ವಿಜಯವಾಣಿ ಸುದ್ದಿಜಾಲ ಧಾರವಾಡ
ಆರೋಗ್ಯಯುತ ಸಮಾಜ ನಿರ್ಮಾಣಕ್ಕೆ ಸಾರಾಯಿ ಮಾರಾಟ ಅಡ್ಡಗಾಲು ಎಂದು ಸಚಿವ ಎಚ್.ಕೆ. ಪಾಟೀಲ ಹೇಳಿದರು.
ನಗರದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮದ್ಯದ ಅಂಗಡಿ ವಿಚಾರವಾಗಿ ಸಾಕಷ್ಟು ಪರ ವಿರೋಧ ಚರ್ಚೆಗಳು ನಡೆಯುತ್ತಿವೆ. ಆದರೆ ಆರೋಗ್ಯದ ಸಮಾಜ ನಿರ್ಮಾಣವಾಗಲು ಮದ್ಯದ ಅಂಗಡಿಗಳು ಕಡಿಮೆ ಆಗಬೇಕು. ಸರ್ಕಾರ ಸಹ ಇತ್ತ ಗಮನ ನೀಡಬೇಕು ಎಂದರು.
ಸರ್ಕಾರಕ್ಕೆ ಸಮಾಜ ಮತ್ತು ಜನರ ಆರೋಗ್ಯಕ್ಕಿಂತ ಆದಾಯ ಮುಖ್ಯವಲ್ಲ ಎಂಬುದನ್ನು ನಾವು ಸೇರಿ ಎಲ್ಲರೂ ಅರಿಯಬೇಕು. ಸಾರಾಯಿ ಮಾರಾಟದಿಂದ ಆದಾಯ ಬರುತ್ತದೆ ಎಂಬ ಕಾರಣಕ್ಕೆ ಕುಡಿತವನ್ನು ಬೆಂಬಲಿಸಲು ಸಾಧ್ಯವಿಲ್ಲ ಎಂದರು.
ಇತ್ತೀಚಿನ ದಿನಗಳಲ್ಲಿ ಜಾತಿ ವಿಚಾರವಾಗಿ ರಾಜಕೀಯದಲ್ಲಿ ಸಾಕಷ್ಟು ಚರ್ಚೆಗಳು ನಡೆಯುತ್ತಿದೆ. ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೇರಲು ಲಿಂಗಾಯತರು ಸೇರಿ ಎಲ್ಲ ಸಮುದಾಯದವರೂ ಮತ ಹಾಕಿದ್ದಾರೆ. ಸ್ವಾಭಾವಿಕವಾಗಿ ಅದರಲ್ಲಿ ಲಿಂಗಾಯತರು ಹೆಚ್ಚು ಮತ ಹಾಕಿದ್ದಾರೆ. ನಾನು ನನ್ನ ರಾಜಕೀಯ ಜೀವನದಲ್ಲಿ ಜಾತಿ ವಿಚಾರ ಇಟ್ಟುಕೊಂಡು ಬೆಳೆದವನಲ್ಲ. ಮಾತನಾಡಿದವನೂ ಅಲ್ಲ. ಹೀಗಾಗಿ ಜಾತಿ ರಾಜಕಾರಣ ಮಾಡುವುದು ಸರಿಯಲ್ಲ. ಸರ್ಕಾರದ ಗ್ಯಾರಂಟಿ ಯೋಜನೆ ಯಿಂದ ಪಕ್ಷದ ಜನಪ್ರಿಯತೆ ಹೆಚ್ಚಿದ್ದು, ಬೇರೆ ಪಕ್ಷಗಳಿಗೆ ಹೊಟ್ಟೆ ಉರಿಯಾಗಿದೆ. ಹೀಗಾಗಿ ಗೊಂದಲ ಉಂಟು ಮಾಡುತ್ತಿದ್ದಾರೆ ಎಂದರು.