ಜಿಲ್ಲೆ

ಜಿಲ್ಲೆಯಲ್ಲಿ 140 ಕ್ಯಾನ್ಸರ್ ಪೀಡಿತರು

ಶಿವರಾಜ.ಎಂ

 ಶಿವರಾಜ ಎಂ. ಬೆಂಗಳೂರು ಗ್ರಾಮಾಂತರ

ಪ್ರಸಕ್ತ ಸಾಲಿನಲ್ಲಿ ಜಿಲ್ಲಾ ಆರೋಗ್ಯ ಇಲಾಖೆಯ ತಪಾಸಣೆಯಲ್ಲಿ 140 ಕ್ಯಾನ್ಸರ್ ಪ್ರಕರಣಗಳು ಪತ್ತೆಯಾಗಿದ್ದು ಸೂಕ್ತ ಚಿಕಿತ್ಸೆಗಾಗಿ ವಿವಿಧ ಕ್ಯಾನ್ಸರ್ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ವ್ಯವಸ್ಥೆ ಮಾಡಲಾಗಿದೆ.

ಕ್ಯಾನ್ಸರ್‌ನಲ್ಲಿ ಹಲವು ಬಗೆಯ ಕ್ಯಾನ್ಸರ್‌ಗಳಿದ್ದು ಪ್ರಮುಖವಾಗಿ ಬಾಯಿ ಮತ್ತು ಗಂಟಲು ಕ್ಯಾನ್ಸರ್, ಸ್ತನ ಕ್ಯಾನ್ಸರ್ ಹಾಗೂ ಗರ್ಭಕಂಠ ಕ್ಯಾನ್ಸರ್ ರೋಗಿಗಳನ್ನು ಸ್ಕ್ರೀನಿಂಗ್ ಮಾಡಲಾಗಿದೆ.

ಜಿಲ್ಲೆಯಲ್ಲಿನ ವಿವಿಧ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯಲ್ಲಿ ತಪಾಸಣೆ ವೇಳೆ ಕ್ಯಾನ್ಸರ್ ಲಕ್ಷಣಗಳು ಕಂಡುಬಂದ ಹಿನ್ನೆಲೆಯಲ್ಲಿ ಹೆಚ್ಚಿನ ತಪಾಸಣೆಗೆ ಕ್ಯಾನ್ಸರ್ ಆಸ್ಪತ್ರೆಗಳಿಗೆ ರವಾನಿಸಲಾಗಿದ್ದು ಸಾವಿರಾರು ಪ್ರಕರಣಗಳಲ್ಲಿ 140 ಪ್ರಕರಣಗಳಲ್ಲಿ ಕ್ಯಾನ್ಸರ್ ದೃಢಪಟ್ಟಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

21 ಪುರುಷರಲ್ಲಿ ಬಾಯಿ ಮತ್ತು ಗಂಟಲು ಕ್ಯಾನ್ಸರ್ ಪತ್ತೆಯಾಗಿದೆ, ಅದೇ ರೀತಿ 12 ಮಹಿಳೆಯಲ್ಲಿ ದೃಢಪಟ್ಟಿದೆ. ಇನ್ನು 15 ಮಂದಿಯಲ್ಲಿ ಸ್ತನ ಕ್ಯಾನ್ಸರ್ ಹಾಗೂ 92 ಮಂದಿಯಲ್ಲಿ ಗರ್ಭಕಂಠದ ಕ್ಯಾನ್ಸರ್ ದೃಢಪಟ್ಟಿದ್ದು ರೋಗಿಗಳಿಗೆ ಚಿಕಿತ್ಸಾ ವ್ಯವಸ್ಥೆ ಕಲ್ಪಿಸಲಾಗಿದೆ. ಮಾರಣಾಂತಿಕವಾದರೂ ಅರಂಭದಲ್ಲೇ ಚಿಕಿತ್ಸೆ ದೊರೆತರೆ ಪ್ರಾಣಾಪಾಯದಿಂದ ಪಾರಾಗಬಹುದಾದ ಕ್ಯಾನ್ಸರ್ ರೋಗ ನಿಯಂತ್ರಣಕ್ಕೆ ಜಿಲ್ಲಾ ಆರೋಗ್ಯ ಇಲಾಖೆ ಹಲವು ಕಾರ್ಯಕ್ರಮಗಳನ್ನು ರೂಪಿಸಿದೆ. ವಿಶ್ವ ಕ್ಯಾನ್ಸರ್ ದಿನಾಚರಣೆ ಅಂಗವಾಗಿ ಪ್ರತಿ ವರ್ಷ ಉಚಿತ ತಪಾಸಣೆ, ಜಾಗೃತಿ ಕಾರ್ಯಕ್ರಮಗಳನ್ನು ನಡೆಸಿಕೊಂಡು ಬರುತ್ತಿದೆ. ಬದಲಾದ ಜೀವನ ಶೈಲಿ, ಆಹಾರ ಪದ್ಧತಿ ಮತ್ತಿತರ ಕಾರಣಗಳಿಂದ ವರ್ಷದಿಂದ ವರ್ಷಕ್ಕೆ ಕ್ಯಾನ್ಸರ್ ಪೀಡಿತರ ಸಂಖ್ಯೆ ಹೆಚ್ಚುತ್ತಿದೆ. ಆರಂಭದಲ್ಲೇ ರೋಗ ಲಕ್ಷಣ ಗುರುತಿಸಿ ಚಿಕಿತ್ಸೆ ದೊರಕಿಸಿಕೊಡುವ ನಿಟ್ಟಿನಲ್ಲಿ ಆರೋಗ್ಯ ಇಲಾಖೆ ಶ್ರಮಿಸುತ್ತಿದೆ.

