ಜಿಲ್ಲೆ

ದ್ವಿಚಕ್ರ ವಾಹನಕ್ಕೆ ಕ್ಯಾಂಟರ್ ಡಿಕ್ಕಿ, ದಂಪತಿ ಸಾವು

ಬೆಂಗಳೂರು: ಕ್ಯಾಂಟರ್ ವಾಹನವೊಂದು ಹಿಂದಿನಿಂದ ವೇಗವಾಗಿ ಬಂದು ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದು ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ದಂಪತಿ ಸ್ಥಳದಲ್ಲೇ ಮತಪಟ್ಟಿರುವ ಘಟನೆ ನೈಸ್ ರಸ್ತೆಯ ವಜ್ರಮುನೇಶ್ವರ ಕೇಳಸೇತುವೆ ಬಳಿ ಗುರುವಾರ ಮಧ್ಯಾಹ್ನ ನಡೆದಿದೆ.
ವಿಜಯನಗರದ ಹೊಸಹಳ್ಳಿ ನಿವಾಸಿಗಳಾದ ಬೈಯಣ್ಣ(೫೫) ಮತ್ತು ನಿರ್ಮಲ(೪೪) ಮೃತರು. ದಂಪತಿ ಬೆಳಗ್ಗೆ ಹಾರಗದ್ದೆಗೆ ಸಂಬಂಧಿಕರ ಗೃಹಪ್ರವೇಶ ಕಾರ್ಯಕ್ರಮಕ್ಕೆ ತೆರಳಿದ್ದರು. ಕಾರ್ಯಕ್ರಮ ಮುಗಿಸಿಕೊಂಡು ಮನೆಗೆ ವಾಪಾಸ್ ಬರುವಾಗ ಮಾರ್ಗ ಮಧ್ಯೆ ಈ ದುರ್ಘಟನೆ ನಡೆದಿದೆ.
ಬೈಯಣ್ಣ ದಂಪತಿ ತಮ್ಮ ಹೋಂಡಾ ಆಕ್ಟಿವಾ ದ್ವಿಚಕ್ರ ವಾಹನದಲ್ಲಿ ನೈಸ್ ರಸ್ತೆಯ ಮುಖಾಂತರ ಮನೆ ಕಡೆಗೆ ಹೊರಟ್ಟಿದ್ದರು, ಮಧ್ಯಾಹ್ನ ೩ ಗಂಟೆ ಸುಮಾರಿಗೆ ನೈಸ್ ರಸ್ತೆಯ ವಜ್ರಮುನೇಶ್ವರ ಕೇಳಸೇತುವೆ ಬಳಿ ಹೋಗುವಾಗ ಹಿಂದಿನಿಂದ ಕ್ಯಾಂಟರ್ ವಾಹನ ವೇಗವಾಗಿ ಬಂದು ಏಕಾಏಕಿ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ದಂಪತಿ ದ್ವಿಚಕ್ರ ವಾಹನ ಸಹಿತ ಹಾರಿ ರಸ್ತೆಗೆ ಬಿದ್ದಿದ್ದಾರೆ. ಈ ವೇಳೆ ತಲೆ ಹಾಗೂ ದೇಹದ ಇತರೆ ಭಾಗಗಳಿಗೆ ತೀವ್ರ ಪೆಟ್ಟು ಬಿದ್ದು ರಕ್ತಸ್ರಾವವಾಗಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಕ್ಯಾಂಟರ್ ಚಾಲಕ ಪರಾರಿ:
ಘಟನೆ ಬಳಿಕ ಕ್ಯಾಂಟರ್ ವಾಹನ ಚಾಲಕ ಸ್ಥಳದಲ್ಲೇ ವಾಹನ ಬಿಟ್ಟು ಪರಾರಿಯಾಗಿದ್ದಾನೆ.
ಘಟನೆ ಹಿನ್ನೆಲೆಯಲ್ಲಿ ತಲಘಟ್ಟಪುರ ಸಂಚಾರ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಕಿಮ್ಸ್ ಆಸ್ಪತ್ರೆಗೆ ರವಾನಿಸಿದ್ದಾರೆ. ಕ್ಯಾಂಟರ್ ಚಾಲಕನ ಅತಿಯಾದ ವೇಗ ಹಾಗೂ ನಿರ್ಲಕ್ಷ್ಯದ ಚಾಲನೆಯೇ ಅಪಘಾತಕ್ಕೆ ಕಾರಣ ಎಂಬುದು ಮೇಲ್ನೋಟಕ್ಕೆ ಕಂಡು ಬಂದಿದೆ. ಈ ಸಂಬಂಧ ತಲಘಟ್ಟಪುರ ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಕ್ಯಾಂಟರ್ ಚಾಲಕನ ಪತ್ತೆಗೆ ಶೋಧ ನಡೆಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಎರಡು ಅಪಘಾತದಲ್ಲಿ ಪ್ರಾಣಾಪಾದಿಂದ ಪಾರು:
ಮೃತ ಬೈಯಣ್ಣ-ನಿರ್ಮಲ ದಂಪತಿಗೆ ಇಬ್ಬರು ಮಕ್ಕಳು. ಇಬ್ಬರೂ ಇಂಜಿನಿಯರಿಂಗ್ ಪದವಿಧರರು. ಬೈಯಣ್ಣ ಹೊಸಹಳ್ಳಿಯ ದೇವಸ್ಥಾನವೊಂದರ ಟ್ರಸ್ಟಿಯಾಗಿದ್ದರು. ಈ ಹಿಂದೆ ಎರಡು ಬಾರಿ ಅಪಘಾತಕ್ಕೆ ಒಳಗಾಗಿದ್ದ ಬೈಯಣ್ಣ ಅವರು ತೀವ್ರವಾಗಿ ಗಾಯಗೊಂಡು ಚಿಕಿತ್ಸೆ ಪಡೆದು ಪ್ರಾಣಾಪಾಯದಿಂದ ಪಾರಾಗಿದ್ದರು. ಮೂರನೇ ಬಾರಿ ಅಪಘಾತದಲ್ಲಿ ಬೈಯಣ್ಣ ಹಾಗೂ ಅವರ ಪತ್ನಿ ಇಬ್ಬರೂ ಮೃತಪಟ್ಟಿದ್ದಾರೆ.