ಜಿಲ್ಲೆ

ಕಬ್ಬು ಬೆಳೆಗಾರರ ಸಂಘದಿಂದ ಪ್ರತಿಭಟನೆ

ಲಲಾಟಾಕ್ಷ ಎಸ್

ತಿ.ನರಸೀಪುರ: ಬೆಳೆ ನಷ್ಟಕ್ಕೆ ವೈಜ್ಞಾನಿಕ ಪರಿಹಾರ ನೀಡುವುದರ ಜೊತೆಗೆ ಬಾಳೆ ಬೆಳೆಗಾರರಿಗೆ ವಿಶೇಷ ಪ್ಯಾಕೇಜ್ ಘೋಷಣೆ ಮಾಡುವಂತೆ ಒತ್ತಾಯಿಸಿ ಕರ್ನಾಟಕ ರಾಜ್ಯ ಕಬ್ಬು ಬೆಳೆಗಾರರ ಸಂಘದ ಪದಾಧಿಕಾರಿಗಳು, ಮುಖಂಡರು ತಿರುಮಕೂಡಲಿನ ಕಾವೇರಿ-ಕಪಿಲಾ ಸೇತುವೆಯ ಬಳಿ ರಸ್ತೆ ತಡೆ ನಡೆಸಿ ಪ್ರತಿಭಟನೆ ನಡೆಸಿದರು.


ತಿ.ನರಸೀಪುರ-ಮೈಸೂರು ರಸ್ತೆಯ ಬಿಂದಿಗೆ ಫ್ಯಾಕ್ಟರಿ ಬಳಿ ಜಮಾಯಿಸಿದ ಪದಾಧಿಕಾರಿಗಳು ಬೆಳೆಗಳಿಗೆ ವೈಜ್ಞಾನಿಕ ಪರಿಹಾರ ನೀಡದ ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಸುಮಾರು ಅರ್ಧ ಗಂಟೆ ಕಾಲ ರಾಷ್ಟ್ರೀಯ ಹೆದ್ದಾರಿ ಬಂದ್ ಮಾಡಿದ್ದರಿಂದ ವಾಹನ ಸವಾರರು ಪರದಾಡುವಂತಾಯಿತು.


ಸಂಘದ ಅಧ್ಯಕ್ಷ ಹಳ್ಳಿಕೆರೆಹುಂಡಿ ಭಾಗ್ಯರಾಜ್ ಮಾತನಾಡಿ, ಮೈಸೂರು -ಚಾಮರಾಜನಗರ ಜಿಲ್ಲಾ ವ್ಯಾಪ್ತಿಯಲ್ಲಿ ಸುಮಾರು 2 ಸಾವಿರ ಎಕರೆಗಿಂತ ಹೆಚ್ಚು ಪ್ರದೇಶದಲ್ಲಿ ಬಾಳೆ ಬೆಳೆ ನಾಶವಾಗಿದೆ. ಚುನಾವಣಾ ನೀತಿ ಸಂಹಿತೆ ನೆಪದಲ್ಲಿ ಬೆಳೆ ನಷ್ಟ ಅಂದಾಜು ಮಾಡುವಲ್ಲಿ ಅಧಿಕಾರಿಗಳು ವಿಫಲರಾಗಿದ್ದಾರೆ. ಜಿಲ್ಲೆಯ ಚುನಾಯಿತ ಪ್ರತಿನಿಧಿಗಳು, ಜಿಲ್ಲಾಡಳಿತ ನೊಂದ ರೈತರಿಗೆ ವಿಶೇಷ ಪ್ಯಾಕೇಜ್ ಘೋಷಿಸಲು ಸರ್ಕಾರದ ಹಂತದಲ್ಲಿ ವಿಫಲವಾಗಿದೆ. ಮುಂದಿನ ದಿನಗಳಲ್ಲಿ ಸರ್ಕಾರಕ್ಕೆ ಜಿಲ್ಲಾಡಳಿತ ಸಮರ್ಪಕ ವರದಿ ತಯಾರಿಸಿ ವಿಶೇಷ ಪ್ಯಾಕೇಜ್ ನೀಡುವಂತೆ ವರದಿ ಸಲ್ಲಿಸಬೇಕು. ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಈ ಜವಾಬ್ದಾರಿಯನ್ನು ತೆಗೆದುಕೊಂಡು ಸಂಬಂಧಪಟ್ಟ ಸಚಿವರು, ಮುಖ್ಯಮಂತ್ರಿಗಳ ಬಳಿ ಪ್ರಸ್ತಾಪಿಸಿ ರೈತರಿಗೆ ನ್ಯಾಯ ಕೊಡಿಸುವಲ್ಲಿ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.


