ಮೈಸೂರು: ಚನ್ನಪಟ್ಟಣ ಉಪಚುನಾವಣೆಗೆ ಬಿಜೆಪಿ-ಜೆಡಿಎಸ್ ಮೈತ್ರಿ ಅಭ್ಯರ್ಥಿ ಆಯ್ಕೆ ಕಸರತ್ತಿನ ಬಗ್ಗೆ ಕಾಂಗ್ರೆಸ್ ಶಾಸಕ ತನ್ವೀರ್ ಸೇಠ್ ವ್ಯಂಗ್ಯವಾಡಿದ್ದಾರೆ.
ಒಬ್ಬರ ಕೈಯಲ್ಲಿ ಹಾರೆ, ಮತ್ತೊಬ್ಬರ ಕೈಯಲ್ಲಿ ಗುದ್ದಲಿ ಕೊಟ್ಟಿದ್ದಾರೆ. ಯಾರಿಗೆ ಟಿಕೆಟ್ ಸಿಕ್ಕರೂ ಒಬ್ಬರು ತೋಡುತ್ತಾರೆ, ಮತ್ತೊಬ್ಬರು ಎಳೆಯುತ್ತಾರೆ. ಚನ್ನಪಟ್ಟಣದಲ್ಲಿ ನಮ್ಮ ಗೆಲುವು ನಿಶ್ಚಿತ ಎಂದು ನಗರದಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಹೇಳಿದರು.
ರಾಷ್ಟ್ರ ರಾಜಕಾರಣವೆ ಬೇರೆ, ಚನ್ನಪಟ್ಟಣದ ಪರಿಸ್ಥಿತಿಯೇ ಬೇರೆ. ಉಪ ಚುನಾವಣೆಯಲ್ಲಿ ಚನ್ನಪಟ್ಟಣ ಬಹಳ ವಿಶೇಷವಾಗಿದೆ. ಶಿಗ್ಗಾವಿ, ಸಂಡೂರು ಒಂದು ರೀತಿಯಾದರೆ, ಚನ್ನಪಟ್ಟಣ ಅತ್ಯಂತ ಕುತೂಹಲ ಮೂಡಿಸಿದೆ. ಈಗಾಗಲೇ ಅಭ್ಯರ್ಥಿ ಆಕಾಂಕ್ಷಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಮೈತ್ರಿ ಅಭ್ಯರ್ಥಿ ಯಾರು? ಕಾಂಗ್ರೆಸ್‌ನಿಂದ ಯಾರು? ಎಂಬುದು ಪ್ರಶ್ನೆ. ಡಿಸಿಎಂ ನಾನೇ ಅಭ್ಯರ್ಥಿ ಅಂತ ಹೇಳಿದ್ದಾರೆ. ಆದಾಗ್ಯೂ ಪರಿಸ್ಥಿತಿಗೆ ಅನುಗುಣವಾಗಿ ಕಾಂಗ್ರೆಸ್‌ನಿಂದ ಅಭ್ಯರ್ಥಿ ಹಾಕಲಾಗುವುದು ಎಂದರು.
ನಾಲ್ಕೈದು ದಿನದಲ್ಲಿ ಚನ್ನಪಟ್ಟಣ ಕಾಂಗ್ರೆಸ್ ಅಭ್ಯರ್ಥಿ ಘೋಷಣೆಯಾಗಲಿದೆ. ಡಿ.ಕೆ.ಸುರೇಶ್ ರಾಜಕೀಯವಾಗಿ ಮುಂದುವರಿಯಬೇಕಾದ ಅನಿವಾರ್ಯತೆ ಪಕ್ಷಕ್ಕೆ ಇದೆ. ಸಾಮಾಜಿಕ ನ್ಯಾಯದ ವಿಚಾರದಲ್ಲಿ ಶಿಗ್ಗಾವಿಯಲ್ಲಿ ಮುಸ್ಲಿಂ ಅಭ್ಯರ್ಥಿ ನಿಲ್ಲಿಸಿ ಅಂತ ನಾನು ಕೂಡ ಮನವಿ ಮಾಡಿದ್ದೇನೆ ಎಂದು ಹೇಳಿದರು.