ವಿವಿಧ ವಯೋಮಾನದವರಲ್ಲಿ ಪತ್ತೆ: ಇತ್ತೀಚಿನ ದಿನಗಳಲ್ಲಿ ನಡೆಸಿದ ಆರೋಗ್ಯ ತಪಾಸಣೆ ವೇಳೆ ವಿವಿಧ ವಯೋಮಾನದವರಲ್ಲಿ ಕ್ಯಾನ್ಸರ್ ದೃಡಪಟ್ಟಿದೆ. ಪ್ರಮುಖವಾಗಿ 41 ರಿಂದ 50 ವರ್ಷ, 50ರಿಂದ 60 ವರ್ಷದವರಲ್ಲಿ ಹಾಗೂ 60 ವರ್ಷಕ್ಕೂ ಮೇಲ್ಪಟ್ಟವರಲ್ಲಿ ಕ್ಯಾನ್ಸರ್ ಪತ್ತೆಯಾಗಿದೆ ಇದರಲ್ಲಿ 50 ರಿಂದ 60 ವರ್ಷ ವಯೋಮಾನದವರಲ್ಲಿ ಹೆಚ್ಚು ರೋಗ ಲಕ್ಷಣ ಪತ್ತೆಯಾಗಿದೆ. ಜಿಲ್ಲೆಯ ನಾಲ್ಕು ತಾಲೂಕುಗಳ ಪೈಕಿ ದೊಡ್ಡಬಳ್ಳಾಪುರದಲ್ಲಿ ಹೆಚ್ಚು ಪ್ರಕರಣ ಪತ್ತೆಯಾಗಿದ್ದು 79 ಮಂದಿಯಲ್ಲಿ ರೋಗ ದೃಢಪಟ್ಟಿದೆ. ನಂತರದಲ್ಲಿ ನೆಲಮಂಗದಲ್ಲಿ 31 ಪ್ರಕರಣ, ದೇವನಹಳ್ಳಿಯಲ್ಲಿ 18 ಹಾಗೂ ಹೊಸಕೋಟೆಯಲ್ಲಿ 12 ಪ್ರಕರಣ ಪತ್ತೆಯಾಗಿವೆ.50ರಿಂದ 60 ವರ್ಷ ವಯೋಮಾನದ 43 ಮಂದಿಯಲ್ಲಿ ಗರ್ಭಕಂಠ ಕ್ಯಾನ್ಸರ್ ದೃಡಪಟ್ಟಿರುವುದು ಅತಂಕ ಮೂಡಿಸಿದೆ.

