ಜಿಲ್ಲೆ

ಕೇಂದ್ರದ ಯೋಜನೆಗಳನ್ನು ಅನುಷ್ಠಾನಗೊಳಿಸಲು ರಾಜ್ಯ ಸರ್ಕಾರ ನಿರಾಸಕ್ತಿ - ಕ್ಯಾ.ಬ್ರಿಜೇಶ್ ಚೌಟ

Mangaluru - Hariprasad Rai


ಮಂಗಳೂರು : ಕೇಂದ್ರ ಸರ್ಕಾರದ ಮಹತ್ವದ ಯೋಜನೆಗಳನ್ನು ಕರ್ನಾಟಕದಲ್ಲಿ ಅನುಷ್ಠಾನಗೊಳಿಸಲು ರಾಜ್ಯದ ಕಾಂಗ್ರೆಸ್ ಸರ್ಕಾರ ಆಸಕ್ತಿ ವಹಿಸುತ್ತಿಲ್ಲ ಎಂದು ದ.ಕ. ಸಂಸದ ಕ್ಯಾ.ಬ್ರಿಜೇಶ್ ಚೌಟ ತಿಳಿಸಿದ್ದಾರೆ.
ಪ್ರಧಾನಮಂತ್ರಿ ಆವಾಜ್ 2.2 ಯೋಜನೆಗೆ ಚಾಲನೆ ನೀಡಲಾಗಿದ್ದು, ದೇಶದ 24 ರಾಜ್ಯ ಸರ್ಕಾರಗಳು ಈ ಯೋಜನೆ ಜಾರಿಗೆ ಸಹಿ ಹಾಕಿವೆ. ಆದರೆ ಕರ್ನಾಟಕ ಸರ್ಕಾರ ಇದುವರೆಗೆ ಸಹಿ ಹಾಕಿಲ್ಲ. ಈ ಬಗ್ಗೆ ವಿಧಾನಸಭೆಯ ಅಧಿವೇಶನದಲ್ಲಿ ಸಚಿವ ಜಮೀರ್ ಅಹ್ಮದ್ ಕೇಂದ್ರ ನೀಡುವ 1.5 ಲಕ್ಷ ರೂ. ಹಣದಲ್ಲಿ ಮನೆ ಕಟ್ಟಲಾಗದು ಎಂಬ ಹೇಳಿಕೆ ನೀಡಿದ್ದು ಹಾಸ್ಯಾಸ್ಪದ. ರಾಜ್ಯದ ಜನರ ಬಗ್ಗೆ
ಸಿದ್ದರಾಮಯ್ಯ ಸರ್ಕಾರಕ್ಕೆ ಕಾಳಜಿ ಇದ್ದರೆ ಪಿಎಂ ಆವಾಜ್ ಯೋಜನೆ ಜಾರಿಗೆ ಸಹಿ ಹಾಕಬೇಕು ಎಂದು ಅವರು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಆಗ್ರಹಿಸಿದರು.
ಕೊಂಕಣ ರೈಲ್ವೆಯ ಶೇರುಗಳನ್ನು ರಾಜ್ಯ ಸರ್ಕಾರ ಬಿಟ್ಟುಕೊಟ್ಟರೆ ಇಂಡಿಯನ್ ರೈಲ್ವೆ ಜತೆ ಕೊಂಕಣ ರೈಲ್ವೆಯನ್ನು ವಿಲೀನಗೊಳಿಸಲು ಸಿದ್ಧ ಎಂಬುದಾಗಿ ಕೇಂದ್ರ ಸಚಿವರು ಸಂಸತ್‌ನಲ್ಲಿ ಉತ್ತರ ನೀಡಿದ್ದಾರೆ. ಆ ಶೇರಿನ ಪೂರಕ ಹಣವನ್ನು ಕೇಂದ್ರ ಸರ್ಕಾರ ನೀಡಿದರೆ ಶೇರು ಬಿಟ್ಟುಕೊಡುವುದಾಗಿ ರಾಜ್ಯ ಸರ್ಕಾರ ತಿಳಿಸಿದೆ. ಕೊಂಕಣ ರೈಲ್ವೆ ಕೋಟ್ಯಂತರ ರೂ. ಸಾಲದಲ್ಲಿರುವುದರಿಂದ ರಾಜ್ಯ ಸರ್ಕಾರ ಅದರ ಶೇರುಗಳನ್ನು ಬಿಟ್ಟುಕೊಟ್ಟು ವಿಲೀನಕ್ಕೆ ಸಹಕರಿಸಬೇಕು ಎಂದು ಕ್ಯಾ.ಚೌಟ ಹೇಳಿದರು.
*ಬಿ.ಸಿ.ರೋಡ್- ಗುಂಡ್ಯ ರಸ್ತೆ ಜೂನ್‌ಗೆ ರೆಡಿ :
