ನವದೆಹಲಿಯ ರಾಜಭವನದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ಭೇಟಿ ಮಾಡಿದ ಡಾ.ಪ್ರಭಾಕರ ಕೋರೆ ಅವರು ಕೆಎಲ್‌ಇ ಕ್ಯಾನ್ಸರ್ ಆಸ್ಪತ್ರೆ ಉದ್ಘಾಟನೆಗೆ ಆಹ್ವಾನ ನೀಡಿದರು. ಸಚಿವ ಪ್ರಲ್ಹಾದ್ ಜೋಶಿ, ವಿಧಾನ ಪರಿಷತ್ ಮಾಜಿ ಮುಖ್ಯಸಚೇತಕ ಮಹಾಂತೇಶ್ ಕವಟಗಿಮಠ ಇದ್ದರು. 
ಜಿಲ್ಲೆ

ಕ್ಯಾನ್ಸರ್ ಆಸ್ಪತ್ರೆ ಉದ್ಘಾಟನೆಗೆ ರಾಷ್ಟ್ರಪತಿಗೆ ಆಹ್ವಾನ

ಬೆಳಗಾವಿ: ನಗರದಲ್ಲಿ ನೂತನವಾಗಿ ನಿರ್ಮಾಣಗೊಂಡಿರುವ ಕೆಎಲ್ಇ ಸಂಸ್ಥೆಯ ಕ್ಯಾನ್ಸರ್ ಆಸ್ಪತ್ರೆ ಉದ್ಘಾಟನೆ ಕಾರ್ಯಕ್ರಮದ ಅಂಗವಾಗಿ ಕೆಎಲ್ಇ ಸಂಸ್ಥೆಯ ಕಾರ್ಯಾಧ್ಯಕ್ಷ ಡಾ.ಪ್ರಭಾಕರ ಕೋರೆ ಅವರು ಶುಕ್ರವಾರ ರಾಜಭವನದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ಭೇಟಿ ಮಾಡಿ ಆಮಂತ್ರಣ ನೀಡಿದರು.

ಈಗಾಗಲೆ ಆರೋಗ್ಯ ಕ್ಷೇತ್ರದಲ್ಲಿ ಗುಣಮಟ್ಟದ ಸೇವೆ ಮೂಲಕ ಗುರುತಿಸಿಕೊಂಡಿರುವ ಕೆಎಲ್‌ಇ ಸಂಸ್ಥೆ ಸಮಾಜಕ್ಕೆ ಮಾರಕವಾಗಿ ಕಾಡುತ್ತಿರುವ ಕ್ಯಾನ್ಸರ್ ರೋಗಕ್ಕೂ ಚಿಕಿತ್ಸೆ ನೀಡುವ ನಿಟ್ಟಿನಲ್ಲಿ ಅತ್ಯಾಧುನಿಕ ಸೌಲಭ್ಯ ಹೊಂದಿರುವ 300 ಹಾಸಿಗೆಯ ಕ್ಯಾನ್ಸರ್ ಆಸ್ಪತ್ರೆ ನಿರ್ಮಾಣದ ಮೂಲಕ ಮತ್ತೊಂದು ದಿಟ್ಟ ಹೆಜ್ಜೆ ಇಟ್ಟಿದೆ. ಈ ಮೂಲಕ ಕ್ಯಾನ್ಸರ್ ರೋಗಿಗಳ ಪಾಲಿಗೆ ಬೆಳಕಾಗಲಿರುವ ಕೆಎಲ್‌ಇ ಕ್ಯಾನ್ಸರ್ ಆಸ್ಪತ್ರೆಯನ್ನು ರಾಷ್ಟ್ರಪತಿಗಳು ಲೋಕಾರ್ಪಣೆಗೊಳಿಸಬೇಕು ಎಂದು ವಿನಂತಿಸಿದರು.

ಡಾ.ಪ್ರಭಾಕರ ಕೋರೆ ಅವರ ಆಮಂತ್ರಣಕ್ಕೆ ಸ್ಪಂದಿಸಿದ ರಾಷ್ಟ್ರಪತಿ ದ್ರೌಪದಿ ಮುರ್ಮು, ಕೆಎಲ್‌ಇ ಸಂಸ್ಥೆಯ ಮೌಲಿಕ ಸಾಮಾಜಿಕ ಸೇವೆ ಮತ್ತು ಕೈಂಕರ್ಯವನ್ನು ಅಭಿನಂದಿಸಿ, ಆಗಸ್ಟ್ ಕೊನೆಯ ವಾರದಲ್ಲಿ ದಿನಾಂಕ ಸೂಚಿಸುವುದಾಗಿ ತಿಳಿಸಿದರು. ಈ ಸಂದರ್ಭದಲ್ಲಿ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ, ವಿಧಾನ ಪರಿಷತ್ ಮಾಜಿ ಮುಖ್ಯಸಚೇತಕ ಮಹಾಂತೇಶ್ ಕವಟಗಿಮಠ ಇದ್ದರು.