ಪ್ರತಿ ಎಕರೆಗೆ 1 ಲಕ್ಷ ರೂ. ಪರಿಹಾರ ನೀಡಬೇಕು. ಬರ ಪರಿಹಾರ ವಿತರಣೆಯಲ್ಲಿ ಷರತ್ತುಗಳನ್ನು ಹಾಕಿ ರೈತರಿಗೆ ತಾರತಮ್ಯ ಮಾಡಲಾಗುತ್ತಿದೆ. ಹೊಸ ಕೃಷಿ ಪಂಪ್‌ಸೆಟ್‌ಗಳಿಗೆ ಅಕ್ರಮ-ಸಕ್ರಮ ಯೋಜನೆಯನ್ನು ಮರು ಜಾರಿ ಮಾಡಬೇಕು. ಹಾಲು ಉತ್ಪಾದಕರಿಗೆ ಪ್ರತಿ ಲೀಟರ್‌ಗೆ 10 ರೂ. ಹೆಚ್ಚುವರಿ ಪ್ರೋತ್ಸಾಹ ಧನ ನೀಡಬೇಕು. ಕೃಷಿ ಸಂಬಂಧಿತ ಸಾಲಕ್ಕೆ ಸಿಬಿಲ್ ಸ್ಕೋರ್ ಪರಿಗಣನೆಯನ್ನು ಕೈಬಿಡಬೇಕು. ಕಬ್ಬು ಬೆಳೆಗಾರರಿಗೆ ಬರಬೇಕಾದ 950 ಕೋಟಿ ರೂ.ಲಾಭಾಂಶವನ್ನು ರೈತರಿಗೆ ಹಂಚಿಕೆ ಮಾಡಲು ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.


ರಾಜ್ಯ ಉಪಾಧ್ಯಕ್ಷ ಕೆರೆಹುಂಡಿ ರಾಜಣ್ಣ, ಚಾಮರಾಜನಗರ ಜಿಲ್ಲಾಧ್ಯಕ್ಷ ನಾಗರಾಜು, ರಾಜ್ಯ ಪ್ರಧಾನ ಕಾರ್ಯದರ್ಶಿ ಮಲಿಯೂರು ಹರ್ಷ, ದೇವಿರಮ್ಮನಹಳ್ಳಿ ಮಹೇಶ್, ತಾಲೂಕು ಅಧ್ಯಕ್ಷ ಸುಜ್ಜಲೂರು ಜಯಸ್ವಾಮಿ, ಜಿಲ್ಲಾ ಸಂಘಟನಾ ಕಾರ್ಯದರ್ಶಿ ಬನಹಳ್ಳಿ ಹುಂಡಿ ರಾಜೇಂದ್ರ, ಮೂಗುರು ಶರತ್, ಶಂಭುದೇವನಪುರ ನಂಜುಂಡಸ್ವಾಮಿ, ಹಲವಾರ ಮಹಾದೇವಪ್ಪ, ಉತ್ತಂಬಳ್ಳಿ ಗಣೇಶ್, ಮುದ್ದಳ್ಳಿ ಚಿಕ್ಕಸ್ವಾಮಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜನ್ನೂರು ಶಾಂತರಾಜು, ಹಂಬಳೆ ಮಹದೇವಸ್ವಾಮಿ, ಕಸುವಿನಹಳ್ಳಿ ಮಂಜೇಶ್, ದೇವನೂರು ನಾಗೇಂದ್ರ, ಕುಂತೂರು ರವಿ, ಮಳೆಯೂರು ಮಹೇಂದ್ರ, ಬಸವರಾಜಪ್ಪ, ಪ್ರವೀಣ, ನಂಜುಂಡ ನಾಯಕ, ಸೋಮೇಶ್, ಸತೀಶ್, ಉಡಿಗಾಲ ಮಂಜುನಾಥ್, ಗುರು ಮಹದೇವಸ್ವಾಮಿ, ಮಹೇಶ್ ಕುಮಾರ್, ಶಿವಕುಮಾರ್, ಕೆಳಲಿಪುರ ಶ್ರೀಕಂಠ, ಗುರುವಿನಪುರ ಪ್ರಸಾದ್, ಮೋಹನ್, ಸ್ವಾಮಿ, ಚಂದ್ರು, ಸಂಪತ್ತು, ವಲಗೆರೆ ಗಣೇಶ್ ಇದ್ದರು.