ಮಂಗಳೂರು- ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ಬಿ.ಸಿ.ರೋಡ್- ಗುಂಡ್ಯ ಚತುಷ್ಪಥ ಹೆದ್ದಾರಿ ಕಾಮಗಾರಿ 2025ರ ಜೂನ್‌ನಲ್ಲಿ ಪೂರ್ಣಗೊಳಿಸುವುದಾಗಿ ಕೇಂದ್ರ ಸಚಿವರು ಸಂಸತ್‌ನಲ್ಲಿ ಉತ್ತರ ನೀಡಿದ್ದಾರೆ. ಲಕ್ಷದ್ವೀಪ ಜೆಟ್ಟಿ ಅಭಿವೃದ್ಧಿ ನಿಟ್ಟಿನಲ್ಲಿ ಸಿಆರ್‌ಝಡ್ ಸಮಸ್ಯೆ ಬಗೆಹರಿಸಲು ರಾಜ್ಯ ಬಂದರು ಇಲಾಖೆ ಆಸಕ್ತಿ ತೋರಿಸುತ್ತಿಲ್ಲ ಎಂದು ಅವರು ಆರೋಪಿಸಿದರು.
ಸುಬ್ರಹ್ಮಣ್ಯ ರೋಡ್ - ಸಕಲೇಶಪುರ ನಡುವೆ ರೈಲ್ವೆ ಲೈನ್ ಇಲೆಕ್ಟ್ರಿಫಿಕೇಶನ್ ಕಾಮಗಾರಿ ಮುಂದಿನ ಜೂನ್‌ನಲ್ಲಿ ಪೂರ್ತಿಯಾಗಲಿದೆ ಎಂದು ಸಚಿವರು ತಿಳಿಸಿದ್ದಾರೆ ಎಂದರು. ಮಂಗಳೂರು ಜಂಕ್ಷನ್ ರೈಲ್ವೆ ಮತ್ತು ಸೆಂಟ್ರಲ್‌ನ್ನು ನೈಋತ್ಯ ರೈಲ್ವೆಗೆ ವಿಲೀನಗೊಳಿಸುವ ಉದ್ದೇಶದಿಂದ ಕೇಂದ್ರ ರೈಲ್ವೆ ಸಚಿವರ ಜತೆ ಮಾತುಕತೆ ನಡೆಸಿದ್ದು, ಧನಾತ್ಮಕವಾಗಿ ಸ್ಪಂದಿಸಿದ್ದಾರೆ ಎಂದು ಅವರು ತಿಳಿಸಿದರು.
* ಶಿರಾಡಿ ಪರ್ಯಾಯ ರಸ್ತೆ ಚಿಂತನೆ:
ಶಿರಾಡಿ ಘಾಟ್ ಭಾಗದಲ್ಲಿ ಬೈಪಾಸ್ ರಸ್ತೆ ನಿರ್ಮಾಣ ಸಾಧ್ಯತೆ ಕುರಿತು ಡಿಪಿಆರ್ ಕೆಲಸ ಆರಂಭವಾಗಿದೆ. ಪಶ್ಚಿಮ ಘಟ್ಟದಲ್ಲಿ
ಇನ್ನೊಂದು ಮಾರ್ಗ ನಿರ್ಮಾಣ ಆಗಬೇಕಾದರೆ ರಾಜ್ಯ ಸರ್ಕಾರದ ಅರಣ್ಯ ಇಲಾಖೆ ಅನುಮತಿ ಹಾಗೂ ಕೇಂದ್ರ ಪರಿಸರ ಸಚಿವಾಲಯದ ಅನುಮತಿ ಬೇಕು. ರಾಜ್ಯದ ಒಪ್ಪಿಗೆ ದೊರೆತರೆ ಮುಂದಿನ ಪ್ರಕ್ರಿಯೆ ನಡೆಸುವುದಾಗಿ ಸಂಬಂಧಪಟ್ಟ ಸಚಿವರು ಅಧಿವೇಶನದಲ್ಲಿ ಉತ್ತರ ನೀಡಿದ್ದಾರೆ.
ಕಡಲ್ಕೊರೆತ, ಕೋಸ್ಟ್ ಗಾರ್ಡ್ ಅಕಾಡೆಮಿ, ಮಂಗಳೂರಿನಲ್ಲಿ ಪ್ರೀಮಿಯರ್ ಬ್ಯಾಂಕಿಂಗ್ ಸಂಸ್ಥೆ, ಅಡಕೆ ಎಲೆಚುಕ್ಕೆ ರೋಗ ಮತ್ತು ಹಳದಿ ರೋಗ ಕುರಿತು ಸರ್ಕಾರಿ- ಖಾಸಗಿ ಜಂಟಿ ಅಧ್ಯಯನ ಕುರಿತು ಸಂಬಂಧಿಸಿದ ಸಚಿವರ ಜತೆ ಮಾತುಕತೆ ನಡೆಸಿದ್ದೇನೆ. ಅಡಕೆ ರೋಗಬಾಧಿತ ಪ್ರದೇಶಗಳ ರೈತರಿಗೆ ಅನುಕೂಲವಾಗುವಂತೆ ಪರ್ಯಾಯ ಬೆಳೆಯಾಗಿ ಕಾಫಿ ಬೆಳೆಯಬಹುದು ಎಂಬ ಅಧ್ಯಯನ ವರದಿ ಬಂದಿದೆ ಎಂದು ಅವರು ತಿಳಿಸಿದ್ದಾರೆ.
ಮೇಯರ್ ಮನೋಜ್ ಕುಮಾರ್ ಕೋಡಿಕಲ್, ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪ್ರೇಮಾನಂದ ಶೆಟ್ಟಿ, ಸಂಜಯ್ ಪ್ರಭು, ರಮೇಶ್ ಕಂಡೆಟ್ಟು, ವಸಂತ ಪೂಜಾರಿ ಉಪಸ್ಥಿತರಿದ್ದರು.