ಜಿಲ್ಲೆ

ತಿಂಗಳ ನಂತರ ಸೆರೆಯಾದ ಚಿರತೆ

ಹಿರೇಕೆರೂರ: ಕಳೆದೊಂದು ತಿಂಗಳಿಂದ ಭಯ ಹುಟ್ಟಿಸಿದ್ದ ಚಿರತೆ ಕೊನೆಗೂ ಅರಣ್ಯ ಇಲಾಖೆ ಇರಿಸಿದ್ದ ಬೋನಿಗೆ ಮಂಗಳವಾರ ನಸುಕಿನ ಜಾವ ಬಿದ್ದಿದೆ. ಪರಿಣಾಮ, ತಾಲೂಕಿನ ಅರಳಿಕಟ್ಟಿ, ಒಡೆಯನಪುರ, ಚಿನ್ನಮುಳಗುಂದ ಭಾಗದ ರೈತರು, ಜನರು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ.

ಈ ಭಾಗದ ಜನರು ಚಿರತೆಯನ್ನು ಪ್ರತ್ಯಕ್ಷವಾಗಿ ಕಂಡಿದ್ದರು. ಹೀಗಾಗಿ ಅರಣ್ಯ ಇಲಾಖೆಗೆ ದೂರು ನೀಡಲಾಗಿತ್ತು. ಅದರಂತೆ ಅರಣ್ಯ ಇಲಾಖೆ ಸಿಬ್ಬಂದಿ ಅರಳಿಕಟ್ಟಿ ಗ್ರಾಮದ ಖಾಸಗಿ ಜಮೀನಿನಲ್ಲಿ ಒಂದು ತಿಂಗಳ ಹಿಂದೆ ಬೋನು ಇರಿಸಿದ್ದರು. ಚಿರತೆ ಮಂಗಳವಾರ ಬೋನಿನಲ್ಲಿ ಬಿದ್ದಿದೆ.

ಘಟನಾ ಸ್ಥಳಕ್ಕೆ ಭೇಟಿ ನೀಡಿ ಮಾಹಿತಿ ನೀಡಿದ ವಲಯ ಅರಣ್ಯಾಧಿಕಾರಿ ಹೇಮಗಿರಿ ಅಂಗಡಿ, ಅಂದಾಜು 5 ವರ್ಷದ ಚಿರತೆ ಇದಾಗಿದ್ದು, ಅರಣ್ಯ ಪ್ರದೇಶದಲ್ಲಿ ಬಿಡಲಾಗುವುದು ಎಂದರು. ಹಂಸಭಾವಿ ಉಪ ವಲಯ ಅರಣ್ಯಾಧಿಕಾರಿ ಜಿ.ಎಂ. ಮುಲ್ಲಾನವರ, ಹಿರೇಕೆರೂರ ಉಪವಲಯ ಅರಣ್ಯಾಧಿಕಾರಿ ವಿ.ವಿ. ಮೊಹಿತೆ, ಎಸ್.ಜಿ. ಅಗಡಿ, ಪರಮೇಶಪ್ಪ ಬಿಸಲಿಹಳ್ಳಿ ಹಾಗೂ ಗ್ರಾಮಸ್ಥರು ಇದ್ದರು.