ಬಿಜೆಪಿಯವರು ರಾಜಕಾರಣವನ್ನು ನೀಚ ಮಟ್ಟಕ್ಕೆ ತಂದು ನಿಲ್ಲಿಸಿದ್ದಾರೆ. ಸರ್ಕಾರ ಕಾನೂನುಬದ್ಧವಾಗಿ ನಡೆದುಕೊಂಡಿದ್ದು, ಬಿಜೆಪಿ ಅಧಿಕಾರದಲ್ಲಿದ್ದಾಗ ಒಂದು ಸಮುದಾಯವನ್ನು ಗುರಿಯಾಗಿ ಇಟ್ಟುಕೊಂಡು ಅಮಾಯಕರ ವಿರುದ್ಧ ಕೇಸ್ ಹಾಕಿತ್ತು.
ಕೇವಲ ಒಂದು ಸಮುದಾಯದ ಹೆಸರು ಬಂದಾಗ ಬಿಜೆಪಿ ರಾಜಕೀಯ ಬೇಳೆ ಬೇಯಿಸಿಕೊಳ್ಳೋದು ತಪ್ಪು. ಹುಬ್ಬಳ್ಳಿ ಪ್ರಕರಣ ಮಾತ್ರವಲ್ಲ, ಇತರ ಪ್ರಕರಣಗಳ ಬಗ್ಗೆಯೂ ಮಾತಾಡಬೇಕಲ್ಲವೇ? ಕಾನೂನಾತ್ಮಕವಾಗಿ ನಾವು ನಡೆದುಕೊಂಡಿದ್ದು, ಆ ಕೇಸ್ ಈಗ ವಾಪಸ್ ಪಡೆದಿದ್ದೇವೆ. ಇದರಲ್ಲಿ ತಪ್ಪೇನಿದೆ ಎಂದು ಪ್ರಶ್ನಿಸಿದರು.
ಮುಡಾ ಅಧ್ಯಕ್ಷ ಸ್ಥಾನಕ್ಕೆ ಕೆ.ಮರಿಗೌಡ ಅವರು ಅನಾರೋಗ್ಯದ ಕಾರಣಕ್ಕೆ ರಾಜೀನಾಮೆ ಕೊಟ್ಟಿದ್ದೇನೆ ಎಂದಿದ್ದಾರೆ. ರಾಜೀನಾಮೆಯಿಂದ ತನಿಖೆಗೆ ಒಳ್ಳೆಯದೆ. ಮರಿಗೌಡ ಸಿಎಂ ಆಪ್ತರು. ಪಾರದರ್ಶಕ ತನಿಖೆಗೆ ಸಹಕಾರಿ ಆಗಲಿ ಎಂದು ರಾಜೀನಾಮೆ ಕೊಟ್ಟಿದ್ದಾರೆ. ಮುಡಾದಿಂದ ಸಿಎಂಗೆ ಅಂಟಿರುವ ಕಳಂಕ ದೂರವಾಗುತ್ತದೆ ಎಂದು ಶಾಸಕ ತನ್ವೀರ್ ಸೇಠ್ ಹೇಳಿದರು.
2021ರಲ್ಲಿ ಮುಡಾ ಸಭೆಗೆ ವಿರುದ್ಧವಾಗಿ 50:50 ಅನುಪಾತದಲ್ಲಿ ನಿವೇಶನ ಹಂಚಿಕೆ ತೀರ್ಮಾನ ಆಗಿದೆ. ಒಂದೇ ಸಭೆಯಲ್ಲಿ 50:50 ಅನುಪಾತದಡಿ 175 ಸೈಟ್ ಕೊಟ್ಟಿದ್ದಾರೆ. ಅದರಲ್ಲಿ ಸಿದ್ದರಾಮಯ್ಯ ಅವರ 14 ಸೈಟ್ ವಾಪಸ್ ಬಂದಿದೆ. ಉಳಿದ 161 ಸೈಟ್ ವಾಪಸ್ ಪಡೆಯಬೇಕು. ಎಲ್ಲ 175 ಸೈಟ್ ರದ್ದಾಗಬೇಕು. ಮುಡಾ ಸಭೆಯಲ್ಲಿ 50:50 ಅನುಪಾತದಲ್ಲಿ ಒಂದು ಸೈಟ್‌ಗೂ ಅನುಮೋದನೆ ಕೊಟ್ಟಿಲ್ಲ. ಎಲ್ಲವನ್ನು ರದ್ದು ಮಾಡಬೇಕು ಎಂದು ಹೇಳಿದರು.