ಜಿಲ್ಲೆ

ಕ್ಯಾಂಟರ್​ ಡಿಕ್ಕಿ, ಮೂವರ ಸ್ಥಿತಿ ಗಂಭೀರ

ಎನ್.ವೆಂಕಟೇಶ್

ಚಿಂತಾಮಣಿ: ಚಿಂತಾಮಣಿ ಚೇಳೂರು ಮುಖ್ಯರಸ್ತೆ ಏನಿಗದೆಲೆ ಸಮೀಪದ ಚಿಂತಮಾಕಲಹಳ್ಳಿ ಕ್ರಾಸ್​ ಬಳಿ ಬುಧವಾರ ಬೊಲೆರೋ ಮತ್ತು ಕ್ಯಾಂಟರ್​ ನಡುವೆ ಡಿಕ್ಕಿಯಾಗಿ ಬೊಲೆರೋದಲ್ಲಿದ್ದ ಒಬ್ಬರಿಗೆ ಗಾಯವಾಗಿದ್ದು, ಮೂವರ ಸ್ಥಿತಿ ಗಂಭೀರವಾಗಿದೆ.

ಕೋಲಾರ ಜಿಲ್ಲೆಯ ಮುಳುಬಾಗಿಲು ತಾಲೂಕಿನ ಗೊಲ್ಲಪಲ್ಲಿಯ ಚೌಡಪ್ಪ(60) ಆತನ ಪತ್ನಿ ರವಣಮ್ಮ (55) ಮತ್ತು ಬೊಲೆರೋ ವಾಹನದ ಚಾಲಕ ಕೊಂಡೇಪಲ್ಲಿಯ ಅಬ್ದುಲ್​ (30)ಮತ್ತು ಆತನ ತಮ್ಮ ವಸೀಮ್​ (25)ಗಾಯಗೊಂಡವರು.

ಮುಳಬಾಗಿಲು ತಾಲೂಕಿನ ಗೊಲ್ಲಪಲ್ಲಿ ಚೌಡಪ್ಪ ಮತ್ತು ರವಣಮ್ಮ ಚೇಳೂರು ತಾಲೂಕಿನ ಪಾತಪಾಳ್ಯ ಗ್ರಾಮದಲ್ಲಿರುವ 4 ಮೇಕೆಗಳನ್ನು ಸ್ವಗ್ರಾಮಕ್ಕೆ ತರಲು ಚಿಂತಾಮಣಿಯಿಂದ ಚೇಳೂರು ಮೂಲಕ ಪಾತಪಾಳ್ಯಕ್ಕೆ ಹೋಗುತ್ತಿದ್ದರು. ಕ್ಯಾಂಟರ್​ ಚಾಲಕ ಆಂಧ್ರದಿಂದ ಭತ್ತದ ಮೂಟೆ ಲೋಡ್​ ಮಾಡಿಕೊಂಡು ಚಿಂತಾಮಣಿಯತ್ತ ಬರುತ್ತಿದ್ದಾಗ ಅಪಘಾತವಾಗಿದೆ.

ಕ್ಯಾಂಟರ್​ ಚಾಲಕ ಅಜಾಗರೂಕತೆಯಿಂದ ವಾಹನ ಚಾಲನೆ ಮಾಡಿಕೊಂಡು ಬಂದು ಬೊಲೆರೋಗೆ ಡಿಕ್ಕಿ ಹೊಡೆದ ರಭಸಕ್ಕೆ ಬೊಲೆರೋ ಜಖಂಗೊಂಡು ರಸ್ತೆಗೆ ಉರುಳಿ ಬಿದ್ದಿದೆ. ಕ್ಯಾಂಟರ್​ ಉರುಳಿ ಮೂಟೆಗಳು ರಸ್ತೆಯಲ್ಲಿ ಚೆಲ್ಲಾಪಿಲ್ಲಿಯಾಗಿ ಬಿದ್ದು ಚೇಳೂರು ಮುಖ್ಯರಸ್ತೆಯಲ್ಲಿ ಸಂಚಾರ ಅಸ್ಥವ್ಯಸ್ಥವಾಗಿತ್ತು.

ಸ್ಥಳಕ್ಕೆ ಭೇಟಿ ನೀಡಿದ ಕೆಂಚಾರ್ಲಹಳ್ಳಿ ಪಿಎಸ್​ಐ ಶಿವಕುಮಾರ್​ ಸಹಾಯದಿಂದ ಗಾಯಾಳುಗಳನ್ನು ಚಿಂತಾಮಣಿ ಸಾರ್ವಜನಿಕ ಆಸ್ಪತ್ರೆಗೆ ರವಾನಿಸಿದ್ದಾರೆ. ಕ್ಯಾಂಟರ್​ನ್ನು ರಸ್ತೆಯಿಂದ ಪಕ್ಕಕ್ಕೆ ಎಳೆದು, ರಸ್ತೆಯಲ್ಲಿ ಬಿದ್ದ ಮೂಟೆಗಳನ್ನು ಟ್ರಾ$್ಯಕ್ಟರ್​ಗೆ ತುಂಬಿಸಿ ಮಾಲೀಕರಿಗೆ ತಲುಪಿಸಿದ್ದಾರೆ. ಅಪಘಾತದ ಎಸಗಿದ ಕ್ಯಾಂಟರ್​ ಚಾಲಕ ಸ್ಥಳದಿಂದ ಪರಾರಿಯಾಗಿದ್ದಾನೆ.

ತೀವ್ರವಾಗಿ ಗಾಯಗೊಂಡ ಚಾಲಕ ಅಬ್ದುಲ್​ ಆತನ ತಮ್ಮ ವಸೀಮ್​ ಮತ್ತು ರವಣಮ್ಮಗೆ ಇಲ್ಲಿನ ಸಾರ್ವಜನಿಕ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿದ ನಂತರ ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿಗೆ ರವಾನಿಸಲಾಗಿದೆ. ಗಾಯಾಳು ಚೌಡಪ್ಪ, ಚಿಂತಾಮಣಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ತಾಲೂಕಿನ ಕೆಂಚಾರ್ಲಹಳ್ಳಿ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.