ಜಿಲ್ಲೆ

ರಾಜಧಾನಿಯಲ್ಲಿ ದಸರೆಗೆ ಹೆಚ್ಚುವರಿ 2,500 ಟನ್ ತ್ಯಾಜ್ಯ ಉತ್ಪತ್ತಿ

ಬೆಂಗಳೂರು: ನಗರದಲ್ಲಿ ದಸರಾ ಹಬ್ಬದ ಹಿನ್ನೆಲೆ ಹೆಚ್ಚುವರಿಯಾಗಿ 2,500 ಟನ್ ಘನತ್ಯಾಜ್ಯ ಉತ್ಪತ್ತಿಯಾಗಿದ್ದು, ಅದನ್ನು ವಿಲೇವಾರಿ ಮಾಡಲು ಬೆಂಗಳೂರು ಘನತ್ಯಾಜ್ಯ ನಿರ್ವಹಣಾ ನಿಗಮ (ಬಿಎಸ್‌ಡಬ್ಲ್ಯುಎಂಎಲ್) ಹರಸಾಹಸಪಡಬೇಕಿದೆ.

ಆಯುಧಪೂಜೆ ಹಾಗೂ ವಿಜಯದಶಮಿ ಆಚರಣೆ ವೇಳೆ ಈ ಹೆಚ್ಚುವರಿ ತ್ಯಾಜ್ಯ ಉತ್ಪತ್ತಿಯಾಗಿದೆ. ಇವುಗಳಲ್ಲಿ ಬಗೆ ಬಗೆಯ ಹೂ, ಬೂದುಗುಂಬಳ, ಬಾಳೆಕಂಬ, ಸಹಿತಿ ಪದಾರ್ಥಗಳ ಬಾಕ್ಸ್/ಕವರ್, ಅಲಂಕಾರಿಕ ಸಾಮಗ್ರಿ ಸೇರಿವೆ. ಪ್ಲ್ಯಾಸ್ಟಿಕ್ ಕೂಡ ದೊಡ್ಡ ಪ್ರಮಾಣದಲ್ಲಿ ಕಂಡುಬಂದಿದೆ. ಹಬ್ಬಕ್ಕೆ ರಜೆ ಇದ್ದ ಕಾರಣ ಕಸ ಸಂಗ್ರಹ ಹಾಗೂ ವಿಲೇವಾರಿ ಸಮರ್ಪಕವಾಗಿ ನಡೆದಿಲ್ಲ. ಇದರಿಂದ ನಗರದ ಹಲವೆಡೆ ಕಸದ ರಾಶಿ ಕಂಡುಬಂದಿದೆ.

ನಗರದಲ್ಲಿ ನಿತ್ಯ 4,500 ಟನ್ ಘನತ್ಯಾಜ್ಯ ಉತ್ಪತ್ತಿಯಾಗುತ್ತಿದೆ. ಹಬ್ಬದ ದಿನ ಹೆಚ್ಚುವರಿ ತ್ಯಾಜ್ಯ ಸೇರಿ ಒಟ್ಟು 6,500 ಟನ್ ಕಸ ಉತ್ಪತ್ತಿಯಾಗಿದೆ. ಅದರಲ್ಲೂ ಪ್ರಮುಖ ವ್ಯಾಪಾರ ಕೇಂದ್ರವಾದ ಕೆ.ಆರ್.ಮಾರುಕಟ್ಟೆ ಆಸುಪಾಸು ಹಬ್ಬಕ್ಕೆ ಮಾರಾಟ ಮಾಡಲು ತಂದಿದ್ದ ಬಾಳೆಕಂಬ, ಹೂ ಇತ್ಯಾದಿ ವಸ್ತುಗಳು ಬಿಕರಿಯಾಗದ ಕಾರಣ ಅವುಗಳನ್ನು ಅಲ್ಲಿಯೇ ಬಿಟ್ಟು ಹೋಗಿರುವುದು ಕಂಡುಬಂದಿದೆ. ಇದೇ ರೀತಿ ಮಲ್ಲೇಶ್ವರ, ಯಶವಂತಪುರ, ವಿಜಯನಗರ, ಬನಶಂಕರಿ, ಮಡಿವಾಳ, ಕೆ.ಆರ್.ಪುರ, ಯಲಹಂಕ, ಸಿಂಗಸಂದ್ರ ಮಾರುಕಟ್ಟೆ ಪ್ರದೇಶಗಳಲ್ಲಿ ಅಧಿಕ ಕಸ ಸಂಗ್ರಹಗೊಂಡಿರುವುದನ್ನು ಘನತ್ಯಾಜ್ಯ ನಿರ್ವಹಣಾ ನಿಗಮ ದೃಢಪಡಿಸಿದೆ.

