ವಾಹನ ಅಡ್ಡಗಟ್ಟಿ ಚಾಲಕನ ಮೇಲೆ ಪುಂಡರ ದಬ್ಬಾಳಿಕೆ.  
ಜಿಲ್ಲೆ

ಕ್ಯಾಂಟರ್​ ಅಡ್ಡಗಟ್ಟಿ ಚಾಲಕನ ಮೇಲೆ ಹಲ್ಲೆ

ಬೆಂಗಳೂರು ಗ್ರಾಮಾಂತರ ಡೆಸ್ಕ್

ಆನೇಕಲ್​: ಪಟ್ಟಣದಲ್ಲಿ ಪುಡಿ ರೌಡಿಗಳ ಅಟ್ಟಹಾಸ ಹೆಚ್ಚಾಗುತ್ತಿದ್ದು, ರಸ್ತೆಗಳಲ್ಲಿ ವಾಹನ ಸವಾರರ ಮೇಲಿನ ದಬ್ಬಾಳಿಕೆ ಮಾಡುವುದು ಮಿತಿಮೀರಿದೆ. ಪಟ್ಟಣದ ಚಂದಾಪುರ ಮುಖ್ಯ ರಸ್ತೆಯ ಪೊಲೀಸ್​ ಕ್ವಾರ್ರ್ಟಸ್​ ಎದುರು ಶುಕ್ರವಾರ ಬೈಕ್​ನಲ್ಲಿ ಬಂದ ಇಬ್ಬರು ಪುಂಡರು ಕ್ಯಾಂಟರ್​ ಅಡ್ಡಗಟ್ಟಿ ಚಾಲಕನಿಗೆ ಅವಾಚ್ಯವಾಗಿ ನಿಂದಿಸಿ ಹಲ್ಲೆ ಮಾಡುತ್ತಿರುವ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದೆ. ಪುಂಡರು ನಡು ರಸ್ತೆಯಲ್ಲಿ ವಾಹನ ಅಡ್ಡಗಟ್ಟಿ ಟ್ರಾಫಿಕ್​ ಜಾಮ್​ ಮಾಡಿ ಕಿರಿಕ್​ ಮಾಡುತ್ತಿರುವುದನ್ನು ಸ್ಥಳಿಯರು ಮೊಬೈಲ್​ನಲ್ಲಿ ವಿಡಿಯೋ ಮಾಡಿದ್ದಾರೆ. ಹಲ್ಲೆ ಮಾಡಿದ ಬಳಿಕ ಬೈಕ್​ ಸವಾರರು ಪರಾರಿಯಾಗಿದ್ದಾರೆ. ಪೊಲೀಸರು ವಾಸವಿರುವ ಕ್ವಾಟ್ರಸ್​ ಎದುರು ಭಯವಿಲ್ಲದೆ ನಡು ರಸ್ತೆಯಲ್ಲಿ ವಾಹನ ಅಡ್ಡ ಹಾಕಿ ಡಿವೈಡರ್​ ಮೇಲೆ ನಿಂತು ಚಾಲಕನ ಮೇಲೆ ಹಲ್ಲೆ ಮಾಡುತ್ತಿರುವ ಪುಂಡರ ಮೇಲೆ ಕ್ರಮ ಕೈಗೊಳ್ಳಬೇಕು ಎಂದು ಜಾಲತಾಣದಲ್ಲಿ ಸಾರ್ವಜನಿಕರು ಆಗ್ರಹಿಸುತ್ತಿದ್ದಾರೆ. ಹಲ್ಲೆ ದೃಶ್ಯ ಸಾಮಾಜಿಕ ಜಾಲತಾಣ ಹಾಗೂ ಮಾಧ್ಯಮಗಳಲ್ಲಿ ವರದಿ ಆಗುತ್ತಿದ್ದಂತೆ ದ್ವಿಚಕ್ರ ವಾಹನ ಸವಾರರ ಬಂಧನಕ್ಕೆ ಆನೇಕಲ್​ ಪೊಲೀಸರು ಬಲೆ ಬೀಸಿದ್ದಾರೆ.

