ಜಿಲ್ಲೆ

ಖಾತೆಗೆ ಕನ್ನ ಹಾಕುತ್ತಿದ್ದ ವಿದೇಶಿಗರಿಬ್ಬರ ಸೆರೆ; ನಕಲಿ ಎಟಿಎಂ ಕಾರ್ಡ್ ಸೃಷ್ಟಿಸಿ ವಂಚನೆ ಸಿಇಎನ್ ಪೊಲೀಸರ ಕಾರ್ಯಾಚರಣೆ

ತುಮಕೂರು: ಎಟಿಎಂಗಳಿಗೆ ಸ್ಕಿಮ್ಮಿಂಗ್ ಚಿಪ್ ಅಳವಡಿಸಿ ನಕಲಿ ಎಟಿಎಂ ಕಾರ್ಡ್ ಸೃಷ್ಟಿಸಿಕೊಂಡು ಖಾತೆಗಳಿಂದ ಹಣ ಡ್ರಾ ಮಾಡುತ್ತಿದ್ದ ವಿದೇಶಿ ವಂಚಕರ ಜಾಲವನ್ನು ತುಮಕೂರು ಸಿಇಎನ್ ಪೊಲೀಸರು ಪತ್ತೆಹಚ್ಚಿದ್ದು, ಇಬ್ಬರನ್ನು ಬಂಧಿಸಿದ್ದಾರೆ.

ಉಗಾಂಡ ದೇಶದ ಐವಾನ್ ಕಾಬೋಂ (22), ಕೀನ್ಯಾದ ಲಾರೆನ್ಸ್ (30) ಬಂಧಿತರು. ಶುಕ್ರವಾರ ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕೇಂದ್ರ ವಲಯ ಐಜಿಪಿ ಸೀಮಂತ್‌ಕುಮಾರ್ ಸಿಂಗ್, ರಾಜ್ಯದ ವಿವಿಧೆಡೆ ಹಾಗೂ ಚೆನ್ನೈ, ಮುಂಬೈ, ನವದೆಹಲಿ ಮತ್ತಿತರ ಕಡೆಗಳಲ್ಲಿ ಎಟಿಎಂ ಕೇಂದ್ರಗಳಲ್ಲಿ ವಂಚನೆ ನಡೆದಿರುವ ಬಗ್ಗೆ ತನಿಖೆಯಲ್ಲಿ ಬೆಳಕಿಗೆ ಬಂದಿದ್ದು, ವಿದೇಶಿ ವಂಚಕರ ಬಗ್ಗೆ ತಿಳಿದುಕೊಳ್ಳಲಾಗುತ್ತಿದೆ ಎಂದರು.ನವದೆಹಲಿಯಲ್ಲಿ ವಿದ್ಯಾರ್ಥಿಗಳಾಗಿದ್ದ ವಂಚಕರು ಹಳೆಯ ಒಂದೇ ಮಾದರಿಯ ಎಟಿಎಂ ಇರುವ ಪ್ರದೇಶಗಳನ್ನು ಗುರುತಿಸಿ ನಂತರ ವಂಚನೆ ನಡೆಸುತ್ತಿದ್ದರು. ಇವರ ಜತೆಗೆ ಇನ್ನೂ ಇಬ್ಬರು ಇರುವ ಬಗ್ಗೆ ತನಿಖೆ ವೇಳೆ ಬಾಯ್ಬಿಟ್ಟಿದ್ದು ಪತ್ತೆಗೆ ಬಲೆ ಬೀಸಲಾಗಿದೆ ಎಂದರು.

ಆರೋಪಿಗಳು ನವದೆಹಲಿಯ ವಿದ್ಯಾರ್ಥಿಗಳು ಎನ್ನಲಾಗಿದ್ದು ಈ ಬಗ್ಗೆ ಖಚಿತಪಡಿಸಿಕೊಳ್ಳಲು ವಿದೇಶಾಂಗ ಸಚಿವಾಲಯದ ನೆರವು ಕೋರಲಾಗಿದೆ. ವರದಿ ಬಂದ ನಂತರವಷ್ಟೇ ಖಚಿತ ಮಾಹಿತಿ ಲಭ್ಯವಾಗಲಿದೆ, ವಂಚಕರು ತುಮಕೂರನ್ನೇ ಕೃತ್ಯಕ್ಕೆ ಕೇಂದ್ರವಾಗಿಸಿಕೊಂಡ ಬಗ್ಗೆಯೂ ಪೊಲೀಸರಿಗೆ ಕುತೂಹಲವಿದ್ದು, ಈ ನಿಟ್ಟಿನಲ್ಲಿಯೂ ತನಿಖೆ ನಡೆಸಲಾಗುತ್ತಿದೆ ಎಂದು ತಿಳಿಸಿದರು.

