ಚನ್ನಗಿರಿಯಲ್ಲಿ ಶಾಸಕ ಮಾಡಾಳು ವಿರೂಪಾಕ್ಷಪ್ಪ ಸೋಮವಾರ ಪ್ರತಿ ಮನೆಯ ನಿವಾಸಿಗಳಿಗೆ ಮಾಸ್ಕ್, ಸ್ಯಾನಿಟೈಸರ್ ವಿತರಿಸಿದರು. ಪುರಸಭೆ ಸದಸ್ಯರಾದ ಕಮಲಾ ಹರೀಶ್, ಯಶೋದಬುಳ್ಳಿ, ಸವಿತಾ ರಾಘವೇಂದ್ರ, ನಂಜುಂಡಿ ಇದ್ದರು.  
ಜಿಲ್ಲೆ

ಕಿಡಿಗೇಡಿಗಳ ವದಂತಿಗೆ ಕಿವಿಗೊಡಬೇಡಿ

ಚನ್ನಗಿರಿ: ತಾಲೂಕಿನಲ್ಲಿ ಕರೊನಾ ರೋಗಿಗಳಿದ್ದಾರೆ ಎಂದು ಕಿಡಿಗೇಡಿಗಳು ಹಬ್ಬಿಸುತ್ತಿರುವ ವದಂತಿಗಳಿಗೆ ಜನತೆ ಕಿವಿಗೊಡಬಾರದು ಎಂದು ಶಾಸಕ ಮಾಡಾಳು ವಿರೂಪಾಕ್ಷಪ್ಪ ಹೇಳಿದರು.

ಪಟ್ಟಣದ ಉಪ್ಪಾರ ಬೀದಿಯ ನಿವಾಸಿಗಳಿಗೆ ಸೋಮವಾರ ಮಾಸ್ಕ್, ಸ್ಯಾನಿಟೈಸರ್ ವಿತರಿಸಿ ಮಾತನಾಡಿ, ತಾಲೂಕಿನಲ್ಲಿ ಕರೊನಾ ಪ್ರಕರಣ ವರದಿಯಾಗಿಲ್ಲ. ಆದರೂ ಕಿಡಿಗೇಡಿಗಳು ಜನರಲ್ಲಿ ಭೀತಿ ಹುಟ್ಟಿಸುವ ಕೆಲಸ ಮಾಡುತ್ತಿದ್ದಾರೆ. ಅಂತವರ ಬಗ್ಗೆ ಮಾಹಿತಿ ನೀಡಿದರೆ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.

ಮಾಸ್ಕ್, ಸ್ಯಾನಿಟೈಸರ್ ಬಳಕೆ ಜತೆಗೆ ವ್ಯಕ್ತಿ ವ್ಯಕ್ತಿಗಳ ಮಧ್ಯೆ ಅಂತರ ಕಾಯ್ದುಕೊಂಡರೆ ಕರೊನಾ ಸೋಂಕು ನಿಯಂತ್ರಣಕ್ಕೆ ಬರುತ್ತದೆ ಎಂದು ತಿಳಿಸಿದರು.

ಕೇಂದ್ರ ಸರ್ಕಾರ ಸೋಂಕು ತಡೆಗೆ ಮೇ 3 ರವರೆಗೆ ಲಾಕ್‌ಡೌನ್ ವಿಸ್ತರಿಸಿದ್ದರೆ, ಜನರು ಮನೆಯಲ್ಲಿ ಇರದೆ ಅನಾವಶ್ಯಕವಾಗಿ ರಸ್ತೆಯಲ್ಲಿ ಓಡಾಡುತ್ತಿದ್ದಾರೆ. ಹೀಗಾಗಿ ಸೋಂಕಿತರ ಸಂಖ್ಯೆ ಹೆಚ್ಚುತ್ತಿದೆ ಎಂದು ತಿಳಿಸಿದರು.

ಕ್ಷೇತ್ರ ವ್ಯಾಪ್ತಿಯ ಪ್ರತಿ ಕುಟುಂಬ ಸದಸ್ಯರಿಗೆ ಮಾಸ್ಕ್ ನೀಡುವ ವ್ಯವಸ್ಥೆ ಮಾಡಲಾಗಿದೆ. ಈಗಾಗಲೇ ಪಟ್ಟಣ ಸೇರಿ ಹಲವು ಗ್ರಾಮಗಳಲ್ಲಿ ವಿತರಿಸಿದ್ದು, ಅವಶ್ಯಕ ಇದ್ದಲ್ಲಿ ಮತ್ತೆ ಖರೀದಿಸಲಾಗುವುದು. ಇದಕ್ಕಾಗಿ ವೈಯಕ್ತಿಕವಾಗಿ ಎರಡು ಲಕ್ಷ ರೂ. ಖರ್ಚು ಮಾಡುತ್ತಿರುವುದಾಗಿ ತಿಳಿಸಿದರು.

ಆಹಾರದ ಕಿಟ್ ವಿತರಣೆ: ಬಡ ಕುಟುಂಬಗಳನ್ನು ಗುರುತಿಸಿ 10 ಸಾವಿರ ಆಹಾರದ ಕಿಟ್ ನೀಡಲಾಗಿದೆ. ನಿಜವಾದ ಬಡವರಿಗೆ ತಲುಪಿಸುವ ಕೆಲಸ ಮಾಡುತ್ತೇನೆ ಎಂದರು.

ತಾಲೂಕಿನಲ್ಲಿ ಇದುವರೆಗೆ ಯಾವುದೇ ಪ್ರಕರಣಗಳು ಕಂಡುಬಂದಿಲ್ಲ, ಪಟ್ಟಣ ಮತ್ತು ಗ್ರಾಮಗಳಿಗೆ ಹೊಸದಾಗಿ ಬರುವವರನ್ನು ಗುರುತಿಸಿ ಪರೀಕ್ಷೇಗೆ ಒಳಪಡಿಸಲಾಗುತ್ತದೆ ಎಂದರು.

ಈ ವೇಳೆ ಪುರಸಭೆ ಸದಸ್ಯರಾದ ಕಮಲಾ ಹರೀಶ್, ಯಶೋದಬುಳ್ಳಿ, ಸವಿತಾ ರಾಘವೇಂದ್ರ, ನಂಜುಂಡಿ, ಸೇರಿ ಎಲ್ಲ ಸದಸ್ಯರು ಹಾಜರಿದ್ದರು. ಮುಖ್ಯಾಧಿಕಾರಿ ಬಸವರಾಜ್ ಐಗೂರು, ಆರೋಗ್ಯ ಅಧಿಕಾರಿ ಶಿವರುದ್ರಪ್ಪ ಇದ್ದರು.