ಮೈಸೂರು: ಕಾಶ್ಮೀರದ ಪಹಲ್ಗಾಮ್ನಲ್ಲಿ ಪ್ರವಾಸಿಗರ ಮೇಲೆ ಭಯೋತ್ಪಾದಕರು ದಾಳಿ ಮಾಡಿರುವುದನ್ನು ಖಂಡಿಸಿ ನಗರದಲ್ಲಿ ಭಾನುವಾರ ವಿವಿಧ ಸಂಘಟನೆಗಳಿಂದ ಮೇಣದ ಬತ್ತಿ ಹಚ್ಚಿ ಮೌನ ಪ್ರತಿಭಟನೆ ನಡೆಸಲಾಯಿತು.
ಗೋಕುಲಂ ವಿದ್ಯಾವರ್ಧಕ ಇಂಜಿನಿಯರಿಂಗ್ ಕಾಲೇಜು ಆವರಣದಲ್ಲಿ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್‌ನಿಂದ ಕಾಶ್ಮೀರದಲ್ಲಿ ನಡೆದ ದಾಳಿಯನ್ನು ಖಂಡಿಸಿ ಮೇಣದ ಬತ್ತಿ ಹಿಡಿದು ಮೃತರ ಆತ್ಮಕ್ಕೆ ಶಾಂತಿಕೋರಲಾಯಿತು. ಈ ಮೂಲಕ ಘಟನೆಯನ್ನು ಖಂಡಿಸಲಾಯಿತು.
ಸ್ಕೌಟ್ಸ್ಮತ್ತು ಗೈಡ್ಸ್‌ನ ರಾಜ್ಯ ಮುಖ್ಯ ಆಯುಕ್ತ ಪಿ.ಜಿ.ಆರ್. ಸಿಂಧ್ಯಾ, ವಿದ್ಯಾವರ್ಧಕ ವಿದ್ಯಾಸಂಸ್ಥೆ ಕಾರ್ಯದರ್ಶಿ ಪಿ.ವಿಶ್ವನಾಥ್, ಸ್ಕೌಟ್ಸ್ ಮತ್ತು ಗೈಡ್ಸ್‌ನ ಜಿಲ್ಲಾ ಕಾರ್ಯದರ್ಶಿ ಅಬ್ದುಲ್ ಜಮೀಲ್ ಇತರರು ಇದ್ದರು.
ಭಯೋತ್ಪಾದಕರು ನಡೆಸಿದ ಪ್ರವಾಸಿಗರ ಹತ್ಯೆಯನ್ನು ಖಂಡಿಸಿ ಮೇಣದಬತ್ತಿ ಹಿಡಿದು ಮೃತರ ಆತ್ಮಕ್ಕೆ ಶಾಂತಿ ಕೋರಿ ಹಾಗೂ ಹತ್ಯೆ ಖಂಡಿಸಿ ಪ್ರತಿಭಟನೆ ವಿವಿಧ ರಸ್ತೆಗಳಲ್ಲಿ ಮೆರವಣಿಗೆ ನಡೆಸಲಾಯಿತು.
ಬಲಿಜ ಸಮುದಾಯದಿಂದ ಪ್ರತಿಭಟನೆ: ನಗರದ ನ್ಯಾಯಾಯದ ಮುಂಭಾಗ ಇರುವ ಗಾಂಧಿ ಪುತ್ಥಳಿ ಬಳಿ ಮುಖಂಡ ಮಂಜುನಾಥ್ ನೇತೃತ್ವದಲ್ಲಿ ಬಲಿಜ ಸಮುದಾಯದಿಂದ ಕಾಶ್ಮೀರದ ಪಹಲ್ಗಾಮ್ನಲ್ಲಿ ಪ್ರವಾಸಿಗರ ಮೇಲೆ ನಡೆದ ದಾಳಿ ಮಾಡಿರುವುದನ್ನು ಖಂಡಿಸಿ ಮೋಂಬತ್ತಿ ಬೆಳಗಿಸಿ ಮೌನ ಪ್ರತಿಭಟನೆ ನಡೆಸಲಾಯಿತು.
ಹಿಂದು ಜಾಗರಣಾ ವೇದಿಕೆ: ಕಾಶ್ಮೀರದಲ್ಲಿ ನಡೆದ ಭಯೋತ್ಪಾದಕ ದಾಳಿ ಖಂಡಿಸಿ ಹಿಂದು ಜಾಗರಣಾ ವೇದಿಕೆಯಿಂದ ವೇದಿಕೆ ಜಿಲ್ಲಾದ್ಯಕ್ಷ ಲೋಹಿತ್‌ರಾಜೇ ಅರಸ್ ನೇತೃತ್ವದಲ್ಲಿ 70 ರಿಂದ 80 ಜನ ಮೇಣದಬತ್ತಿ ಹಿಡಿದು ಮೃತರ ಆತ್ಮಕ್ಕೆ ಶಾಂತಿ ಕೋರಿದ್ದಲ್ಲದೆ ಹತ್ಯೆ ಖಂಡಿಸಿದರು.