ಮುಳಬಾಗಿಲು: ಯೋಜನೆಗಳನ್ನು ಅನುಷ್ಠಾನ ಮಾಡಬೇಕಾದ ಸರ್ಕಾರವೇ ನಿರ್ಲಕ್ಷ್ಯ ವಹಿಸಿದರೆ ಉದ್ದೇಶಿತ ಕಾರ್ಯ ಯಾವ ಪ್ರಮಾಣದಲ್ಲಿ ಕುಂಠಿತಗೊಳ್ಳುತ್ತದೆ ಎಂಬುದಕ್ಕೆ ಮುಳಬಾಗಿಲಿನ ಇಂದಿರಾ ಕ್ಯಾಂಟೀನ್ ಕೈಗನ್ನಡಿ.
ಮುಳಬಾಗಿಲಿನ ಜಿಪಂ ತಾಂತ್ರಿಕ ಉಪ ವಿಭಾಗದ ಕಚೇರಿ ಆವರಣದಲ್ಲಿ 8ವರ್ಷ ಹಿಂದೆ ಇಂದಿರಾ ಕ್ಯಾಂಟೀನ್ ನಿಮಾರ್ಣದ ಕಾಮಗಾರಿ ಆರಂಭಗೊಂಡು ಪೂರ್ಣಗೊಳ್ಳುವ ಹಂತ ತಲುಪಿದರೂ ಇನ್ನು ಉದ್ಘಾಟನೆ ಭಾಗ್ಯ ಕಾಣದಿರುವುದು ವಿಪರ್ಯಾಸವಾಗಿದೆ.
2013 ರಿಂದ 2017 ರವರೆಗೂ ರಾಜ್ಯದಲ್ಲಿ ಅಧಿಕಾರದಲ್ಲಿದ್ದ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರದ ಪ್ರಮುಖ ಯೋಜನೆಗಳಲ್ಲಿ ಇಂದಿರಾ ಕ್ಯಾಂಟೀನ್ ಒಂದಾಗಿದ್ದು, 2017ರಲ್ಲಿ ಅಂದಿನ ಮುಳಬಾಗಿಲು ಶಾಸಕರಾಗಿದ್ದ ಕೊತ್ತೂರು ಜಿ.ಮಂಜುನಾಥ್ ಅವಧಿಯಲ್ಲಿ ಮುಳಬಾಗಿಲಿನಲ್ಲೂ ಒಂದು ಇಂದಿರಾ ಕ್ಯಾಂಟೀನ್ ಆರಂಭಕ್ಕೆ ಮಂಜೂರಾತಿ ದೊರೆತಿತ್ತು. ಅನಂತರ ಬದಲಾದ ರಾಜಕೀಯ ಪರಿಸ್ಥಿತಿಯಲ್ಲಿ ಕೊತ್ತೂರು ಬದಲು ಅವರ ಬೆಂಬಲದೊಂದಿಗೆ ಪಕ್ಷೇತರ ಶಾಸಕರಾಗಿ ಆಯ್ಕೆಗೊಂಡ ಎಚ್. ನಾಗೇಶ್ ಅವಧಿಯಲ್ಲಿ 2018ರಲ್ಲಿ ಕಾಂಗ್ರೆಸ್ ಜೆಡಿಎಸ್ ಸಮಿಶ್ರ ಸರ್ಕಾರದಲ್ಲಿ ಇಂದಿರಾ ಕ್ಯಾಂಟೀನ್ ಕಟ್ಟಡ ಕಾಮಗಾರಿ ಆರಂಭಕ್ಕೆ ಭೂಮಿಪೂಜೆ ನೆರವೇರಿಸಲಾಗಿತ್ತು.
ರಾಜ್ಯದಲ್ಲಿ ಮತ್ತು ತಾಲೂಕಿನಲ್ಲಿ ಬದಲಾದ ರಾಜಕೀಯ ಪರಿಸ್ಥಿತಿಗಳಲ್ಲಿ ಬಿ. ಎಸ್. ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರದಲ್ಲಿ ಎಚ್.ನಾಗೇಶ್ ಜಿಲ್ಲಾ ಉಸ್ತುವಾರಿ ಮತ್ತು ಅಬಕಾರಿ ಸಚಿವರಾಗಿದ್ದರು. ಇಂದಿರಾ ಕ್ಯಾಂಟೀನ್ ಕಾಮಗಾರಿ ಪಾಯದಲ್ಲೇ ಉಳಿಯಿತು. 2023 ರಿಂದ ಈ ಬಗ್ಗೆ ಾಲೋಅಪ್ ವರದಿಯನ್ನು ವಿಜಯವಾಣಿ ಪ್ರಕಟಿಸಿಕೊಂಡು ಬಂದ ಕಾರಣ ನೆಲದಲ್ಲಿದ್ದ ಪಾಯ ಇಂದು ಕಟ್ಟಡವಾಗಿ ಪೂರ್ಣ ಪ್ರಮಾಣದಲ್ಲಿ ಸಿದ್ಧಗೊಂಡಿದೆ. ಸರ್ಕಾರ ಸಿದ್ಧಸೂತ್ರವನ್ನು ಶೀಘ್ರಅನುಷ್ಠಾನ ಮಾಡಿ ಸ್ಥಳಿಯರಿಗೆ ರಿಯಾಯಿತಿ ದರದಲ್ಲಿ ಊಟ, ತಿಂಡಿ ನೀಡುವ ವ್ಯವಸ್ಥೆ ಮಾಡಬೇಕಿದೆ.
ಇಂದಿರಾ ಕ್ಯಾಂಟೀನ್ ಲೋಕಾರ್ಪಣೆಗೆ ಶೀಘ್ರದಲ್ಲೇ ದಿನಾಂಕ ನಿಗದಿ ಮಾಡಲಾಗುವುದು, ಅಂದಿನಿಂದಲೇ ತಿಂಡಿ, ಊಟ ರಿಯಾಯಿತಿ ದರದಲ್ಲಿ ಸಾರ್ವಜನಿಕರಿಗೆ ಲಭ್ಯವಾಗಲಿದೆ. > ಸಮೃದ್ಧಿ ವಿ. ಮಂಜುನಾಥ್ ಶಾಸಕ, ಮುಳಬಾಗಿಲು ಕ್ಷೇತ್ರ ಇದು ರಾಜ್ಯಮಟ್ಟದ ಕಾರ್ಯಕ್ರಮ. ಜಿಲ್ಲೆಯ ಮುಳಬಾಗಿಲು ಮಾಲೂರು, ಕೆಜಿಎಫ್ ತಾಲೂಕು ಕೇಂದ್ರಗಳಲ್ಲಿ ವೇಮಗಲ್,- ಕುರುಗಲ್ ಪಟ್ಟಣ ಪಂಚಾಯಿತಿ ಕೇಂದ್ರದಲ್ಲಿ ಶೀಘ್ರದಲ್ಲೇ ಒಂದೇ ಬಾರಿ ಸರ್ಕಾರದಿಂದಲೇ ಉದ್ಘಾಟನೆಯಾಗಲಿದೆ. ಮುಳಬಾಗಿಲು ಇಂದಿರಾ ಕ್ಯಾಂಟಿನ್ನಲ್ಲಿ ಅಡುಗೆ ಸಾಮಗ್ರಿಗಳು ಬಂದಿದ್ದು, ಜೋಡಣೆ ಕಾರ್ಯ ನಡೆದಿದೆ. > ವಿ. ಶ್ರೀಧರ್ ಪೌರಾಯುಕ್ತ, ನಗರಸಭೆ, ಮುಳಬಾಗಿಲು