ಲಿಂಗಸುಗೂರು: ವಿಧಾನಸಭಾ ಚುನಾವಣೆ ದಿನಾಂಕ ಪ್ರಕಟವಾಗಿದ್ದು, ಪಕ್ಷದ ಅಭ್ಯರ್ಥಿ ಅಂತಿಮಗೊಳಿಸದಿರುವುದರಿಂದ ಕ್ಷೇತ್ರದ ಕಾರ್ಯಕರ್ತರಲ್ಲಿ ಗೊಂದಲ ಸೃಷ್ಟಿಯಾಗಿದೆ. ಪಕ್ಷದ ಹೈಕಮಾಂಡ್ ಶೀಘ್ರ ಅಭ್ಯರ್ಥಿ ಹೆಸರು ಪ್ರಕಟಿಸಿ ಗೊಂದಲ ನಿವಾರಿಸಬೇಕೆಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಭೂಪನಗೌಡ ಪಾಟೀಲ್ ಒತ್ತಾಯಿಸಿದರು.
ಪಟ್ಟಣದ ಪತ್ರಿಕಾ ಭವನದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಕ್ಷೇತ್ರದಲ್ಲಿ 25 ವರ್ಷಗಳಿಂದ ಕಾಂಗ್ರೆಸ್‌ಗೆ ಅಧಿಕಾರ ಸಿಕ್ಕಿರಲಿಲ್ಲ. 2018 ರಲ್ಲಿ ಡಿ.ಎಸ್.ಹೂಲಗೇರಿ ಶಾಸಕರಾಗಿ ಆಯ್ಕೆಯಾಗಿ ಪಕ್ಷಕ್ಕೆ ಬಲ ತುಂಬಿದರು. ಡಿ.ಎಸ್.ಹೂಲಗೇರಿ ಅವರಿಗೆ ಟಿಕೆಟ್ ಕೈ ತಪ್ಪಿದರೆ ಪಕ್ಷದ ಪರವಾಗಿ ಕೆಲಸ ಮಾಡುತ್ತೇವೆ. ಆದರೆ, ಗೊಂದಲ ನಿವಾರಿಸಬೇಕೆಂದು ಹೇಳಿದರು. ಮುದಗಲ್ ಬ್ಲಾಕ್ ಅಧ್ಯಕ್ಷ ದಾವೂದ್, ಪ್ರಮುಖರಾದ ಸೈಯದ್ ವಾಹೀದ್ ಖಾದ್ರಿ, ಅಸ್ಲಾಂ ಪಾಷಾ, ಕುಪ್ಪಣ್ಣ ಕವಿತಾಳ, ಖಾಜಾ ಅಜ್ಮೀರ್ ಇದ್ದರು.