ಆನೇಕಲ್​ನಲ್ಲಿ ಸರಣಿ ಕಳವು

ಆನೇಕಲ್​: ಹೆಲ್ಮೆಟ್​ ಧರಿಸಿದ್ದ ಮುಸುಕುಧಾರಿಗಳು ಗುರುವಾರ ಮುಂಜಾನೆ ಪಟ್ಟಣದ ಎರಡು ಕಡೆ ಕಳವು ಮಾಡಿದ್ದಾರೆ. ಮುಂಜಾನೆ ಐದು ಗಂಟೆ ಸುಮಾರಿಗೆ ಸಾರ್ವಜನಿಕರು ಓಡಾಡುತ್ತಿದ್ದರೂ, ರಾಜಾರೋಷವಾಗಿ ಚಂದಾಪುರ ಮುಖ್ಯ ರಸ್ತೆಯಲ್ಲಿನ ಚಿಕನ್​ ಅಂಗಡಿಯ ಬಾಗಿಲು ಮುರಿದು ಕ್ಯಾಶ್​ ಲಾಕರ್​ನಲ್ಲಿದ್ದ 25 ಸಾವಿರ ರೂಪಾಯಿ ಮತ್ತು ಕೈಗೆ ಸಿಕ್ಕ ವಸ್ತುಗಳನ್ನು ಹೊತ್ತೊಯ್ದಿದ್ದಾರೆ. ಪ್ರಶ್ನಿಸಲು ಮುಂದಾದ ಸಾರ್ವಜನಿಕರಿಗೆ ಮಾರಕಾಸಗಳಿಂದ ಬೆದರಿಸಿದ್ದು, ಜನತೆ ಬೆಚ್ಚಿಬಿದ್ದಿದ್ದಾರೆ. ಮೂರು ಬೈಕ್​ಗಳಲ್ಲಿ ಬಂದಿದ್ದ ಏಳು ಮಂದಿಯಲ್ಲಿ ಮೂವರು ಹೆಲ್ಮೆಟ್​ ಧರಿಸಿದ್ದು, ಉಳಿದ ಮೂವರು ಮಾಸ್ಕ್​ ಧರಿಸಿದ್ದರು, ಕಳ್ಳರ ಚಲನವಲನ ಚಿಕನ್​ ಅಂಗಡಿಯಲ್ಲಿದ್ದ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಈ ಹಿಂದೆಯೂ ಅಂಗಡಿಯಲ್ಲಿ ಕಳವಾಗಿತ್ತು. ದೂರು ನೀಡಿದರೂ ಪ್ರಯೋಜನ ಆಗಿರಲಿಲ್ಲ ಎಂದು ಅಂಗಡಿ ಮಾಲೀಕ ಸಾದಿಕ್​ ಪಾಷ ತಿಳಿಸಿದ್ದಾರೆ. ಚಿಕನ್​ ಅಂಗಡಿಯಲ್ಲಿ ಕಳವಿಗೂ ಮುನ್ನ ಜಿಗಣಿ ಮುಖ್ಯರಸ್ತೆ ಕಿರಾಣಿ ಅಂಗಡಿಗೆ ನುಗ್ಗಿದ್ದ ಕಳ್ಳರ ಗ್ಯಾಂಗ್​ ಅಂಗಡಿ ಬೀಗ ಮುರಿದು 20 ಸಾವಿರ ಬೆಲೆಬಾಳುವ ಸಿಗರೇಟ್​, ಗಲ್ಲಾಪೆಟ್ಟಿಗೆಯಲ್ಲಿದ್ದ 20 ಸಾವಿರ ನಗದು ದೋಚಿ ಪರಾರಿಯಾಗಿದೆ.