ಅರಕಲಗೂಡಿನಲ್ಲಿ ಸ್ವೀಪ್ ಸಮಿತಿ ವತಿಯಿಂದ ಬುಧವಾರ ಸಂಜೆ ಮೊಂಬತ್ತಿ ಬೆಳಗಿಸಿ ಮತದಾನ ಕುರಿತು ಜಾಗೃತಿ ಜಾಥಾ ನಡೆಸಲಾಯಿತು. ಬಸವರೆಡ್ಡಪ್ಪ ರೋಣದ, ಪ್ರಕಾಶ್, ಬಸವರಾಜ ಟಾಕಪ್ಪ ಇತರರಿದ್ದರು. 
ಜಿಲ್ಲೆ

ಮೊಂಬತ್ತಿ ಬೆಳಗಿಸಿ ಮತದಾನ ಜಾಗೃತಿ ಜಾಥಾ

ಶಿವಶಂಕರ್ ಎಂ. ಹೆಬ್ಬಳ್ಳ

ಅರಕಲಗೂಡು: ಪಟ್ಟಣದಲ್ಲಿ ಸ್ವೀಪ್ ಸಮಿತಿ ವತಿಯಿಂದ ಬುಧವಾರ ಸಂಜೆ ಮೊಂಬತ್ತಿ ಬೆಳಗಿಸಿ ಜಾಥಾ ನಡೆಸುವ ಮೂಲಕ ಮತದಾನದ ಕುರಿತು ಸಾರ್ವಜನಿಕರಲ್ಲಿ ಅರಿವು ಮೂಡಿಸಲಾಯಿತು.

ವಿವಿಧ ಇಲಾಖೆ ಅಧಿಕಾರಿಗಳು, ಅಂಗನವಾಡಿ ಕಾರ್ಯಕರ್ತೆಯರು, ಸಹಾಯಕಿಯರು ತಾಲೂಕು ಪಂಚಾಯಿತಿ ಕಚೇರಿ ಆವರಣದಿಂದ ಮೊಂಬತ್ತಿಗಳನ್ನು ಹಿಡಿದು ಮತದಾನದ ಜಾಗೃತಿ ಘೋಷಣೆಗಳನ್ನು ಕೂಗುತ್ತಾ ಮೆರವಣಿಗೆಯಲ್ಲಿ ಸಾಗಿದರು. ಅನಕೃ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ ಗಮನ ಸೆಳೆಯಲಾಯಿತು.

ಸ್ವೀಪ್ ಸಮಿತಿ ಅಧ್ಯಕ್ಷ ಹಾಗೂ ತಾಪಂ ಇಒ ಪ್ರಕಾಶ್ ಮಾತನಾಡಿ, ಮತದಾನದ ಪ್ರಮಾಣ ಹೆಚ್ಚಿಸುವ ನಿಟ್ಟಿನಲ್ಲಿ ಸ್ವೀಪ್ ಸಮಿತಿ ಹಲವು ರೀತಿಯ ಜಾಗೃತಿ ಕಾರ್ಯಕ್ರಮಗಳನ್ನು ನಡೆಸುತ್ತಿದೆ. ಶಾಲೆಗಳಲ್ಲಿ ಮಕ್ಕಳಿಂದ ತಂದೆ, ತಾಯಿಗಳಿಗೆ ಪತ್ರ ಬರೆಸುವುದು, ಸಾರ್ವಜನಿಕರಿಂದ ಸಹಿ ಸಂಗ್ರಹ ಅಭಿಯಾನ, ಕಸ ವಿಲೇವಾರಿ ವಾಹನಗಳಲ್ಲಿ ಮತದಾನ ಜಾಗೃತಿ ಕುರಿತು ಪ್ರಚಾರ ನಡೆಸುವುದು ಸೇರಿದಂತೆ ಹಲವು ರೀತಿಯಲ್ಲಿ ಜನರಿಗೆ ಅರಿವು ಮೂಡಿಸಲಾಗುತ್ತಿದೆ. ಜನರು ಯಾವುದೇ ಆಸೆ, ಆಮಿಷಗಳಿಗೆ ಬಲಿಯಾಗದೆ ಮತಗಟ್ಟೆಗಳಿಗೆ ತೆರಳಿ ನಿರ್ಭೀತಿಯಿಂದ ಮತಚಲಾವಣೆ ಮಾಡುವ ಮೂಲಕ ಅತ್ಯಂತ ಹೆಚ್ಚಿನ ಮತದಾನದವನ್ನು ದಾಖಲಿಸುವಂತೆ ಮನವಿ ಮಾಡಿದರು.

ತಹಸೀಲ್ದಾರ್ ಬಸವರೆಡ್ಡಪ್ಪ ರೋಣದ ಮಾತನಾಡಿ, ಚುನಾವಣೆ ಪ್ರಜಾಪ್ರಭುತ್ವದ ಹಬ್ಬವಿದ್ದಂತೆ, ಇದರಲ್ಲಿ ಪ್ರತಿಯೊಬ್ಬರೂ ಪಾಲ್ಗೊಂಡು ಮತದಾನ ಮಾಡುವ ಮೂಲಕ ನಿಮ್ಮ ಪ್ರತಿನಿಧಿಯನ್ನು ನಿಷ್ಪಕ್ಷಪಾತವಾಗಿ ಆಯ್ಕೆ ಮಾಡಿಕೊಳ್ಳಬೇಕು, ಮತದಾನ ಜಾಗೃತಿಗಾಗಿ ಹಲವು ರೀತಿಯ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿರುವುದಾಗಿ ಹೇಳಿದರು. ಪ್ರಮುಖ ಬೀದಿಗಳಲ್ಲಿ ಸಂಚರಿಸಿದ ಜಾಥಾವನ್ನು ಗ್ರಾಮ ದೇವತೆ ದೊಡ್ಡಮ್ಮ ದೇವಿ ದೇವಾಲಯದ ಬಳಿ ಮುಕ್ತಾಯಗೊಳಿಸಲಾಯಿತು.