ತ್ವರಿತ ವಿಲೇಗೆ ಮುಖ್ಯ ಆಯುಕ್ತರ ಸೂಚನೆ:

ನಗರದ ಐದೂ ಪಾಲಿಕೆಗಳ ವ್ಯಾಪ್ತಿಯಲ್ಲಿ ಹಬ್ಬದ ದಿನಗಳಲ್ಲಿ ಕಸ ಸಂಗ್ರಹ ಕುರಿತು ಜಿಬಿಎ ಮುಖ್ಯ ಆಯುಕ್ತರು ಮಾಹಿತಿ ಪಡೆದುಕೊಂಡರು. ಹೆಚ್ಚುವರಿ ತ್ಯಾಜ್ಯವನ್ನು ತ್ವರಿತವಾಗಿ ವಿಲೇವಾರಿ ಮಾಡುವಂತೆ ನಿಗಮದ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಇದರ ಹೊರತಾಗಿಯೂ ಕಸ ವಿಲೇ ಮಾಡಲು ಸಿಬ್ಬಂದಿ ಕೊರತೆ ಉಂಟಾಗಿದೆ. ಹಬ್ಬಕ್ಕೆ ಕಾರ್ಮಿಕರು ರಜೆ ಹಾಕಿರುವುದರಿಂದ ಶುಕ್ರವಾರ ನಗರದ ಕೆಲ ಪ್ರದೇಶಗಳಲ್ಲಿ ಮನೆ ಮನೆಯಿಂದ ಕಸ ಸಂಗ್ರಹವಾಗಿಲ್ಲ. ಜತೆಗೆ ಕಾಂಪ್ಯಾಕ್ಟರ್ ವಾಹನಗಳು ಕೂಡ ಕ್ವಾರಿ/ಭೂಭರ್ತಿ ಕೇಂದ್ರಕ್ಕೆ ಹೆಚ್ಚು ಕಸವನ್ನು ಸಾಗಿಸಲು ಸಾಧ್ಯವಾಗಿಲ್ಲ. ಸಂಜೆ ಮಳೆ ಬಿದ್ದ ಹಿನ್ನೆಲೆ ವಿಲೇವಾರಿ ನಿಧಾನಗೊಂಡಿತು.

ಈ ಬಾರಿ ದಸರಾ ವೇಳೆ 2,500 ಟನ್ ಹೆಚ್ಚುವರಿ ಕಸ ಉತ್ಪತ್ತಿಯಾಗಿದ್ದು, ಅದನ್ನು ಹೊರಸಾಗಿಸಲು ಕಷ್ಟವಾಗಿದೆ. ಶುಕ್ರವಾರ ಸ್ವಲ್ಪಮಟ್ಟಿನ ತ್ಯಾಜ್ಯವನ್ನು ವಿಲೇವಾರಿ ಮಾಡಿದ್ದು, ಉಳಿದಿರುವುದನ್ನು ಶನಿವಾರದೊಳಗೆ ತೆರವು ಮಾಡಲು ಕ್ರಮ ಕೈಗೊಳ್ಳಲಾಗುವುದು.

- ಕರಿಗೌಡ, ಸಿಇಒ, ಬಿಎಸ್‌ಡಬ್ಲ್ಯುಎಂಎಲ್