ಜಿಲ್ಲೆ

ಸ್ಲೊವೇನಿಯಾದಲ್ಲಿ ಸಂಸದ ಕ್ಯಾ. ಚೌಟರನ್ನು ಒಳಗೊಂಡ ನಿಯೋಗ

Mangaluru - Hariprasad Rai


ಮಂಗಳೂರು : ಭಯೋತ್ಪಾದನೆ ವಿರುದ್ಧ ಭಾರತದ ದೃಢ ಸಂಕಲ್ಪವನ್ನು ಜಾಗತಿಕವಾಗಿ ಎತ್ತಿ ಹಿಡಿಯುವ ಮೂಲಕ ಪಾಕಿಸ್ತಾನದ ನಿಜಬಣ್ಣ ಬಯಲು ಮಾಡುವುದಕ್ಕೆ ದ.ಕ. ಸಂಸದ ಕ್ಯಾ. ಬ್ರಿಜೇಶ್ ಚೌಟ ಅವರನ್ನು ಒಳಗೊಂಡ ಸಂಸದೆ ಕನಿಮೋಳಿ
ನೇತೃತ್ವದ ಸರ್ವಪಕ್ಷಗಳ ನಿಯೋಗವು ರಷ್ಯಾ ಭೇಟಿ ಬಳಿಕ ಈಗ ಸ್ಲೊವೇನಿಯಾ ದೇಶದಲ್ಲಿದ್ದು, ಹಲವು ಕಡೆ ಉನ್ನತ
ಮಟ್ಟದ ಸಭೆಯಲ್ಲಿ ಭಾರತದ ನಿಲುವನ್ನು ಸ್ಪಷ್ಟಪಡಿಸಿದೆ.
ಸ್ಲೊವೇನಿಯಾ ದೇಶಕ್ಕೆ ಆಗಮಿಸಿದ ನಿಯೋಗವನ್ನು ಅಲ್ಲಿನ ಭಾರತೀಯ ರಾಯಭಾರಿ ಅಧಿಕಾರಿ ಅಮಿತ್ ನಾರಂಗ್ ಸ್ವಾಗತಿಸಿದರು.
ಸರ್ವಪಕ್ಷಗಳ ಸಂಸದೀಯ ನಿಯೋಗದ ಜತೆಗೆ ಭಯೋತ್ಪಾದನೆಯ ವಿರುದ್ಧದ ಹೋರಾಟದಲ್ಲಿ ಸ್ಲೊವೇನಿಯಾ ದೇಶವು ಭಾರತದೊಂದಿಗೆ ಬೆಂಬಲವಾಗಿ ನಿಂತಿದ್ದು, ಉಭಯ ದೇಶಗಳ ನಡುವೆ ವೃದ್ದಿಸುತ್ತಿರುವ ಬಾಂಧವ್ಯದ ಕುರಿತು ಸಮಗ್ರ ಮಾಹಿತಿ ಹಂಚಿಕೊಂಡರು.
ಸರ್ವಪಕ್ಷದ ನಿಯೋಗವು ರಾಷ್ಟ್ರೀಯ ಅಸೆಂಬ್ಲಿಯ ವಿದೇಶಾಂಗ ನೀತಿ ಸಮಿತಿಯ ಅಧ್ಯಕ್ಷ ಎಚ್..ಇ. ಪ್ರೆಡ್ರಾಗ್ ಬಕೋವಿಲ್ ಮತ್ತು
ಭಾರತ-ಸ್ಲೊವೇನಿಯಾ ಪಾರ್ಲಿಮೆಂಟರಿ ಫ್ರೆಂಡ್‌ಶಿಪ್ ಗ್ರೂಪ್‌ನ ಮಿರ್ಸ್ಲಾವ್ ಗ್ರೆಗೋರಿಕ್ ಅವರೊಂದಿಗೆ ಸಭೆ
ನಡೆಸಿ ಭಯೋತ್ಪಾದನೆಯ ವಿರುದ್ಧ ಶೂನ್ಯ ಸಹಿಷ್ಣುತೆಯ ಕುರಿತ ಭಾರತದ ಬಲವಾದ ಬದ್ಧತೆ ಕುರಿತು ಮನವರಿಕೆ ಮಾಡಿಕೊಟ್ಟಿದೆ.
ಭಯೋತ್ಪಾದನೆಯನ್ನು ಪೋಷಿಸುತ್ತಿರುವ ಪಾಕಿಸ್ತಾನದ ಇಬ್ಬಗೆಯ ನೀತಿಯ ಕುರಿತು ಭಾರತದ ಕಳವಳವನ್ನು ಸ್ಲೊವೇನಿಯಾದ
ಜನಪ್ರತಿನಿಧಿಗಳು ಹಾಗೂ ಚಿಂತಕರಿಗೆ ಸ್ಪಷ್ಟವಾಗಿ ತಿಳಿಹೇಳಲಾಯಿತು ಎಂದು ಸಂಸದ ಕ್ಯಾ.ಚೌಟ ತಿಳಿಸಿದ್ದಾರೆ.