ಮಂಗಳೂರು : ಬಿಜೆಪಿ ದಕ್ಷಿಣ ಕನ್ನಡ ಲೋಕಸಭಾ ಅಭ್ಯರ್ಥಿ ಕ್ಯಾಪ್ಟನ್ ಬೃಜೇಶ್ ಚೌಟ ಅವರು ಏ.4ರಂದು ಬೆಳಗ್ಗೆ 11ಕ್ಕೆ ಜಿಲ್ಲಾ ಚುನಾವಣಾಧಿಕಾರಿ ಕಚೇರಿಗೆ ತೆರಳಿ ಅಧಿಕೃತವಾಗಿ ನಾಮಪತ್ರ ಸಲ್ಲಿಸಲಿದ್ದಾರೆ ಎಂದು ಜಿಲ್ಲಾ ಬಿಜೆಪಿ ಅಧ್ಯಕ್ಷ ಸತೀಶ್ ಕುಂಪಲ ತಿಳಿಸಿದ್ದಾರೆ.
ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ‘ ಏ.4ರಂದು ಬೆಳಗ್ಗೆ 9ಕ್ಕೆ ಬಂಟ್ಸ್ ಹಾಸ್ಟೆಲ್ ಬಳಿಯ ಬಿಜೆಪಿ ಚುನಾವಣಾ ಕಾರ್ಯಾಲಯದಿಂದ ಜಿಲ್ಲಾಧಿಕಾರಿಗಳ ಕಚೇರಿವರೆಗೆ ಕಾರ್ಯಕರ್ತರು, ಬೆಂಬಲಿಗರು, ಮುಖಂಡರ ಬೃಹತ್ ಮೆರವಣಿಗೆಯೊಂದಿಗೆ ಪಕ್ಷದ ಅಭ್ಯರ್ಥಿ ಕ್ಯಾಪ್ಟನ ಬೃಜೇಶ್ ಚೌಟ ಅವರು ಪಾದಯಾತ್ರೆ ನಡೆಸಲಿದ್ದಾರೆ ಎಂದರು.
ಚುನಾವಣಾ ಸಿದ್ಧತೆ ಸಂಬಂಧಿಸಿ ವಿಧಾನ ಸಭಾ ಕ್ಷೇತ್ರಗಳ ಪೈಕಿ 9 ಮಂಡಲಗಳಲಿ ್ಲ61 ಮಹಾಶಕ್ತಿ ಕೇಂದ್ರದ ಸಂಘಟನಾ ವ್ಯಾಪ್ತಿಯಲ್ಲಿ ಎಲ್ಲ ಕಾರ್ಯಕರ್ತರ ಸಂಪರ್ಕ ಯಶಸ್ವಿಯಾಗಿದೆ. ಈಗಾಗಲೇ 495 ಶಕ್ತಿ ಕೇಂದ್ರಗಳನ್ನು ಯಶಸ್ವಿಯಾಗಿ ಸಂಪರ್ಕ ಮಾಡಿದ್ದೇವೆ. 1876 ಬೂತ್‌ಗಳಲ್ಲಿ ಕೂಡ ಸಭೆಗಳನ್ನು ನಡೆಸುವ ಕಾರ್ಯ ನಡೆಯುತ್ತಿದೆ. ನಮ್ಮ ಜಿಲ್ಲೆಯಿಂದ ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಬರುವ 8 ವಿಧಾನ ಸಭಾ ಕ್ಷೇತ್ರಗಳಿಗೂ ಈಗಾಗಲೇ 8 ಮಂದಿ ಪ್ರಮುಖರನ್ನು ಪ್ರಭಾರಿಗಳನ್ನಾಗಿ ನಿಯೋಜಿಸಲಾಗಿದೆ ಎಂದರು.
ಏ.5ರಿಂದ ಬೂತ್ ಮಟ್ಟದಲ್ಲಿ ಮನೆ-ಮನೆ ಸಂಪರ್ಕ ಅಭಿಯಾನ ವ್ಯಾಪಕವಾಗಿ ಆರಂಭವಾಗಲಿದೆ. ಮೂರು ಹಂತದಲ್ಲಿ ಸಂಪರ್ಕ ಮಾಡುವ ಯೋಜನೆ ಇದೆ. ಏ.21ರಂದು ಮಹಾ ಅಭಿಯಾನ ಮಾಡುವ ಯೋಜನೆ ಹಾಕಿಕೊಳ್ಳಲಾಗಿದೆ ಎಂದು ಸತೀಶ್ ಕುಂಪಲ ಹೇಳಿದರು.
ಚುನಾವಣಾ ಉಸ್ತುವಾರಿ ನಿತಿನ್‌ಕುಮಾರ್, ಕೋಶಾಧಿಕಾರಿ ಸಂಜಯ್ ಪ್ರಭು, ರವಿಶಂಕರ ಮಿಜಾರು, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪ್ರೇಮಾನಂದ ಶೆಟ್ಟಿ, ಪ್ರಧಾನ ಕಾರ್ಯದರ್ಶಿ ಯತೀಶ್ ಅರ್ವಾರ್ ಉಪಸ್ಥಿತರಿದ್ದರು.