 ಬರಲಿದೆ ಗೃಹ ಆರೋಗ್ಯ: ರಾಜ್ಯ ಸರ್ಕಾರದ ಮತ್ತೊಂದು ವಿಶೇಷ ಆರೋಗ್ಯ ಯೋಜನೆಯಾದ ಗೃಹ ಆರೋಗ್ಯ ಯೋಜನೆ ಜಾರಿಯಾದಲ್ಲಿ ಕ್ಯಾನ್ಸರ್ ಕಾಯಿಲೆಯನ್ನು ಆರಂದಲ್ಲೇ ಪತ್ತೆ ಮಾಡಿ ಸೂಕ್ತ ಚಿಕಿತ್ಸೆ ಮೂಲಕ ರೋಗಿಯನ್ನು ಸಂಪೂರ್ಣವಾಗಿ ಗುಣಪಡಿಸಬಹುದು ಎಂಬುದು ಅಧಿಕಾರಿಗಳ ಅಭಿಪ್ರಾಯವಾಗಿದೆ. ಗೃಹ ಆರೋಗ್ಯ’ ಎನ್ನುವುದು ಜನ ಸಾಮಾನ್ಯರ ಮನೆ ಬಾಗಿಲಿಗೆ ಆರೋಗ್ಯ ಭಾಗ್ಯವನ್ನು ಕೊಂಡೊಯ್ಯುವ ಪ್ರಮುಖವಾದ ಯೋಜನೆ ಆಗಿದೆ. ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಅಸಾಂಕ್ರಾಮಿಕ ರೋಗಗಳನ್ನು ಗುರುತಿಸಿ ಮತ್ತು ನಿರಂತರ ಚಿಕಿತ್ಸೆಯಿಂದ ಮರಣದ ಪ್ರಮಾಣ ಕಡಿಮೆ ಮಾಡುವ ಗುರಿ ಹೊಂದಿರುವ ಯೋಜನೆ ಇದಾಗಿದೆ. ಮಾರ್ಚ್ ಆರಂಭದಲ್ಲಿ ಈ ಯೋಜನೆ ಜಾರಿಯಾಗುವ ಸೂಚನೆ ಇದೆ, ರಕ್ತದೊತ್ತಡ, ಮಧುಮೇಹ, ಕ್ಯಾನ್ಸರ್ ಸೇರಿ ಹಲವು ರೋಗಗಳ ತಪಾಸಣೆ ಹಾಗೂ ಚಿಕಿತ್ಸೆ ದೊರಕಿಸಿಕೊಡುವ ನಿಟ್ಟಿನಲ್ಲಿ ಇದು ಮಹತ್ವ ವಹಿಸಲಿದೆ ಆರೋಗ್ಯ ಸಿಬ್ಬಂದಿ ಮನೆ ಬಾಗಿಲಿಗೆ ತೆರಳಿ ಪ್ರತಿಯೊಬ್ಬರ ಆರೋಗ್ಯವನ್ನು ತಪಾಸಣೆ ನಡೆಸಲಿದ್ದಾರೆ ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ಅನೇಕ ಮಾದರಿಯ ಕ್ಯಾನ್ಸರ್ ರೋಗಿಗಳಿದ್ದು, ಇದರಲ್ಲಿ ಪ್ರಮುಖವಾಗಿ ಬಾಯಿ ಮತ್ತು ಗಂಟಲು ಕ್ಯಾನ್ಸರ್, ಮಹಿಳೆಯಲ್ಲಿ ಹೆಚ್ಚು ಕಂಡುಬರುವ ಸ್ತನಕ್ಯಾನ್ಸರ್ ಹಾಗೂ ಗರ್ಭಕಂಠ ಕ್ಯಾನ್ಸರ್ ರೋಗಿಗಳನ್ನು ಪತ್ತೆ ಮಾಡಲಾಗಿದೆ. ಆಸ್ಪತ್ರೆಗಳಲ್ಲಿ ಸ್ಕ್ರೀನಿಂಗ್ ಮೂಲಕ ರೋಗ ಲಕ್ಷಣ ಕಂಡುಬರುವ ವ್ಯಕ್ತಿಗಳನ್ನು ಶಂಕೆ ಆಧಾರದ ಮೇಲೆ ಕ್ಯಾನ್ಸರ್ ಆಸ್ಪತ್ರೆಗಳಿಗೆ ಕಳುಹಿಸಿಕೊಡಲಾಗುತ್ತವೆ ಎಲ್ಲವೂ ಕ್ಯಾನ್ಸರ್ ಆಗಿರುವುದಿಲ್ಲ ಈ ಬಗ್ಗೆ ಅನಗತ್ಯ ಭೀತಿ ಬೇಡ ಆದರೆ ಪ್ರಾಥಮಿಕ ಹಂತದಲ್ಲೇ ಪತ್ತೆಯಾದರೆ ಚಿಕಿತ್ಸೆಗೆ ಅನುಕೂಲವಾಗಲಿದೆ.

ಹೇಮಾವತಿ, ಸಂಯೋಜಕಿ ಜಿಲ್ಲಾ ಆರೋಗ್ಯ ಇಲಾಖೆ