ಕಳೆದ ಸೆಪ್ಟೆಂಬರ್ ಹಾಗೂ ಅಕ್ಟೋಬರ್‌ನಲ್ಲಿ ತುಮಕೂರಿನ ಹೊರವಲಯದ ಭೀಮಸಂದ್ರದ ಇಂಡಿಯಾ 1 ಎಟಿಎಂ, ಕುಣಿಗಲ್ ಕೆನರಾ ಬ್ಯಾಂಕ್ ಎಟಿಎಂಗಳಲ್ಲಿ ಹಣ ಡ್ರಾ ಮಾಡಲಾಗಿತ್ತು, ಎಟಿಎಂ ಕಾರ್ಡ್ ಗ್ರಾಹಕರ ಬಳಿಯೇ ಇದ್ದರೂ ಅವರ ಖಾತೆಯಿಂದ ಬೇರೆಬೇರೆ ಊರಗಳ ಎಟಿಎಂ ಕೇಂದ್ರಗಳಲ್ಲಿ ಹಣ ಡ್ರಾ ಆಗಿತ್ತು.

ನ.3ರಿಂದ ಡಿ.10ರ ವರೆಗೂ ಕುಣಿಗಲ್ ಎಟಿಎಂನಲ್ಲಿ 42, ಭೀಮಸಂದ್ರ ಎಟಿಎಂನಿಂದ 16, ನಿಟ್ಟೂರು ಎಟಿಎಂನಲ್ಲಿ 2 ಸೇರಿ ಒಟ್ಟು 60 ವಂಚನೆ ಪ್ರಕರಣಗಳು ದಾಖಲಾಗಿದ್ದು ವಿವಿಧ ಗ್ರಾಹಕರಿಗೆ 25 ಲಕ್ಷ ರೂ. ವಂಚಿಸಲಾಗಿತ್ತು. ಈ ಬಗ್ಗೆ ತನಿಖೆಗೆ ಸಿಇಎನ್ ಪೊಲೀಸ್ ಠಾಣೆ ಸಿಪಿಐ ನೇತೃತ್ವದಲ್ಲಿ ವಿಶೇಷ ತನಿಖಾ ತಂಡ ರಚಿಸಲಾಗಿತ್ತು. ಆರೋಪಿಗಳು ಸಂಚರಿಸುತ್ತಿದ್ದ ವಾಹನದ ಜಾಡು ಹಿಡಿದು ಸಂಚರಿಸಿದ ಜಾಗಗಳು ಹಾಗೂ ಹಣವನ್ನು ಡ್ರಾ ಮಾಡಿದ ಜಾಗಗಳು, ಮಾರ್ಗದಲ್ಲಿ ಸಿಗುವ ಟೋಲ್‌ಗಳಲ್ಲಿ ತಾಂತ್ರಿಕ ಮಾಹಿತಿ ಸಂಗ್ರಹಿಸಿ ಡಿ.7ರಂದು ಆರೋಪಿಗಳನ್ನು ಬಂಧಿಸಲಾಗಿದೆ. ಬಂಧಿತರಿಂದ 20 ನಕಲಿ ಎಟಿಎಂ ಕಾರ್ಡ್, ಸ್ಕಿಮ್ಮಿಂಗ್ ಸಾಧನ ಹಾಗೂ ಸಂಚರಿಸುತ್ತಿದ್ದ ಕಾರು ವಶಪಡಿಸಿಕೊಳ್ಳಲಾಗಿದೆ. ಆರೋಪಿಗಳ ಬಂಧನಕ್ಕೆ ಶ್ರಮಿಸಿದ ಅಧಿಕಾರಿ, ಸಿಬ್ಬಂದಿಗೆ ಬಹುಮಾನ ವಿತರಿಸಲಾಯಿತು. ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಪೊಲೀಸ್ ಅಧೀಕ್ಷಕ ಡಾ.ಕೆ.ವಂಶಿಕೃಷ್ಣ ಮತ್ತಿತರರು ಇದ್ದರು.