೆ ನಡೆದ ಪ್ರದೇಶದಲ್ಲಿ ಅರಣ್ಯ ಇಲಾಖೆ ಇಟ್ಟಿದ್ದ ಚಿರತೆ ಸೆರೆಗೆ 40 ಕಡೆ ಸಿಸಿ ಕ್ಯಾಮರಾ ಅಳವಡಿಸಲಾಗಿತ್ತು. 3 ಕಡೆ ಗೋಡೆ ಇದ್ದು, ಒಂದು ಕಡೆ ಮಾತ್ರ ಒಳಗೆ ಹೋಗುವಂತೆ ನಿರ್ಮಿಸಲಾಗಿದ್ದ ವಿಶೇಷ ಬೋನಿಗೆ ಕೊನೆಗೂ ನರಭಕ್ಷಕ ಚಿರತೆ ಬಿದ್ದಿದೆ.

ಬನ್ನಿಕುಪ್ಪೆ ಪ್ರದೇಶದಲ್ಲಿ ಅಳವಡಿಸಲಾಗಿದ್ದ ಕ್ಯಾಮರಾಟ್ರಾೃಪ್‌ನಲ್ಲಿ ಕಾಣಿಸುತ್ತಿದ್ದ ನರಭಕ್ಷಕ ಎನ್ನಲಾದ ಚಿರತೆಯು ಅರಣ್ಯ ಇಲಾಖೆ ಇಟ್ಟಿದ್ದ ಬೋನಿನ ಹತ್ತ್ತಿರವೂ ಸುಳಿಯುತ್ತಿರಲಿಲ್ಲ. ವಿಶೇಷ ಬೋನು ನಿರ್ಮಿಸಿ ಚಿರತೆ ಸೆರೆಹಿಡಿಯಲಾಗಿದೆ. ಎಚ್.ಸಿ.ಗಿರೀಶ್ ಜಿಲ್ಲಾ ಅರಣ್ಯ ಸಂರಕ್ಷಾಣಾಧಿಕಾರಿ