ಮಂಗಳೂರು : ಪಿಎಂ-ಆಯುಷ್ಮಾನ್ ಭಾರತ್ ಯೋಜನೆಗೆ ಕರ್ನಾಟಕದಲ್ಲಿ ಸಿದ್ದರಾಮಯ್ಯ ಸರ್ಕಾರ ಅಡ್ಡಗಾಲು ಹಾಕುವ ಮೂಲಕ ಹಿರಿಯ ನಾಗರಿಕರ ಜೀವದ ಜತೆಗೆ ಚೆಲ್ಲಾಟವಾಡುವ ಅತ್ಯಂತ ಕೀಳುಮಟ್ಟದ ರಾಜಕೀಯ ಮಾಡುತ್ತಿದೆ ಎಂದು ದ.ಕ.
ಸಂಸದ ಕ್ಯಾ. ಬ್ರಿಜೇಶ್ ಚೌಟ ಆಕ್ರೋಶ ವ್ಯಕ್ತಪಡಿಸಿದ್ದಾರೆ
70 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರಿಗೆ ಉಚಿತ ಚಿಕಿತ್ಸೆ ನೀಡುವ ಆಯುಷ್ಮಾನ್ ಭಾರತ್ ಪಿಎಂ ಜನ್ ಆರೋಗ್ಯ ಯೋಜನೆ(ಎಬಿ-ಪಿಎಂ-ಜೆಎವೈ)ಯನ್ನು ದೇಶಾದ್ಯಂತ 2024ರ ನವೆಂಬರ್ ತಿಂಗಳಲ್ಲಿ ಜಾರಿಗೊಳಿಸಲಾಗಿದೆ. ಆದರೆ ಕರ್ನಾಟಕದಲ್ಲಿ ಮಾತ್ರ ಇನ್ನು ಕೂಡ ಹಿರಿಯ ನಾಗರಿಕರ ಜೀವ ಕಾಪಾಡುವ ಅತ್ಯಮೂಲ್ಯವಾದ ಈ ಯೋಜನೆಯನ್ನು ಜಾರಿಗೆ ತಂದಿಲ್ಲ. ಆಸ್ಪತ್ರೆಗಳಿಗೆ ಕ್ಯಾನ್ಸರ್ ಸಹಿತ ಪ್ರಮುಖ ಕಾಯಿಲೆಗಳಿಗೆ ಚಿಕಿತ್ಸೆಗೆ ಬರುವ ಹಿರಿಯ ಜೀವಗಳಿಗೆ ಚಿಕಿತ್ಸೆ ನಿರಾಕರಿಸುತ್ತಿರುವ ಕಾಂಗ್ರೆಸ್ ಸರ್ಕಾರದ ಈ ರೀತಿಯ ವರ್ತನೆ ಅತ್ಯಂತ ಅಮಾನವೀಯವಾದದ್ದು. ಕೂಡಲೇ ಕರ್ನಾಟಕದ ಎಲ್ಲ ಅರ್ಹ ಹಿರಿಯ ನಾಗರಿಕರಿಗೆ ಆಯುಷ್ಮಾನ್ ಭಾರತ್
ಯೋಜನೆಯಡಿ 5 ಲಕ್ಷ ರೂ.ವರೆಗೆ ಉಚಿತ ಚಿಕಿತ್ಸೆ ಒದಗಿಸುವುದಕ್ಕೆ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಅವರು ಒತ್ತಾಯಿಸಿದ್ದಾರೆ.
ರಾಜ್ಯದಲ್ಲಿ ಬಾಣಂತಿಯರ ಮತ್ತು ನವಜಾತ ಶಿಶುಗಳ ಸರಣಿ ಸಾವು ಸಂಭವಿಸುತ್ತಿದ್ದರೂ ಕಣ್ಮುಚ್ಚಿ ಕುಳಿತಿರುವ ರಾಜ್ಯ ಸರ್ಕಾರ ಈಗ ಆಯುಷ್ಮಾನ್ ಭಾರತ ಯೋಜನೆ ಜಾರಿಗೆ ಅಡ್ಡಗಾಲು ಹಾಕುತ್ತಿದೆ. ಮತ್ತೊಂದೆಡೆ ಹಾಲು, ಬಸ್ ಪ್ರಯಾಣ ದರ ಸೇರಿದಂತೆ ಅಗತ್ಯ ವಸ್ತುಗಳ ಬೆಲೆಯನ್ನು ಕೂಡ ನಿರಂತರವಾಗಿ ಏರಿಸುವ ಮೂಲಕ ಅಕ್ಷರಶಃ ಜನವಿರೋಧಿ ಮತ್ತು ಬಡವರ ವಿರೋಧಿ ಸರ್ಕಾರ ಎನ್ನುವುದನ್ನು ಸಾಬೀತುಪಡಿಸುತ್ತಿದೆ ಎಂದು ಕ್ಯಾ.ಚೌಟ ತಿಳಿಸಿದ್ದಾರೆ.
....................