ಜಿಲ್ಲೆ

ರಸ್ತೆ ಬದಿಗೆ ಬಂದು ಡಿಕ್ಕಿ ಹೊಡೆದ ಕ್ಯಾಂಟರ್ ವಾಹನ, ತಂದೆಯ ಎದುರೇ ಮಗಳ ಸಾವು


ಚಿಕ್ಕಬಳ್ಳಾಪುರ: ನಗರದ ಮರಳು ಸಿದ್ದೇಶ್ವರ ವೃತ್ತದಲ್ಲಿ ಕ್ಯಾಂಟರ್ ವಾಹನ ಡಿಕ್ಕಿ ಹೊಡೆದ ಹಿನ್ನೆಲೆಯಲ್ಲಿ ಪಶು ವೈದ್ಯಕಿಯ ವಿದ್ಯಾರ್ಥಿನಿ ಮೃತಪಟ್ಟಿದ್ದಾರೆ.
ಇಲ್ಲಿನ ಬಿಜಿಎಸ್ ಶಾಲೆಯ ಮುಖ್ಯ ಶಿಕ್ಷಕ ಅಂದಾರಲಹಳ್ಳಿ ಮುನಿರಾಜು ಪುತ್ರಿ ಯೋಗೀತಾ (24) ಮೃತೆ. ಬೆಂಗಳೂರಿನ ಪಶು ವೈದ್ಯಕಿಯ ಆಸ್ಪತ್ರೆಯಲ್ಲಿ ಕೋರ್ಸಿನ ತರಬೇತಿ ಪಡೆಯುತ್ತಿದ್ದು ಶುಕ್ರವಾರ ದ್ವಿಚಕ್ರ ವಾಹನದಲ್ಲಿ ತಂದೆಯ ಜತೆ ಹೋಗುತ್ತಿದ್ದ ಸಂದರ್ಭದಲ್ಲಿ ಕ್ಯಾಂಟರ್ ವಾಹನ ಡಿಕ್ಕಿ ಹೊಡೆದಿದೆ. ತಲೆಗೆ ಗಂಭೀರ ಪೆಟ್ಟು ಬಿದ್ದು ಪ್ರಜ್ಞೆ ಕಳೆದುಕೊಂಡಿದ್ದ ಗಾಯಾಳುವನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆ ಲಕಾರಿಯಾಗಿಲ್ಲ. ದುರ್ಟನೆಯ ಬಗ್ಗೆ ಮಾಹಿತಿ ತಿಳಿಯುತ್ತಿದ್ದಂತೆ ಯೋಗೀತಾ ಕಾಲೇಜಿನ ವಿದ್ಯಾರ್ಥಿಗಳು ಆಸ್ಪತ್ರೆಗೆ ಸಾಮೂಹಿಕವಾಗಿ ಬಂದು ಕಂಬನಿ ಮಿಡಿದರು. ನಗರ ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಹೆದ್ದಾರಿ ಕಾಮಗಾರಿ, ಜನಸಂದಣಿ ಸ್ಥಳ

ಚಿಕ್ಕಬಳ್ಳಾಪುರ ಮತ್ತು ಗೌರಿಬಿದನೂರು ಮಾರ್ಗದ ರಸ್ತೆಯಲ್ಲಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು ರಸ್ತೆ ವಿಸ್ತರಣೆ ಕಾಮಗಾರಿಯನ್ನು ಕೈಗೊಳ್ಳುತ್ತಿದ್ದು ನಿಗದಿತ ಜಾಗದಲ್ಲಿ ಕಟ್ಟಡಗಳನ್ನು ತೆರವುಗೊಳಿಸಿ ರಸ್ತೆ ಮತ್ತು ಚರಂಡಿ ನಿರ್ಮಿಸಲಾಗುತ್ತಿದೆ. ಈ ಮಾರ್ಗದಲ್ಲಿ ಸದಾ ಜನ ಮತ್ತು ವಾಹನ ದಟ್ಟಣೆ ಇರುತ್ತದೆ. ಇಂತಹ ಜಾಗದಲ್ಲಿ ವೇಗವಾಗಿ ಬಂದ ಕ್ಯಾಂಟರ್ ಇದ್ದಕ್ಕಿದ್ದಂತೆ ಅಡ್ಡಲಾಗಿದ್ದ ವಾಹನದಿಂದ ಪಕ್ಕಕ್ಕೆ ಸರಿದು ರಸ್ತೆ ಬದಿಯಲ್ಲಿ ಸಾಗಿದೆ. ಇದೇ ವೇಳೆ ಡಿಕ್ಕಿ ಹೊಡೆದ ಹಿನ್ನೆಲೆಯಲ್ಲಿ ಯೋಗಿತಾ ತಲೆಗೆ ಪೆಟ್ಟು ಬಿದ್ದಿದೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.